ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರಿ: 120 ಹುದ್ದೆಗಳಿಗೆ 1,486 ಅರ್ಜಿ

ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರಿ
Published 15 ಆಗಸ್ಟ್ 2024, 14:10 IST
Last Updated 15 ಆಗಸ್ಟ್ 2024, 14:10 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 120 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಕರೆಯಲಾಗಿದ್ದ ನೇರ ಸಂದರ್ಶನದಲ್ಲಿ 1,486 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

ಇಲ್ಲಿಯ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿರುವ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಆ.12, 13 ಹಾಗೂ 14ರಂದು ನೇರ ಸಂದರ್ಶನ ನಡೆದಿತ್ತು. ರಾಷ್ಟ್ರೀಯ ಆರೋಗ್ಯ ಅಭಿಯಾದಡಿ ಖಾಲಿ ಇರುವ 118 ಹುದ್ದೆಗಳಿಗೆ ಅರ್ಹರಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಹೊರ ಜಿಲ್ಲೆಗಳ ಆಕಾಂಕ್ಷಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

‘ಮೂರು ದಿನ ನಡೆದ ನೇರಸಂದರ್ಶನದಲ್ಲಿ ಹಾಜರಾಗಿದ್ದ 1,486 ಆಕಾಂಕ್ಷಿಗಳಿಂದ ಅರ್ಹತಾ ದಾಖಲೆ ಸಮೇತ ಅರ್ಜಿ ಪಡೆಯಲಾಗಿದೆ. ಶೈಕ್ಷಣಿಕ ಹಾಗೂ ಮೀಸಲಾತಿ ಅನ್ವಯ ಪಟ್ಟಿ ಸಿದ್ಧಪಡಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ತಿಳಿಸಿದರು.

‘ಮೊದಲ ದಿನವಾದ ಆ. 12ರಂದು 37 ಹುದ್ದೆಗಳ ನೇಮಕಕ್ಕೆ ಸಂದರ್ಶನ ನಡೆಸಲಾಯಿತು. ಈ ಸಂದರ್ಭದಲ್ಲಿ 829 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಎರಡನೇ ದಿನ 67 ಹುದ್ದೆಗಳಿಗೆ 143 ಮಂದಿ ಹಾಗೂ ಮೂರನೇ ದಿನ 16 ಹುದ್ದೆಗಳಿಗೆ 514 ಮಂದಿ ಅರ್ಜಿ ಹಾಕಿದ್ದಾರೆ’ ಎಂದು ಹೇಳಿದರು.

‘ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯಲ್ಲಿರುವ ಸಮಿತಿಯಿಂದ ನೇಮಕಾತಿ ನಡೆಯುತ್ತಿದೆ. ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರವೇ ಅರ್ಹರಿಗೆ ನೇಮಕಾತಿ ಆದೇಶ ನೀಡಲಾಗುವುದು’ ಎಂದರು.

ಶುಶ್ರೂಷಾಧಿಕಾರಿ, ಕಿರಿಯ ಆರೋಗ್ಯ ರಕ್ಷಣಾ ಅಧಿಕಾರಿ, ನೇತ್ರ ಸಹಾಯಕ, ಫಾರ್ಮಸಿಸ್ಟ್, ಆರ್‌ಬಿಎಸ್‌ಕೆ ಆಯುಷ್ ವೈದ್ಯರು, ಆರೋಗ್ಯ ತಪಾಸಣೆ ಅಧಿಕಾರಿ, ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕ, ಸೂಕ್ಷ್ಮ ಜೀವಶಾಸ್ತ್ರಜ್ಞ, ವೈದ್ಯಕೀಯ ಅಧಿಕಾರಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂದರ್ಶನ ನಡೆದಿತ್ತು. ಎಸ್ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದವರು ದಾಖಲೆ ಸಮೇತ ಸಂದರ್ಶನದಲ್ಲಿ ಭಾಗವಹಿಸಿದ್ದರು.

2 ಹುದ್ದೆಗೆ 166 ಅರ್ಜಿ: ಜಿಲ್ಲೆಯಲ್ಲಿ ಖಾಲಿ ಇರುವ ಎರಡು ಆಯುಷ್ ವೈದ್ಯರ ನೇಮಕಾತಿಗೆ ಸಂದರ್ಶನ ಕರೆಯಲಾಗಿದೆ. ಎರಡು ಹುದ್ದೆಗಳಿಗೆ 166 ಮಂದಿ ಅರ್ಜಿ ಸಲ್ಲಿಸಿದ್ದರು.

ಡಾ.ರಾಜೇಶ ಸುರಗಿಹಳ್ಳಿ
ಡಾ.ರಾಜೇಶ ಸುರಗಿಹಳ್ಳಿ

Highlights - ಹಾವೇರಿಯಲ್ಲಿ ನಡೆದಿದ್ದ ನೇರಸಂದರ್ಶನ ಹೊರ ಜಿಲ್ಲೆಯಿಂದಲೂ ಹಾಜರಾಗಿದ್ದ ಆಕಾಂಕ್ಷಿಗಳು ತಿಂಗಳೊಳಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT