ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟು ಹಾಕಲು ಬಾರದಿದ್ದರೆ ಸತ್ತ ಮೇಲೆ ನನ್ನ ಮಣ್ಣಿಗಾದರೂ ಬನ್ನಿ: ಖರ್ಗೆ ಭಾವುಕ

2019ರ ಲೋಕಸಭಾ ಚುನಾವಣೆ ಸೋಲು ನೆನೆದು ಭಾವುಕರಾದ ಮಲ್ಲಿಕಾರ್ಜುನ ಖರ್ಗೆ
Published 24 ಏಪ್ರಿಲ್ 2024, 14:45 IST
Last Updated 24 ಏಪ್ರಿಲ್ 2024, 14:45 IST
ಅಕ್ಷರ ಗಾತ್ರ

ಅಫಜಲಪುರ (ಕಲಬುರಗಿ ಜಿಲ್ಲೆ): ಕಳೆದ ಲೋಕಸಭಾ ಚುನಾವಣೆಯ ಸೋಲು ಸ್ಮರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕರ್ನಾಟಕ ಮತ್ತು ಕಲಬುರಗಿಗೆ ನಾನು ಏನಾದರೂ ಒಳ್ಳೆಯ ಕೆಲಸ ಮಾಡಿದ್ದು ನಿಮ್ಮ ನಿನಪಿನಲ್ಲಿದ್ದರೆ, ವೋಟು ಹಾಕಲು ಬನ್ನಿ; ಇಲ್ಲವೇ ಸತ್ತ ಮೇಲೆ ನನ್ನ ಮಣ್ಣಿಗಾದರೂ ಬನ್ನಿ’ ಎಂದು ಭಾವುಕರಾಗಿ ನುಡಿದರು.

ಅಫಜಲಪುರದಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮ್ಮ ಅಳಿಯ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಅವರು ಮಾತನಾಡಿದರು. ‘ನಾನು ಅಫಜಲಪುರದಿಂದ (2019ರಲ್ಲಿ ಬಿಜೆಪಿಗೆ 35,675 ಮತಗಳ ಲೀಡ್) ಸೋತಿದ್ದೇನೆ ಎನ್ನುವುದಿಲ್ಲ. ಆದರೆ, ಬಿಜೆಪಿಯವರು ಒಟ್ಟಾಗಿ ಕಲಬುರಗಿಯಲ್ಲಿ ಕ್ಯಾಂಪ್ ಹಾಕಿ ಸೋಲಿಸಿದರು. ಈ ಬಾರಿಯಾದರೂ ರಾಧಾಕೃಷ್ಣ ಅವರಿಗೆ ಆಶೀರ್ವಾದ ಮಾಡಿ’ ಎಂದು ಕೋರಿದರು.

‘ಒಂದು ವೇಳೆ ವೋಟ್‌ ನಮಗೆ ಬಾರದಿದ್ದರೆ ನನಗೆ ಇಲ್ಲಿ ಸ್ಥಾನವಿಲ್ಲ ಅಥವಾ ನಿಮ್ಮ ಹೃದಯ ಗೆಲ್ಲುವುದಕ್ಕೆ ನನ್ನಿಂದ ಸಾಧ್ಯವಾಗಲಿಲ್ಲ ಎಂದು ತಿಳಿದುಕೊಳ್ಳುತ್ತೇನೆ. ಗೆಲುವು ಸಿಗಲಿ, ಸಿಗದೇ ಇರಲಿ. ಇದಂತು ಮುಗಿದು ಹೋಗಲಿದೆ. ಕನಿಷ್ಠ ಪಕ್ಷ ರಾಜ್ಯಕ್ಕೆ ನಾನು ಮಾಡಿದ ಒಳ್ಳೆಯ ಕೆಲಸವನ್ನು ನೆನಪಿನಲ್ಲಿ ಇಟ್ಟುಕೊಂಡು ನಾನು ಸತ್ತ ಮೇಲೆ ಮಣ್ಣು ಹಾಕಲು ಬಂದು ಉಪಕಾರ ಮಾಡಿ’ ಎಂದು ವಿನಂತಿಸಿದರು.

‘ನನ್ನನ್ನು ಸುಟ್ಟರೆ ಮೇಣದ ಬತ್ತಿ ಹಚ್ಚಿ, ಮಣ್ಣಿನಲ್ಲಿ ಹೂತರೆ ಹಿಡಿ ಮಣ್ಣು ಹಾಕಿ. ವೋಟಿಗೆ ಬಾರದೆ ಇದ್ದರೂ ನನ್ನ ಮಣ್ಣಿಗಾದರೂ ಬಂದರೆ ಎಷ್ಟೊಂದು ಜನರು ಸೇರಿದ್ದಾರೆ, ಎಂತಹ ಒಳ್ಳೆಯ ಕೆಲಸ ಮಾಡಿರಬಹುದೆಂದು ಬೇರೆ ಜನ ನನ್ನ ಬಗ್ಗೆ ಒಳ್ಳೆಯ ಮಾತು ಆಡಿಕೊಳ್ಳುತ್ತಾರೆ’ ಎಂದು ಗದ್ಗದಿತರಾದರು.

‘ನಾನು ಹುಟ್ಟಿದ್ದೇ ರಾಜಕೀಯ ಮಾಡಲು. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ನಾನು ಕೊನೆ ಉಸಿರಿನ ತನಕ ರಾಜಕೀಯ ಮಾಡುತ್ತೇನೆ. ಸ್ಥಾನದಿಂದ ನಿವೃತ್ತಿಯಾದರೂ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ತತ್ವಗಳನ್ನು ಎದುರಿಸಲು ಯಾವುದೇ ರೂಪದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಬಿಜೆಪಿ ಸಂಸದರ ಅಯೋಗ್ಯತನದಿಂದ ರಾಜ್ಯಕ್ಕೆ ಬರಬೇಕಾದ ಬರಗಾಲದ ಪಾಲು ಪಡೆಯಲು ನಾವು ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಯಿತು. ಬರಗಾಲದ ಅನುದಾನ ಸಂಬಂಧ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಅವರು ರಾಜ್ಯದ ಜನರಿಗೆ ದೊಡ್ಡ ಸುಳ್ಳು ಹೇಳಿದರು’ ಎಂದು ಕಿಡಿಕಾರಿದರು.

‘ಮೋದಿಗೆ ನಾಚಿಕೆಯಾಗಬೇಕು’

‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದರೆ ಮಾಂಗಲ್ಯ ಕಿತ್ತುಕೊಳ್ಳುತ್ತದೆ ಎಂದು ಸುಳ್ಳು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗಬೇಕು’ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ‘50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಯಾರಿಂದ ಕಿತ್ತುಕೊಂಡು ಯಾರಿಗೆ ಕೊಟ್ಟಿದೆ? ಯಾವ ಮಹಿಳೆಯ ಮಾಂಗಲ್ಯ ಕಿತ್ತುಕೊಂಡಿದೆ? ಮಹಿಳೆಯರಿಗಾಗಿ ಹಲವು ಯೋಜನೆಗಳು ತಂದಿದೆಯೇ ಹೊರತು ಮಾಂಗಲ್ಯ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ’ ಎಂದು ಹರಿಹಾಯ್ದರು. ‘ತಿಳಿವಳಿಕೆ ಕೊರತೆಯಿಂದಾಗಿ ಮೋದಿ ಅವರು ಕಾಂಗ್ರೆಸ್‌ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್‌ ಜೊತೆಗೆ ಹೋಲಿಸುತ್ತಿದ್ದಾರೆ. ಎಲ್ಲಿಗೇ ಕರೆದರೂ ಪ್ರಣಾಳಿಕೆ ತೆಗೆದುಕೊಂಡು ಹೋಗಿ ಅವರಿಗೆ ಮನವರಿಕೆ ಮಾಡಿಕೊಡಲು ಸಿದ್ಧ’ ಎಂದು ಖರ್ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT