ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಹಾಸ್ಟೆಲ್‌ನಲ್ಲಿ ಗುಣಮಟ್ಟದ ಊಟ ಕೇಳಿದಕ್ಕೆ ಹಲ್ಲೆ: ಆರೋಪ

Published 25 ಜುಲೈ 2024, 5:23 IST
Last Updated 25 ಜುಲೈ 2024, 5:23 IST
ಅಕ್ಷರ ಗಾತ್ರ

ಕಲಬುರಗಿ: ಗುಣಮಟ್ಟದ ಊಟ ಕೇಳಿದಕ್ಕೆ ಹಾಸ್ಟೆಲ್‌ನ ಅಡುಗೆ ಸಿಬ್ಬಂದಿಯೊಬ್ಬರು ಹೊರಗಿನವರನ್ನು ಕರೆಯಿಸಿ ವಿದ್ಯಾರ್ಥಿ ರಸೂಲ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆತನ ಸ್ನೇಹಿತ ಅಂಕಿತ್ ಆರೋಪಿಸಿದ್ದು, ಗಾಯಗೊಂಡ ರಸೂಲ್‌ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೈಕೋರ್ಟ್‌ ಸಮೀಪದ ಅಲ್ಪಸಂಖ್ಯಾತರ ಮ್ಯಾಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿದ್ದ ರಸೂಲ್, ಬಿಎಸ್‌ಸಿ ನರ್ಸಿಂಗ್ ಓದುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಸರಿಯಾಗಿ ಊಟ ಕೊಡುತ್ತಿಲ್ಲ ಎಂದು ದೂರು ನೀಡಿದ್ದರು. ಇದರಿಂದ ಕೋಪಿತಗೊಂಡ ಅಡುಗೆ ಸಿಬ್ಬಂದಿ, ತನ್ನ ಪರಿಚಯಸ್ಥರೊಬ್ಬರನ್ನು ಕರೆಯಿಸಿ ರಸೂಲ್ ಮೇಲೆ ಹಲ್ಲೆ ಮಾಡಿದ್ದಾರೆ. ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದು, ಮೂಗಿನಿಂದ ರಕ್ತಸ್ರಾವ ಆಗುತ್ತಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅಂಕಿತ್ ಹೇಳಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಾಸ್ಟೆಲ್ ವಾರ್ಡನ್ ಮುತ್ತಪ್ಪ, ‘ಹಾಸ್ಟೆಲ್‌ನಲ್ಲಿ ಏನಾದರೂ ಸಮಸ್ಯೆಯಾದರೆ ರಸೂಲ್, ಮುಂದಾಳತ್ವ ವಹಿಸಿ ಪ್ರಶ್ನಿಸುತ್ತಿದ್ದರು. ರಸೂಲ್ ಅವರು ಊಟದ ವಿಷಯವಾಗಿ ದೂರು ಕೊಟ್ಟಿದ್ದರಿಂದ ಬುಧವಾರ ತಾಲ್ಲೂಕು ಅಧಿಕಾರಿಗಳು ಪರಿಶೀಲನೆಗೆ ಬಂದಿದ್ದರು. ಮೂರ್ನಾಲ್ಕು ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸುವುದಾಗಿ ಹೇಳಿದ್ದೇವು. ಅಷ್ಟರೊಳಗೆ ಈ ಘಟನೆ ನಡೆದಿದೆ’ ಎಂದರು.

‘ಹಲ್ಲೆ ಮಾಡಿದ ಅಡುಗೆ ಸಿಬ್ಬಂದಿಯನ್ನು ತೆಗೆದು ಹಾಕಲಾಗಿದೆ. ಮತ್ತಿಬ್ಬರು ಸಿಬ್ಬಂದಿಯನ್ನು ಬೇರೆ ಹಾಸ್ಟೆಲ್‌ಗೆ ವರ್ಗಾವಣೆ ಮಾಡಲಾಗಿದೆ. ಹಲ್ಲೆಯ ಘಟನೆಯು ಹಾಸ್ಟೆಲ್ ಹೊರಗಡೆ ನಡೆದಿದ್ದು, ಚಿಕಿತ್ಸೆಯಿಂದ ರಸೂಲ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT