ಸೋಮವಾರ, 8 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಸೀಕೆರೆ | ಮಾಲೇಕಲ್‌ ಚಿಕ್ಕ ತಿರುಪತಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ನನೆಗುದಿಗೆ

ದಲ್ಲಿ ಸೌಕರ್ಯಗಳಿಗಾಗಿ ಕಾದಿರುವ ಜನರು
ಪೂಜಾರು ರಮೇಶ್‌
Published 5 ಜುಲೈ 2024, 6:57 IST
Last Updated 5 ಜುಲೈ 2024, 6:57 IST
ಅಕ್ಷರ ಗಾತ್ರ

ಅರಸೀಕೆರೆ: ರಾಜ್ಯದ ಚಿಕ್ಕ ತಿರುಪತಿ ಎಂದೇ ಹೆಸರುವಾಸಿ ಆಗಿರುವ ತಾಲ್ಲೂಕಿನ ಮಾಲೇಕಲ್‌ ತಿರುಪತಿ ರಾಜಗೋಪುರ ಮತ್ತು ಯಾತ್ರಿ ನಿವಾಸ್‌ ನಿರ್ಮಾಣವಾಗಿ 5 ವರ್ಷ ಕಳೆದರೂ ಉದ್ಘಾಟನೆಯಾಗದೇ ನನೆಗುದಿಗೆ ಬಿದ್ದಿದ್ದು, ಭಕ್ತರಲ್ಲಿ ಬೇಸರ ಮೂಡಿಸಿದೆ.

ಕಳೆದ ವರ್ಷ ರಥೋತ್ಸವದ ವೇಳೆ ತೇರಿನ ಕಳಸ ಪೊಲೀಸ್‌ ಸಿಬ್ಬಂದಿ ಮೇಲೆ ಬಿದ್ದಿತ್ತು. ರಾಜಗೋಪುರ ನಿರ್ಮಾಣವಾದರೂ ಲೋಕಾರ್ಪಣೆ ಆಗದೇ ಇರುವುದು, ಗೋಪುರಕ್ಕೆ ಕಳಸಗಳು ಹಾಕದೇ ಇರುವುದು ಇದಕ್ಕೆ ಕಾರಣ. ತಿಮ್ಮಪ್ಪ ಸೂಚನೆ ನೀಡಿದ್ದಾನೆ ಎಂದು ಗ್ರಾಮಸ್ಥರು, ಭಕ್ತರು ಹೇಳುತ್ತಿದ್ದಾರೆ.

ಶ್ರೀಕ್ಷೇತ್ರಕ್ಕೆ ದೂರದಿಂದ ಯಾತ್ರಾರ್ಥಿಗಳು ಬಂದು ಉಳಿದುಕೊಳ್ಳಲು ಅನುಕೂಲ ಆಗುವಂತೆ  ಪ್ರವಾಸೋದ್ಯಮ ಇಲಾಖೆಯಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, 5 ವರ್ಷಗಳ ಹಿಂದೆಯೇ ನಿರ್ಮಿಸಿರುವ ಯಾತ್ರಿ ನಿವಾಸ್ ಇಂದಿಗೂ ಉದ್ಘಾಟನೆ ಆಗದೇ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಚಿಂತೆ ಮಾಡುವಂತಾಗಿದೆ.

ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಲಕ್ಷಾಂತರ ಭಕ್ತ ಸಮೂಹ ಹೊಂದಿರುವ ಮಾಲೇಕಲ್‌ ತಿರುಪತಿ ದೇವಸ್ಥಾನವು ಕೆಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ಶ್ರೀಯವರ ಬ್ರಹ್ಮರಥ ಶಿಥಿಲವಾಗಿತ್ತು. 1995 ರಲ್ಲಿ ನೂತನ ರಥವನ್ನು ವಿಶೇಷ ಕೆತ್ತನೆಗಳೊಂದಿಗೆ ಸುಂದರವಾಗಿ ನಿರ್ಮಾಣ ಮಾಡಿ ರಥ ಲೋಕಾರ್ಪಣೆ ಮಾಡಲಾಯಿತು. ರಥದ ಸುರಕ್ಷತೆಗಾಗಿ ಪೂರ್ವಿಕರು ದೇವಾಲಯದ ಮುಂಭಾಗವೇ ರಥದ ಮನೆಯನ್ನು ನಿರ್ಮಿಸಿದ್ದರು. ಅಭಿವೃದ್ಧಿ ಮಾಡುವ ಉದ್ದೇಶದಿಂದ ಮುಂಭಾಗವನ್ನು ಸಂಪೂರ್ಣವಾಗಿ ಕಾಂಕ್ರೀಟ್‌ಮಯ ಮಾಡಲಾಯಿತು. ಈ ವೇಳೆ ಇದ್ದ ರಥದ ಮನೆಯನ್ನು ತೆರವುಗೊಳಿಸಲಾಯಿತು.

ಇದೀಗ ರಥದ ಮನೆ ನಿರ್ಮಿಸಲು ಸಾಧ್ಯವಾಗದೇ ಮಳೆ, ಬಿಸಿಲು ಮಳೆಗೆ ಮೈಯೊಡ್ಡಿ ನಿಲ್ಲುವಂತಾಗಿದೆ. ನಂತರ ಸುಂದರ ಕೆತ್ತನೆಯ ಮೂರ್ತಿಗಳನ್ನು ಹೊಂದಿರುವ ರಥವು ಇಂದು ಪ್ಲಾಸ್ಟಿಕ್ ಹೊದಿಕೆಯಲ್ಲಿ ನಿಲ್ಲುವಂತಾಗಿದೆ ಎಂದು ಭಕ್ತರು ದೂರುತ್ತಿದ್ದಾರೆ.

ಜುಲೈ 18 ರಂದು ಮಹಾರಥೋತ್ಸವ ಜರುಗಲಿದೆ. ರಾಜಗೋಪುರ ಲೋಕಾರ್ಪಣೆಯನ್ನು ಹೆಚ್ಚು ವಿಜೃಂಭಣೆಯಿಂದ ಮಾಡಬೇಕೆಂಬ ಆಶಯ ಶಾಸಕರದಾಗಿದ್ದು, ಇದುವರೆಗೂ ಅದು ಸಾಧ್ಯವಾಗಿಲ್ಲ. ದೇವಾಲಯ ಸಮಿತಿ ಮತ್ತು ಭಕ್ತರು ಸರಳವಾಗಿಯೇ ರಾಜಗೋಪುರ ಕುಂಭಾಭಿಷೇಕವನ್ನು ಮಾಡೋಣವೆಂದರೆ ಯಾರೂ ಮುಂದಾಳತ್ವ ವಹಿಸುತ್ತಿಲ್ಲ. ಹೀಗಾಗಿ ಇದು ನನೆಗುದಿಗೆ ಬಿದ್ದಿದೆ. ರಾಜಗೋಪುರ ನಿರ್ಮಾಣವಾಗಿ 5 ವರ್ಷಗಳು ಕಳೆದರೂ ಲೋಕಾರ್ಪಣೆ ಆಗದೇ ಇರುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಧಾರ್ಮಿಕ ತಜ್ಞರಿಂದಲೂ ಈಗ ಕೇಳಿಬರುತ್ತಿದೆ.

ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ ಬರುವ ಭಕ್ತಾದಿಗಳ ಪುಣ್ಯಕ್ಷೇತ್ರವಾಗಿರುವ ವೆಂಕಟೇಶ್ವರ ಸ್ವಾಮಿಯ ಮಹಾದ್ವಾರವು ನಗರದ ಹುಳಿಯಾರು ರಸ್ತೆಯ ಮುಂಭಾಗದಲ್ಲಿ ನಿರ್ಮಾಣ ಆಗಬೇಕೆಂಬ ಬಯಕೆ ಭಕ್ತರಲ್ಲಿದೆ.

ದೇವಾಲಯದ ಸಮಿತಿ ಇದ್ದು, ಅಭಿವೃದ್ಧಿ ಸಮಿತಿಯೂ ಇದೆ. ಶಾಸಕರ ಅಧ್ಯಕ್ಷತೆಯಲ್ಲಿ ಸಂಪೂರ್ಣ ಸಹಕಾರದೊಂದಿಗೆ ರಾಜಗೋಪುರ, ಯಾತ್ರಿ ನಿವಾಸ ನಿರ್ಮಾಣಗೊಂಡಿರುವುದು ಸಂತೋಷದ ವಿಚಾರ. ಆದರೆ ಲೋಕಾರ್ಪಣೆ ಕಾರ್ಯಕ್ರಮ ವಿಳಂಬವಾಗಿರುವುದು ಭಕ್ತರಿಗೆ ಬೇಸರ ಉಂಟು ಮಾಡಿದೆ.

ಶಾಸಕರು ಮಾಲೇಕಲ್‌ ತಿರುಪತಿ ದೇವಸ್ಥಾನದ ರಾಜಗೋಪುರ, ಯಾತ್ರಿ ನಿವಾಸ್‌ ಲೋಕಾರ್ಪಣೆ, ರಥದ ಮನೆ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರು ಗಮನಹರಿಸಬೇಕು ಎಂಬುದು ಭಕ್ತರ ಒತ್ತಾಯ.

ಮಹಾ ರಥೋತ್ಸವದ ಒಳಗಾಗಿ ರಾಜಗೋಪುರ ಲೋಕಾರ್ಪಣೆ ಹಾಗೂ ದೇವಸ್ಥಾನದ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಚಿವರ ಜೊತೆ ಮಾತನಾಡಿ ಸೂಕ್ತ ದಿನಾಂಕ ನಿಗದಿಗೊಳಿಸಲಾಗುವುದು
-ಕೆ.ಎಂ. ಶಿವಲಿಂಗೇಗೌಡ ಶಾಸಕ ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷ
ಚುನಾವಣಾ ಹಿನ್ನೆಲೆಯಲ್ಲಿ ರಾಜಗೋಪುರ ಲೋಕಾರ್ಪಣೆ ರಥದ ಮನೆ ಕಾಮಗಾರಿ ವಿಳಂಬವಾಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು
-ಅರುಣ್‌ಕುಮಾರ್‌ ದೇವಸ್ಥಾನದ ಸಮಿತಿಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT