ಭಾನುವಾರ, 30 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದೇ ಮಳೆಗೆ ಕುಸಿದ ಬೆಂಗಳೂರು–ಮಂಗಳೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ‌

Published 27 ಜೂನ್ 2024, 13:59 IST
Last Updated 28 ಜೂನ್ 2024, 3:24 IST
ಅಕ್ಷರ ಗಾತ್ರ

ಸಕಲೇಶಪುರ : ಹಾಸನ–ಬಂಟ್ವಾಳ ನಡುವೆ ನಡೆಯುತ್ತಿರುವ ಬೆಂಗಳೂರು–ಮಂಗಳೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ಆನೆಮಹಲ್ ಗ್ರಾಮದಲ್ಲಿ ಗುರುವಾರ ಸುರಿದ ಒಂದೇ ಮಳೆಗೆ ಕುಸಿದಿದೆ.

ಸಕಲೇಶಪುರ ಬೈಪಾಸ್‌ ಟೋಲ್‌ಗೇಟ್‌ನಿಂದ ಮಾರನಹಳ್ಳಿವರೆಗೆ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದ್ದು, ಗ್ರಾಮದಲ್ಲಿ ಕಾಂಕ್ರಿಟ್‌ ರಸ್ತೆಯ ಕೆಳಗೆ ಅಳವಡಿಸಿರುವ ಮೋರಿಯ ಪೈಪ್‌ ತುಂಡಾಗಿ ರಸ್ತೆಯ ಒಂದು ಬದಿ ಕುಸಿದಿದೆ. ಮತ್ತೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಲಿಲ್ಲ.

‘ರಸ್ತೆಯ ಕೆಳಭಾಗದಲ್ಲಿ ಅಳವಡಿಸಿರುವ ಚರಂಡಿಯ ಪೈಪುಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲ’ ಎಂದು ಗ್ರಾಮದ ಭಾಸ್ಕರ್, ಹಸೈನಾರ್ ಅವರು ಕಾಮಗಾರಿ ಸಂದರ್ಭದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂಜಿನಿಯರ್‌ಗಳು ಅದನ್ನುಗಂಭೀರವಾಗಿ ಪರಿಗಣಿಸದೆ ಕಳಪೆ ಕಾಮಗಾರಿ ಮಾಡಿದ್ದೇ ಕುಸಿಯಲು ಕಾರಣ’ ಎಂದು ಗ್ರಾಮಸ್ಥರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಶಾಸಕ ಭೇಟಿ: ಸ್ಥಳಕ್ಕೆ ಗುರುವಾರ ಸಂಜೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪರಿಶೀಲಿಸಿದರು.

‘ಹಾಸನದಿಂದ ಮಾರನಹಳ್ಳಿವರೆಗೆ ಹೆದ್ದಾರಿ ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿಲ್ಲ ಎಂದು ಗುತ್ತಿಗೆದಾರರಿಗೆ ಹಾಗೂ ಎಂಜಿನಿಯರ್‌ಗಳಿಗೆ ಹಲವು ಬಾರಿ ಹೇಳಿದ್ದೆ. ನಿತ್ಯ 30 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುವ ಹೆದ್ದಾರಿಯು ಕುಸಿದರೆ ಆಗುವ ಅನಾಹುತವನ್ನು ಊಹಿಸಲೂ ಸಾಧ್ಯವಿಲ್ಲ’ ಎಂದರು.

‘ಎಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಇಂತಹ ಸಮಸ್ಯೆಗಳಾಗದಂತೆ ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT