ಹಾವೇರಿ ಶಿವಾಜಿನಗರದಲ್ಲಿ ರಸ್ತೆಯಲ್ಲಿ ತಗ್ಗು ಬಿದ್ದು ವಾಹನವೊಂದರ ಚಕ್ರ ಸಿಲುಕಿಕೊಂಡಿರುವುದು
ಹಾವೇರಿ ಶಿವಾಜಿನಗರದಲ್ಲಿ ರಸ್ತೆಯಲ್ಲಿ ಮಣ್ಣು ಕುಸಿದು ತಗ್ಗು ಬಿದ್ದಿರುವುದು
ಹಾವೇರಿ: ಕಾಮಗಾರಿಯಿಂದ ಕುಸಿಯುತ್ತಿರುವ ರಸ್ತೆ
ಹಾವೇರಿ: ಇಲ್ಲಿಯ ಶಿವಾಜಿನಗರದಲ್ಲಿ ರಸ್ತೆಗಳು ಕುಸಿದು ತಗ್ಗುಗಳು ಬೀಳುತ್ತಿದ್ದು ಇದೇ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಸಿಲುಕಿಕೊಂಡು ಚಾಲಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಶಿವಾಜಿನಗರದ ಪ್ರಮುಖ ರಸ್ತೆಗಳು ಹಾಗೂ ಒಳ ರಸ್ತೆಗಳಲ್ಲಿ ಯುಜಿಡಿ–ಇತರೆ ಕಾಮಗಾರಿ ಚಾಲ್ತಿಯಲ್ಲಿವೆ. ಅಲ್ಲಲ್ಲಿ ಕೇಬಲ್ ಅಳವಡಿಕೆಗಾಗಿಯೂ ರಸ್ತೆ ಅಗೆಯಲಾಗುತ್ತಿದೆ. ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕಿರಿದಾದ ರಸ್ತೆ ಅಕ್ಕ–ಪಕ್ಕದಲ್ಲಿ ಹಾಗೂ ರಸ್ತೆ ಮಧ್ಯೆದಲ್ಲಿ ನೆಲ ಅಗೆದು ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ನಂತರ ವೈಜ್ಞಾನಿಕವಾಗಿ ಮಣ್ಣು ಮುಚ್ಚಲಾಗಿದೆ. ಇದೇ ಸ್ಥಳದಲ್ಲಿ ರಸ್ತೆಯ ಮಣ್ಣು ಪದೇ ಪದೇ ಕುಸಿಯುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿರುವ ವಾಹನಗಳ ಚಕ್ರಗಳು ಮಣ್ಣಿನಲ್ಲಿ ಸಿಲುಕಿಕೊಳ್ಳುತ್ತಿವೆ. ಮಳೆ ಬಂದರಂತೂ ರಸ್ತೆಗಳು ಕೆಸರು ಗದ್ದೆಯಾಗುತ್ತಿವೆ. ಇತ್ತೀಚೆಗೆ ಇಟ್ಟಿಗೆ ಸಾಗಿಸುತ್ತಿದ್ದ ವಾಹನವೊಂದರ ಚಕ್ರ ಗುಂಡಿಯಲ್ಲಿ ಸಿಲುಕಿತ್ತು. ವಾಹನ ಮೇಲೆತ್ತಲು ಚಾಲಕ ಹರಸಾಹಸಪಟ್ಟರು. ಇಟ್ಟಿಗೆಗಳನ್ನು ಕೆಳಗೆ ಇಳಿಸಿ ಕ್ರೇನ್ ಸಹಾಯದಿಂದ ವಾಹನವನ್ನು ಮೇಲೆತ್ತಿದ್ದರು. ಗುತ್ತಿಗೆದಾರನ ವಿರುದ್ಧ ಹಿಡಿಶಾಪ ಹಾಕಿದರು. ‘ಶಿವಾಜಿನಗರದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ. ಇದೇ ಕಾರಣಕ್ಕೆ ರಸ್ತೆಗಳು ಹಾಳಾಗುತ್ತಿವೆ. ತಗ್ಗುಗಳು ಬಿದ್ದು ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಹಾಳು ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಕೋರಲಾಗಿದೆ‘ ಎಂದು ನಗರಸಭೆ ಸದಸ್ಯೆ ಚನ್ನಮ್ಮ ಬ್ಯಾಡಗಿ ತಿಳಿಸಿದರು.