ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನರಗುಂದ | ಸಮಗ್ರ ಕೃಷಿ: ಉತ್ತಮ ಆದಾಯ

ಪದವೀಧರ, ಪ್ರಗತಿಪರ ರೈತ ಕೊಣ್ಣೂರಿನ ಮುತ್ತಪ್ಪ ಯಲಿಗಾರ
Published : 20 ಸೆಪ್ಟೆಂಬರ್ 2024, 5:48 IST
Last Updated : 20 ಸೆಪ್ಟೆಂಬರ್ 2024, 5:48 IST
ಫಾಲೋ ಮಾಡಿ
Comments

ನರಗುಂದ: ಕೃಷಿಯಿಂದ ವಿಮುಖವಾಗುತ್ತಿರುವ ಪದವೀಧರರ ನಡುವೆ, ಕಲಾ ವಿಭಾಗದಲ್ಲಿ ಪದವಿ ಪಡೆದ ನರಗುಂದ ತಾಲ್ಲೂಕಿನ ಕೊಣ್ಣೂರಿನ ಮುತ್ತಪ್ಪ ಮಲ್ಲಪ್ಪ ಯಲಿಗಾರ 20ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಪದ್ದತಿ ಮಾಡಿ ಆರ್ಥಿಕ ಸ್ವಾವಲಂಬಿಯಾಗಿದ್ದಾರೆ.‌

ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ, ಆಹಾರ ಬೆಳೆ ಹಾಗೂ ತರಕಾರಿ,ಹಣ್ಣುಗಳನ್ನು ಬೆಳೆಯುವುದರ ಮೂಲಕ ಮಾದರಿಯಾಗಿದ್ದಾರೆ.

ನೀರಾವರಿ ಹಾಗೂ ಖುಷ್ಕಿ ಭೂಮಿ ಹೊಂದಿರುವ ಮುತ್ತಪ್ಪ ಅವರಿಗೆ ಮಲಪ್ರಭಾ ಕಾಲುವೆ ಹಾಗೂ ಕೃಷಿ ಭಾಗ್ಯದ ಮೂಲಕ ನಿರ್ಮಿಸಿಕೊಂಡ ಬೃಹತ್ ಕೃಷಿ ಹೊಂಡಗಳೇ ವರದಾನವಾಗಿವೆ. ಮಳೆ ಇಲ್ಲದಿದ್ದಾಗ ಕೃಷಿ ಹೊಂಡಗಳಿಂದ ಉತ್ತಮ ಫಸಲು ಪಡೆಯುತ್ತಿದ್ದಾರೆ.

ಎರಡು ಎಕರೆ ಭೂಮಿಯಲ್ಲಿ ಪೇರಲ ತೋಟ ನಿರ್ಮಿಸಿಕೊಂಡಿದ್ದು, ನಿತ್ಯ ಮಾರುಕಟ್ಟೆಗೆ ಪೇರಲ ರಫ್ತಾಗುತ್ತಿದ್ದು ಕೈ ತುಂಬ ಆದಾಯ ಗಳಿಸುತ್ತಿರುವ ಇವರು ಒಂದು ಎಕರೆಗೆ ಒಂದು ವರ್ಷಕ್ಕೆ ₹ 5 ಲಕ್ಷ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಬೇಡಿಕೆ ಇರುವ ಬೆಳೆಯೂ ಹೌದು ಎನ್ನುತ್ತಾರೆ ಅವರು.

200 ಮಹಾ ಗಣಿ, 115 ತೆಂಗು, 120 ಚೆರ‍್ರಿ, 20 ಶ್ರೀಗಂಧ ಗಿಡಗಳ ಜೊತೆಗೆ ಪಪ್ಪಾಯಿ, ಚಿಕ್ಕು, ನೇರಲೆ ಸೇರಿದಂತೆ ವಿವಿಧ ದೀರ್ಘಾವಧಿ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಪ್ರಮುಖ ವಾಣಿಜ್ಯ ಬೆಳೆಗಳಾದ ಗೋವಿನಜೋಳ, ಗೋಧಿ, ಕಡಲೆ, ಸೂರ್ಯಕಾಂತಿ ಸೇರಿದಂತೆ ಎಲ್ದ ರೀತಿಯ ಬೆಳೆ ಬೆಳೆದು ವರ್ಷಕ್ಕೆ ಈ ಬೆಳೆಗಳಿಂದ ಸರಾಸರಿ ₹10ಲಕ್ಷದವರೆಗೂ ಆದಾಯ ಗಳಿಸುತ್ತಿದ್ದಾರೆ.

ಕೋಳಿ ಸಾಕಾಣಿಕೆ: ಕೃಷಿ ಒಮ್ಮೊಮ್ಮೆ ನಷ್ಟಕ್ಕೂ ದೂಡುತ್ತದೆ. ಅದರಿಂದ ಪಾರಾಗಲು ಕೃಷಿ ಜೊತೆ ಉಪಕಸುಬು ಅಳವಡಿಸಿಕೊಳ್ಳುವುದು ಮುಖ್ಯ ಎನ್ನುವ ಯಲಿಗಾರ ಸ್ವಂತ ಕೋಳಿ ಫಾರ್ಮ್‌ ಹೊಂದಿದ್ದಾರೆ. ಒಂದು ಹಂತಕ್ಕೆ 6ಸಾವಿರಕ್ಕೂ ಹೆಚ್ಚು ಕೋಳಿ ಮಾರುವ ಇವರು ವರ್ಷದಲ್ಲಿ ಐದು ಹಂತದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಾರೆ. ಈ ಮೂಲಕ ವಾರ್ಷಿಕ ₹5ಲಕ್ಷ ಲಾಭ ಪಡೆಯುತ್ತಿದ್ದಾರೆ.

‘ಕೃಷಿ ಎಂದರೆ ತಾತ್ಸಾರ ಬೇಡ. ಪದವಿ ಪಡೆದ ತಕ್ಷಣ ನೌಕರಿ ಎಂದು ಬೆನ್ನು ಹತ್ತುವ ಬದಲು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಕಾರ್ಮಿಕರ ಸಮಸ್ಯೆ ಇದೆ ಆದರೆ ಶ್ರಮ ಪಟ್ಟು ದುಡಿದು, ಸಮಸ್ಯೆ ಬಗೆಹರಿಸಿದರೆ ಲಕ್ಷಾಂತರ ಆದಾಯ ಗಳಿಸಬಹುದು’ ಎನ್ನುತ್ತಾರೆ ರೈತ ಮುತ್ತಪ್ಪ ಯಲಿಗಾರ.

ನರಗುಂದ ತಾಲ್ಲೂಕಿನ ಕೊಣ್ಣೂರಿನ ಮುತ್ತಪ್ಪ ಯಲಿಗಾರ ಪೇರಲ ತೋಟದೊಂದಿಗೆ
ನರಗುಂದ ತಾಲ್ಲೂಕಿನ ಕೊಣ್ಣೂರಿನ ಮುತ್ತಪ್ಪ ಯಲಿಗಾರ ಪೇರಲ ತೋಟದೊಂದಿಗೆ
ಮುತ್ತಪ್ಪ ಯಲಿಗಾರ ಪದವೀಧರರಾದರೂ ಸಮಗ್ರ ಕೃಷಿಯೊಂದಿಗೆ ಪ್ರಗತಿಪರ ರೈತರಾಗಿದ್ದಾರೆ. ಅವರ ಶ್ರಮದ ಕೃಷಿ ಸಾಧನೆ ಎಲ್ಲ ರೈತರಿಗೂ ಮಾದರಿ
ಮಂಜುನಾಥ ಜನಮಟ್ಟಿ ಕೃಷಿ ಸಹಾಯಕ ನಿರ್ದೇಶಕರು ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT