ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವರಾಜ ದೇಶಮುಖ ಭೇಟಿ ಮಾಡಿದ ಶಶಿಕಾಂತ ಪೆನಲ್‌

ಮಹಾಸಭಾ ಪದಾಧಿಕಾರಿಗಳ ಪಟ್ಟಿಗೆ ಬೇಸರ
Published 25 ಜುಲೈ 2024, 5:22 IST
Last Updated 25 ಜುಲೈ 2024, 5:22 IST
ಅಕ್ಷರ ಗಾತ್ರ

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಶಶಿಕಾಂತ ಪಾಟೀಲ ಪೆನಲ್ ಸದಸ್ಯರು, ಬುಧವಾರ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು.

ಕಾರ್ಯಕಾರಿಣಿ ಸದಸ್ಯರ ಪಟ್ಟಿ ಬಿಡುಗಡೆಯಾಗುತ್ತಲೇ ಅಸಮಾಧಾನ ಭುಗಿಲೆದಿತ್ತು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿನ ಚುನಾವಣಾಧಿಕಾರಿ ಕಚೇರಿಯ ಗೋಡೆಗೆ ಅಂಟಿಸಿದ್ದ ಜಿಲ್ಲಾ ಘಟಕದ ಪದಾಧಿಕಾರಿಗಳ ಪಟ್ಟಿಯ ಪ್ರತಿಗೂ ಬೆಂಕಿ ಹಚ್ಚಲಾಗಿತ್ತು.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಶಶಿಕಾಂತ ಪಾಟೀಲ, ‘ಈ ಹಿಂದೆ ನಡೆದ ಸಭೆಯಲ್ಲಿ ಎರಡು ಪೆನಲ್‌ಗಳ ಆಕಾಂಕ್ಷಿಗಳಿಗೆ ಸಮನಾಗಿ ಸ್ಥಾನ–ಮಾನ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದಕ್ಕೆ ನಾನು ಮತ್ತು ಮೋದಿ ಅವರು ಒಪ್ಪಿಕೊಂಡಿದ್ದೆವು. ಅದರ ಮರುದಿನವೇ 10 ಮಂದಿ ಪುರುಷ ಹಾಗೂ 5 ಮಂದಿ ಮಹಿಳೆಯರ ಪಟ್ಟಿಯನ್ನು ಮೋದಿ ಅವರಿಗೆ ನೀಡಿದ್ದೆ. ಪದೇ ಪದೇ ಭೇಟಿ ಮಾಡಿ, ಸೇರ್ಪಡೆ ಮಾಡುವಂತೆಯೂ ಒತ್ತಾಯಿಸಿದ್ದೆ.  ಆದರೆ, ಮಂಗಳವಾರ ಯಾರ ಗಮನಕ್ಕೂ ತರದೆ ಪದಾಧಿಕಾರಿಗಳ ಪಟ್ಟಿಯನ್ನು ಅಂಟಿಸಿ ಹೋಗಿದ್ದಾರೆ’ ಎಂದರು.

‘ಪಟ್ಟಿ ಬಿಡುಗಡೆಯ ಬಳಿಕ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದರಿಂದ ನನ್ನ ಜತೆಗೆ ನಿಂತು, ಸ್ಪರ್ಧೆಯಿಂದ ಹಿಂದೆ ಸರಿದ ನನ್ನ ಪೆನಲ್‌ನವರಿಗೆ ಬೇಸರವಾಗಿದೆ. ಹೀಗಾಗಿ, ಸಮಾಜದ ಹಿರಿಯರಾದ ಬಸವರಾಜ ದೇಶಮುಖ ಅವರನ್ನು ಭೇಟಿ ಮಾಡಿದ್ದೇವೆ. ಅಧಿವೇಶನ ಮುಗಿದ ಬಳಿಕ ಸಚಿವರು, ಶಾಸಕರು ಬರುತ್ತಾರೆ ಅವರೊಂದಿಗೆ ಕುಳಿತು ಚರ್ಚೆ ಮಾಡೋಣ ಎಂದು ಆಶ್ವಾಸನೆ ಕೊಟ್ಟಿದ್ದಾರೆ’ ಎಂದು ಹೇಳಿದರು.

ಭೇಟಿ ವೇಳೆ ಮುಖಂಡರಾದ ಎಂ.ಎಸ್.ಪಾಟೀಲ ನರಿಬೋಳ, ಶರಣು ಪಪ್ಪ, ಪ್ರಶಾಂತ ಗುಡ್ಡಾ, ಮೃತ್ಯುಂಜಯ ಪಲ್ಲಾಪೂರಮಠ,  ಗೌಡಪ್ಪಗೌಡ, ಚಿದಾನಂದ ಗುಡ್ಡಾ, ಮಂಜುನಾಥ ಕಾಳೆ, ಸಂತೋಷ ಪೋಲಿಸ್ ಪಾಟೀಲ ನರಿಬೋಳ, ಮಹಾಂತೇಶ ಪಾಟೀಲ, ಪ್ರಸಾದ ಪಟ್ಟಣಕರ್, ರಾಜಕುಮಾರ ಅವಂಟಗಿ, ಮಲ್ಲಿಕಾರ್ಜುನ ಪಾಟೀಲ, ಗಿರಿರಾಜ ಜೀವಣಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT