ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ದೌರ್ಜನ್ಯ: ಸೂರಜ್ ರೇವಣ್ಣ ಮೇಲೂ ಆರೋಪ

Published : 21 ಜೂನ್ 2024, 15:59 IST
Last Updated : 21 ಜೂನ್ 2024, 15:59 IST
ಫಾಲೋ ಮಾಡಿ
Comments

ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ತನಿಖೆ ನಡೆಯುತ್ತಿರುವಾಗಲೇ, ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧವೂ ಇಂಥದ್ದೇ ಆರೋಪ ಕೇಳಿಬಂದಿದೆ.

‘ನನ್ನ ಮೇಲೆ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಅರಕಲಗೂಡು ಜೆಡಿಎಸ್ ಕಾರ್ಯಕರ್ತ ಎನ್ನಲಾದ ವ್ಯಕ್ತಿ, ಬೆಂಗಳೂರಿನಲ್ಲಿ ಪೊಲೀಸ್‌ ಮಹಾನಿರ್ದೇಶಕರು, ಗೃಹ ಸಚಿವರಿಗೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ಬಗ್ಗೆ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಇದಕ್ಕೆ ಪ್ರತಿಯಾಗಿ, ಆರೋಪ ಮಾಡಿರುವ ವ್ಯಕ್ತಿಯ ವಿರುದ್ಧ ಹೊಳೆನರಸೀಪುರ ನಗರ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ. ‘₹5 ಕೋಟಿಗೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ, ಲೈಂಗಿಕ ದೌರ್ಜನ್ಯದ ಆರೋಪ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ’ ಎಂದು ಸೂರಜ್‌ ಬ್ರಿಗೇಡ್‌ನ ಖಜಾಂಚಿ ಶಿವಕುಮಾರ್‌ ಎಚ್‌.ಎಲ್‌. ಎಂಬುವವರು ದೂರಿನಲ್ಲಿ ಆರೋಪಿಸಿದ್ದಾರೆ.

‘ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಈ ವ್ಯಕ್ತಿ ಪರಿಚಿತನಾಗಿದ್ದ. ನಾನು ಸೂರಜ್‌ ಬ್ರಿಗೇಡ್ ಖಜಾಂಚಿ ಆಗಿರುವುದರಿಂದ, ಸೂರಜ್‌ ಅವರನ್ನು ಭೇಟಿ ಮಾಡಿಸುವಂತೆ ಕೇಳಿದ್ದ. ಅದರಂತೆ ಜೂನ್‌ 16ರಂದು ಸೂರಜ್‌ ಅವರು ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಗಡದ ತೋಟದ ಮನೆಯಲ್ಲಿ ಸಿಗುತ್ತಾರೆ ಎಂದು ತಿಳಿಸಿದ್ದೆ’ ಎಂದು ವಿವರಿಸಿದ್ದಾರೆ.

‘ಅಂದು ಸೂರಜ್ ಅವರನ್ನು ಭೇಟಿ ಮಾಡಿದ್ದು, ಕೆಲಸ ಕೊಡಿಸಿ ಎಂದು ಕೇಳಿದ್ದೆ. ಆದರೆ, ಸೂರಜ್‌ ಈಗ ಸಾಧ್ಯವಿಲ್ಲ ಮುಂದೆ ನೋಡೋಣ ಎಂದಿದ್ದಾರೆ ಎಂದು ಆ ವ್ಯಕ್ತಿ ತಿಳಿಸಿದ್ದ. ಈಗ ನೀನೂ ಸಹಾಯ ಮಾಡದಿದ್ದರೆ, ಸೂರಜ್‌ ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡುವುದಾಗಿ ಬೆದರಿಕೆ ಹಾಕಿದ್ದ’ ಎಂದು ಶಿವಕುಮಾರ್‌ ಆರೋಪಿಸಿದ್ದಾರೆ.

‘ನಾನು ಹೊರಗಡೆ ಹೇಳಬಾರದು ಎಂದರೆ, ₹5 ಕೋಟಿ ಕೊಡಿಸು. ಇಲ್ಲದಿದ್ದರೆ, ಆಸ್ಪತ್ರೆಗೆ ದಾಖಲಾಗಿ ಸುಳ್ಳು (ಮೆಡಿಕೋ ಲೀಗಲ್) ವರದಿ ಮಾಡಿಸಿ, ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ’ ಎಂದು ದೂರಿದ್ದಾರೆ.

‘ಈ ಬಗ್ಗೆ ಸೂರಜ್‌ ಅವರನ್ನು ವಿಚಾರಿಸಿದ್ದು, ಅವರು ಆರೋಪ ನಿರಾಕರಿಸಿದ್ದರು. ಜೂನ್‌ 18ರಂದು ಮತ್ತೆ ಹಾಸನದ ಹಿಮ್ಸ್‌ ಆಸ್ಪತ್ರೆ ಬಳಿ ಕರೆಸಿಕೊಂಡ ವ್ಯಕ್ತಿ, ₹5 ಕೋಟಿ ಕೊಡಲಾಗದಿದ್ದರೆ, ₹3 ಕೋಟಿಯಾದರೂ ಕೊಡಿಸು. ಕೇಸ್‌ ಮಾಡಲು ದೊಡ್ಡಮಟ್ಟದಲ್ಲಿ ₹1 ಕೋಟಿ ಅಡ್ವಾನ್ಸ್‌ ಕೊಡಿಸಲು ಸಿದ್ಧರಿದ್ದಾರೆ. ಕೊನೆಯ ಪಕ್ಷ ₹2.5 ಕೋಟಿಯಾದರೂ ಕೊಡಿಸು ಎಂದು ಬೇಡಿಕೆ ಇಟ್ಟಿದ್ದ. ಆ ವ್ಯಕ್ತಿಯ ಭಾವ ಕೂಡ ಕರೆ ಮಾಡಿ, ₹2 ಕೋಟಿಯಾದರೂ ಕೊಡಿಸು ಎಂದು ಬೇಡಿಕೆ ಇಟ್ಟಿದ್ದ’ ಎಂದು ತಿಳಿಸಿದ್ದಾರೆ.

‘ಜೂನ್‌ 19ರಂದು ಮತ್ತೆ ಕರೆ ಮಾಡಿದ ಆ ವ್ಯಕ್ತಿ, ಇದುವರೆಗೆ ದುಡ್ಡು ಕೊಡಿಸಿಲ್ಲ. ದುಡ್ಡು ಕೊಡದಿದ್ದರೆ, ಸೂರಜ್‌ ಹಾಗೂ ನಿನ್ನ ವಿರುದ್ಧ ದೂರು ಕೊಡುತ್ತೇನೆ. ಬೆಂಗಳೂರಿಗೆ ಹೋಗಿ ಪತ್ರಿಕಾಗೋಷ್ಠಿ ಮಾಡುತ್ತೇನೆ ಎಂದು ಹೆದರಿಸಿದ್ದ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ದೂರು ದಾಖಲಿಸುವುದಾಗಿ ಹೆದರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆ ವ್ಯಕ್ತಿ ಹಾಗೂ ಆತನ ಭಾವನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT