ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ–ಕಾಲೇಜುಗಳಲ್ಲೂ ವಿಜಯ ದಿವಸ ಆಚರಿಸಲಿ: ಬಸಲಿಂಗಪ್ಪ ಮುಂಡರಗಿ

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಹೇಳಿಕೆ
Published 26 ಜುಲೈ 2024, 15:24 IST
Last Updated 26 ಜುಲೈ 2024, 15:24 IST
ಅಕ್ಷರ ಗಾತ್ರ

ಗದಗ: ‘ಯುವಕರಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಕಾರ್ಗಿಲ್ ವಿಜಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಹೇಳಿದರು.

ನಗರದ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಡೆದ ‘ಕಾರ್ಗಿಲ್ ವಿಜಯೋತ್ಸವ’ದ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸತತ 85 ದಿನಗಳ ಹೋರಾಟದ ಫಲವಾಗಿ ಜಯ ಸಾಧಿಸಿ ಸಂತಸ ಹಾಗೂ ದುಃಖ ಎರಡನ್ನು ಸಮ್ಮಿಳಿತ ಮಾಡಿಕೊಂಡು ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಕಾರ್ಗಿಲ್ ವಿಜಯೋತ್ಸವವನ್ನು ಶಾಲಾ-ಕಾಲೇಜುಗಳಲ್ಲಿ ಆಚರಿಸುವಂತಾಗಬೇಕು. ಇದು ಸರ್ಕಾರದ ಕಾರ್ಯಕ್ರಮವಾಗಬೇಕು’ ಎಂದು ಆಶಿಸಿದರು.

ಸಾನ್ನಿಧ್ಯ ವಹಿಸಿದ್ದ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ ಮಾತನಾಡಿ, ‘ದೇಶ ರಕ್ಷಣೆಗೆ ಪ್ರಾಣ ಒತ್ತೆ ಇಟ್ಟು ಹೋರಾಡುವ ಸೈನಿಕರ ಕುಟುಂಬ ಮತ್ತು ಸೇವೆಯಿಂದ ಮರಳಿದ ಮಾಜಿ ಸೈನಿಕರಿಗೆ ಸರ್ಕಾರ ನೀಡಬೇಕಿರುವ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಬೇಕು’ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ‘ಕಾರ್ಗಿಲ್ ವಿಜಯ ದಿವಸವನ್ನು ಸರ್ಕಾರದಿಂದ ಅಧಿಕೃತವಾಗಿ ಆಚರಿಸುವಂತಾಗಬೇಕು. ಈ ಮೂಲಕ ದೇಶದ ಸೈನಿಕರಿಗೆ ಗೌರವ ನೀಡಬೇಕು. ಜತೆಗೆ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ‘ಸ್ಮಾರಕ ಸ್ತಂಭ’ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

ಬಳಿಕ ಭಾರತ ಚೀನಾ ಯುದ್ಧ, ಇಂಡೋ-ಪಾಕ್ ಯುದ್ಧ ಹಾಗೂ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.

ಪ್ರಭುಗೌಡ ಪಾಟೀಲ, ಮಲ್ಲಪ್ಪ ಬ್ಯಾಳಿ, ಮಂಜುನಾಥ ಮುಳಗುಂದ, ಶಿವಪುತ್ರಪ್ಪ ಸಂಗನಾಳ, ದೇವಪ್ಪ ಡಂಬಳ ಹಾಗೂ ವೀರನಾರಿಯರಾದ ಇಂದಿರಾ ಹೆಬಸೂರ, ನಿರ್ಮಲಾ ಹಿರೇಮಠ, ಎನ್‌ಸಿಸಿ ಅಧಿಕಾರಿಗಳು, ಕೆಡೆಟ್‌ಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು. ಶೋಭಾ ಹಿರೇಮಠ ಸ್ವಾಗತಿಸಿದರು. ವಿಶ್ವನಾಥ ಕಮ್ಮಾರ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ 25ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಗರದ ಕಿತ್ತೂರು ಚನ್ನಮ್ಮ ವೃತ್ತದಿಂದ ಮುಳಗುಂದ ನಾಕಾ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಭೂಮರಡ್ಡಿ ವೃತ್ತ ಮಾರ್ಗವಾಗಿ ಕೆ.ಎಚ್. ಪಾಟೀಲ ಸಭಾಭವನದವರೆಗೆ ಮಾಜಿ ಸೈನಿಕರು, ಎನ್‌ಸಿಸಿ ಅಧಿಕಾರಿಗಳು, ಕೆಡೆಟ್‌ಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

ಭಾರತೀಯ ಸೇನೆ ಬಲಿಷ್ಠ: ಕಿಶನ್‌

‘ಭಾರತ ದೇಶ ರಕ್ಷಣಾ ಕ್ಷೇತ್ರದಲ್ಲಿ ಇಂದು ಬಲಿಷ್ಠವಾಗಿದ್ದು ಜಗತ್ತಿನ ಪ್ರಮುಖ ರಾಷ್ಟ್ರಗಳ ಸೇನಾ ಸಂಪತ್ತಿಗೆ ಸರಿಸಾಟಿಯಾಗಿ ನಿಂತಿದೆ’ ಎಂದು ನಿವೃತ್ತ ಕರ್ನಲ್ ಕಿಶನ್ ಸಿರೋಹಿ ಹೇಳಿದರು.

1999ರ ಮೇ 3ರಂದು ಆರಂಭವಾದ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಯುದ್ಧಕ್ಕೆ ‘ಆಪರೇಷನ್ ವಿಜಯ್‌’ ಎಂದು ಹೆಸರಿಸಲಾಗಿತ್ತು. ಹೀಗಾಗಿಯೇ ಕಾರ್ಗಿಲ್ ಯುದ್ದ ಗೆದ್ದ ಬಳಿಕ ಅದಕ್ಕೆ ‘ಕಾರ್ಗಿಲ್ ವಿಜಯ ದಿವಸ್’ ಎಂದು ಆಚರಿಸಲಾಗುತ್ತಿದೆ. ಇದು ಭಾರತೀಯ ಸೈನ್ಯದ ಬಗ್ಗೆ ದೇಶವಾಸಿಗಳು ಗರ್ವ ಪಡುವ ವಿಷಯ ಎಂದು ಹೇಳಿದರು.

ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಅಧಿಕಾರಿಗಳು ಯೋಧರು ಸೇರಿ ಒಟ್ಟು 527 ಮಂದಿ ವೀರಮರಣವನ್ನಪ್ಪಿದ್ದಾರೆ. ಇದರೊಂದಿಗೆ ಯುದ್ಧದಲ್ಲಿ 1363 ಜನ ಅಂಗವೈಕಲ್ಯಕ್ಕೆ ತುತ್ತಾದರು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT