ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಸಿ, ಮುಸ್ಲಿಮರ ಮೇಲೆ ಹಲ್ಲೆ ಪ್ರಕರಣ ಹೆಚ್ಚಳ: ದಲಿತ ಸೇನೆ ಆರೋಪ

Published 24 ಜುಲೈ 2024, 8:09 IST
Last Updated 24 ಜುಲೈ 2024, 8:09 IST
ಅಕ್ಷರ ಗಾತ್ರ

ಕಲಬುರಗಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಮುಸ್ಲಿಮರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿ ದಲಿತ ಸೇನೆ ಮತ್ತು ಜನತಾ ಪರಿವಾರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರು ಮತ್ತು ಪರಿಶಿಷ್ಟ ಸಮುದಾಯದ ಮೇಲಿನ ದೌರ್ಜನ್ಯ ಪ್ರಕರಣಗಳು ದುಪ್ಪಟ್ಟಾಗಿವೆ. ನಿತ್ಯ ಒಂದಲ್ಲಾ ಒಂದು ಕಡೆ ಗುಂಪು ಹತ್ಯೆ, ಮನೆಗಳ ಧ್ವಂಸದಂತಹ ಪ್ರಕರಣಗಳು ನಡೆಯುತ್ತಿರುವುದು ಬಜರಂಗದಳ, ವಿಎಚ್‌ಪಿ, ಆರ್‌ಎಸ್‌ಎಸ್‌ನ ಹತಾಶೆಯ ಸಂಕೇತವಾಗಿದೆ ಎಂದು ಆರೋಪಿಸಿದರು.

ಕೊಲ್ಹಾಪುರದ ಗಜಾಪುರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಮನೆ, ಅಂಗಡಿಗಳ ಲೂಟಿ ಮಾಡಿ ಹಾಗೂ ವಿಶಾಲಗಡ ಕೋಟೆ ಪ್ರದೇಶದ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ನಡೆದ ಹಿಂಸಾಚಾರ ಆತಂಕಕಾರಿಯಾಗಿವೆ. ಘಟನೆಯಲ್ಲಿ ಮುಸ್ಲಿಂ ಸಮುದಾಯದ ಸುಮಾರು 50 ಮನೆ ಹಾಗೂ ಅಂಗಡಿಗಳ ಮೇಲೆ ಗುಂಪು ದಾಳಿ ಮಾಡಿ, ಧ್ವಂಸಗೊಳಿಸಿ ಲೂಟಿ ಮಾಡಲಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಸಂತ್ರಸ್ತರಿಗೆ ಸಾಂತ್ವನ ಹೇಳುವ ಬದಲು ಗಲಭೆಕೋರರನ್ನು ಸಮಾಧಾನಪಡಿಸಿದ್ದಾರೆ ಎಂದು ದೂರಿದರು.

ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗುಂಪು ಹತ್ಯೆಗಳ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿದ್ದು, 2016ಕ್ಕೆ ಹೋಲಿಸಿದರೆ 2017ರಲ್ಲಿ ಶೇ 75ರಷ್ಟು ಹೆಚ್ಚಳವಾಗಿವೆ. 2010ರಿಂದ 2017ರವರೆಗೆ ಗೋವು ಸಂಬಂಧಿತ 63 ಹಿಂಸಾಚಾರ ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ 28 ಜನರು ಮೃತಪಟ್ಟಿದ್ದು, 124 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಶೇ 37.8ರಷ್ಟು ಸರ್ಕಾರಿ ಶಾಲೆಗಳಲ್ಲಿ ದಲಿತ ಮಕ್ಕಳನ್ನು ಇತರ ಮಕ್ಕಳಿಂದ ಪ್ರತ್ಯೇಕವಾಗಿ ಕೂರಿಸಲಾಗುತ್ತಿದೆ. ಶೇ 27.6ರಷ್ಟು ಹಳ್ಳಿಗಳಲ್ಲಿ ದಲಿತರು ಪೊಲೀಸ್ ಠಾಣೆಗಳಿಗೆ ಪ್ರವೇಶಿಸುವುದನ್ನು ತಡೆಯಲಾಗುತ್ತಿದೆ. ಶೇ 33ರಷ್ಟು ಹಳ್ಳಿಗಳಲ್ಲಿ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ದಲಿತರ ಮನೆಗಳಿಗೆ ಪ್ರವೇಶಿಸಲು ನಿರಾಕರಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಜನತಾ ಪರಿವಾರ ಸಂಘಟನೆಯ ಅಧ್ಯಕ್ಷ ಸಿರಾಜ್ ಶಬ್ದಾ, ಜಿಲ್ಲಾ ಅಧ್ಯಕ್ಷ ಅಜರ್ ಮುಬಾರಕ್, ಕಾರ್ಯಾಧ್ಯಕ್ಷ ಆಕಾಶ್ ರಿದ್ಲಾನ್, ಕಾರ್ಯದರ್ಶಿಗಳಾದ ಕೃಷ್ಣಕಾಂತ ಸರಡಿಗಿ, ಪ್ರಮುಖರಾದ ಮಂಜುನಾಥ ಭಂಡಾರಿ, ಶ್ರೀಕಾಂತ ರೆಡ್ಡಿ, ಉದಯಕುಮಾರ ಖಣಗೆ, ಸತೀಶ ಮಾಲೆ, ಸಮೀರ್ ಆವಟಿ, ಶಿವ ಸಂಗೋಳಗಿ, ಕಪಿಲ್ ವಾಲಿ, ಮೊಹಮದ್ ಹೈದರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT