ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತಮ ಮಳೆ: ಹಮ್ಮಿಗಿ ಬ್ಯಾರೇಜ್ ಭರ್ತಿ

ತುಂಬಿ ಹರಿಯುತ್ತಿರುವ ತುಂಗಭದ್ರೆ: ಸದ್ಯಕ್ಕಿಲ್ಲ ಪ್ರವಾಹ ಭೀತಿ
ಕಾಶೀನಾಥ ಬಿಳಿಮಗ್ಗದ
Published : 2 ಆಗಸ್ಟ್ 2024, 6:23 IST
Last Updated : 2 ಆಗಸ್ಟ್ 2024, 6:23 IST
ಫಾಲೋ ಮಾಡಿ
Comments

ಮುಂಡರಗಿ: ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ತುಂಗಾ ಮತ್ತು ಭದ್ರಾ ನದಿಗಳಿಂದ ನಿತ್ಯ ಹೊರ ಹರಿಯುತ್ತಿರುವ ಅಪಾರ ಪ್ರಮಾಣದ ನೀರಿನ ಕಾರಣದಿಂದಾಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿದೆ.

ಗುರುವಾರ ಹಮ್ಮಿಗಿ ಬ್ಯಾರೇಜಿಗೆ ತುಂಗಾ, ಭದ್ರಾ ಹಾಗೂ ವಿವಿಧ ಜಲಮೂಲಗಳಿಂದ ಒಟ್ಟು 1,99,211 ಕ್ಯುಸೆಕ್ ನೀರು ಹರಿದು ಬಂದಿದೆ. ಅಷ್ಟೆ ಪ್ರಮಾಣದ ನೀರನ್ನು ಬ್ಯಾರೇಜಿನ 18 ಗೇಟುಗಳ ಮೂಲಕ ಹೊರಬಿಡಲಾಗುತ್ತಿದೆ. ಇದು ಕಳೆದ ಎರಡು–ಮೂರು ವರ್ಷಗಳಲ್ಲಿ ತುಂಗಭದ್ರಾ ನದಿಗೆ ಹರಿದು ಬಂದಿರುವ ಗರಿಷ್ಠ ಪ್ರಮಾಣದ ನೀರು. ಕಳೆದ ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ನದಿಗೆ ಗರಿಷ್ಠ 1,45,000 ಕ್ಯುಸೆಕ್ ನೀರು ಹರಿದು ಬಂದಿತ್ತು.

ಬ್ಯಾರೇಜಿನಿಂದ ಅಪಾರ ಪ್ರಮಾಣದ ನೀರನ್ನು ನಿತ್ಯ ಹೊರಬಿಡುತ್ತಿರುವುದರಿಂದ ತಾಲ್ಲೂಕಿನ ಸಿಂಗಟಾಲೂರ, ಶೀರನಹಳ್ಳಿ, ಕೊರ್ಲಹಳ್ಳಿ, ಕಕ್ಕೂರು, ಕಕ್ಕೂರುತಾಂಡಾ, ಹೆಸರೂರು ಮೊದಲಾದ ಗ್ರಾಮಗಳ ಮುಂದೆ ತುಂಗಭದ್ರೆಯು ಈಗ ಉಕ್ಕಿ ಹರಿಯುತ್ತಿದ್ದಾಳೆ. ನದಿ ದಂಡೆಗಳ ಗ್ರಾಮಸ್ಥರು ಹರ್ಷಗೊಂಡಿದ್ದಾರೆ.

ಹಮ್ಮಿಗಿ ಬ್ಯಾರೇಜಿನಲ್ಲಿ ಗರಿಷ್ಠ 3 ಟಿಎಂಸಿ ಅಡಿ ನೀರನ್ನು ಸಂಗ್ರಹಸಬಹುದು. ಆದರೆ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಗುಮ್ಮಗೋಳ, ಬಿದರಳ್ಳಿ ಹಾಗೂ ವಿಠಲಾಪೂರ ಗ್ರಾಮಗಳ ಸ್ಥಳಾಂತರ ಪ್ರಕ್ರಿಯೆ ಸಮರ್ಪಕವಾಗಿ ಆಗದೆ ಇರುವುದರಿಂದ ಅಷ್ಟು ಪ್ರಮಾಣದ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಈಗ ಕೇವಲ 1.9 ಟಿಎಂಸಿ ಅಡಿ ನೀರನ್ನು ಮಾತ್ರ ಸಂಗ್ರಹಸಲಾಗುತ್ತದೆ.

ತುಂಗಭದ್ರಾ ನದಿಗೆ ನಿತ್ಯ 2.50 ಲಕ್ಷ ಕ್ಯುಸೆಕ್ ನೀರು ಹರಿದು ಬಂದರೆ ಮಾತ್ರ ಪ್ರವಾಹ ತಲೆದೋರುವ ಸಾಧ್ಯತೆ ಇದೆ. ಸದ್ಯಕ್ಕೆ ಅಂತಹ ಅಪಾಯ ಇಲ್ಲ.
–ಪ್ರಕಾಶ ಐಗೋಳ, ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ

ಕೆರೆ ತುಂಬುವ ಯೋಜನೆಗೆ ಚಾಲನೆ

ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ನದಿ ಮೂಲಕ ಹರಿದುಹೋಗುವ ಅಪಾರ ಪ್ರಮಾಣದ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಪ್ರತಿವರ್ಷ ತುಂಗಭದ್ರಾ ನದಿ ನೀರಿನಿಂದ ಗದುಗಿನ ಭೀಷ್ಮ ಕೆರೆ ಲಕ್ಕುಂಡಿ ಕೆರೆ ಮುಂಡರಗಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕುಗಳ ವಿವಿಧ ಕೆರೆಗಳನ್ನು ತುಂಬಿಸಲಾಗುತ್ತಿದೆ. ಈಗಾಗಲೇ ಕೆರೆತುಂಬುವ ಯೋಜನೆಗೆ ಚಾಲನೆ ನೀಡಲಾಗಿದ್ದು ಹಲವು ಕೆರೆಗಳು ಶೀಘ್ರವೇ ಭರ್ತಿಯಾಗಲಿವೆ.

‘ತಾಲ್ಲೂಕಿನ ಡಂಬಳ ಜಂತ್ಲಿ-ಶಿರೂರ ಪೇಠಾಲೂರ ಮೊದಲಾದ ಗ್ರಾಮಗಳ ಕೆರೆಗಳು ಹಾಗೂ ಗದುಗಿನ ಭೀಷ್ಮ ಕೆರೆಗಳಿಗೆ ಈಗಾಗಲೇ ತುಂಗಭದ್ರಾ ನದಿಯ ನೀರನ್ನು ಹರಿಸಲಾಗುತ್ತಿದೆ. ಹಂತ ಹಂತವಾಗಿ ಎಲ್ಲ ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ಪ್ರಕಾಶ ಐಗೋಳ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT