ದೇವಿಯ ವಿಶೇಷತೆ ಎಂದರೆ ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದೇಗುಲದ ಬಾಗಿಲು 7 ದಿನಗಳಿಗಿಂತ ಕಡಿಮೆ ಮತ್ತು 16 ದಿನಗಳಿಗಿಂತ ಹೆಚ್ಚು ತೆರೆಯುವುದಿಲ್ಲ. ದೇವಿಯ ಎದುರು ಪ್ರಾಣಿಬಲಿಗೆ ಅವಕಾಶ ಇಲ್ಲದ ಕಾರಣ ಬಾಗಿಲು ತೆಗೆಯುವ ಸಂದರ್ಭದಲ್ಲಿ ಬಾಳೆ ಕಂದು ಕಡಿದು ಶಾಂತಿ ಮಾಡಲಾಗುತ್ತದೆ. ವರ್ಷವಿಡೀ ಬಾಗಿಲ ಮರೆಯಲ್ಲಿ ಇರುವ ದೇವಿ ಒಮ್ಮೆಲೆ ಬೀರಿದ ದೃಷ್ಟಿ ಪ್ರಳಯ ತರಿಸುವಷ್ಟು ಕ್ರೂರವಾಗಿರಲಿದೆ ಎನ್ನುವುದು ಪ್ರತೀತಿ. ಹೀಗಾಗಿ ಭಕ್ತರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಬಾಳೆ ಕಂಬ ಕಡಿಯಲಾಗುತ್ತದೆ. ಬಾಗಿಲು ತೆರೆಯುತ್ತಿದ್ದಂತೆಯೇ ದೇವಿಯ ದೃಷ್ಟಿ ಬಾಳೆ ಕಂಬದ ಮೇಲೆ ಬೀಳುವುದರಿಂದ ದೃಷ್ಟಿಯ ತೀಕ್ಷ್ಣತೆ ಕಡಿಮೆಯಾಗಲಿದೆ ಎನ್ನುವ ನಂಬಿಕೆ ಹಿಂದಿನಿಂದಲೂ ಇದೆ. ಇನ್ನೊಂದು ವಿಶೇಷವೆಂದರೆ ಕಳೆದ ವರ್ಷ ಬಾಗಿಲು ಮುಚ್ಚುವಾಗ ದೇವಿಯ ಎದುರು ಇಟ್ಟ ಹೂ ಮಾರನೇ ವರ್ಷ ಬಾಗಿಲು ತೆರೆದಾಗ ಹಾಗೆಯೇ ಇರುತ್ತದೆ. ಹಚ್ಚಿಟ್ಟ ದೀಪ ಉರಿಯುತ್ತಿರುತ್ತದೆ. ನೈವೇದ್ಯವೂ ಹಾಗೇ ಇರುತ್ತದೆ.