ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಕಿ ವೇತನ ಪಾವತಿಗೆ ಆಗ್ರಹ

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಪ್ರತಿಭಟನೆ
Published : 11 ಜುಲೈ 2024, 6:57 IST
Last Updated : 11 ಜುಲೈ 2024, 6:57 IST
ಫಾಲೋ ಮಾಡಿ
Comments

ಕಲಬುರಗಿ: ವಸತಿ ನಿಲಯ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸಬೇಕು ಎನ್ನುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಬಳಿಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದ ಮುಖಂಡರು, ‘ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಮೂರು ವರ್ಷಗಳಿಂದ ಕಡಿಮೆ ವೇತನ ಪಾವತಿಸಲಾಗುತ್ತಿದೆ. ಪಿಎಫ್, ಇಎಸ್‌ಐ ಕಟ್ಟುತ್ತಿಲ್ಲ. ಇಲಾಖೆಯು ವೇತನ ಪಾವತಿಗೆ ಹಣ ನೀಡಿದರೂ ಮೈಸೂರು ಶಾರ್ಪ್‌ ಏಜೆನ್ಸಿಯವರು ನೌಕರರಿಗೆ ನೀಡುತ್ತಿಲ್ಲ’ ಎಂದು ಆರೋಪಿಸಿದರು.

2022ರಲ್ಲಿ 100ಕ್ಕೂ ಹೆಚ್ಚು ನೌಕರರು ಕಾರ್ಮಿಕ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಕ್ರಮ ಜರುಗಿಸಿರಲಿಲ್ಲ. ಫೆಬ್ರುವರಿಯಲ್ಲಿ 200 ನೌಕರರು ಬ್ಯಾಂಕ್ ಸ್ಟೇಟ್‌ಮೆಂಟ್ ಸಹಿತ ಕಡಿಮೆ ವೇತನ ನೀಡುತ್ತಿರುವ ಕುರಿತು ದೂರು ನೀಡಿದ್ದರು. ನಾಲ್ಕು ತಿಂಗಳಾಗಿದೆ. ಆದರೂ ತನಿಖೆ ನಡೆಸದೆ ಅಧಿಕಾರಿಗಳು ಏಜೆನ್ಸಿ ಜೊತೆ ಶಾಮಿಲಾಗಿ ಅವ್ಯವಹಾರ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ಮುಖಂಡರು ಧರಣಿ ನಡೆಸಿದ್ದರು. ಇನ್ನೂವರೆಗೂ ಯಾವುದೇ ಬೇಡಿಕೆ ಈಡೇರಿಸಿಲ್ಲ. ನೌಕರರಿಗೆ ಸಮರ್ಪಕವಾಗಿ ವೇತನ ನೀಡಬೇಕು. ಪಿಎಫ್‌, ಇಎಸ್‌ಐ ಕಟ್ಟಬೇಕು. ಭ್ರಷ್ಟಾಚಾರದಲ್ಲಿ ತೊಡಗಿದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ ರಂಜೋಳಕರ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ನೌಕರರ 5–6 ತಿಂಗಳ ಬಾಕಿ ವೇತನ ಪಾವತಿಸಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ನೌಕರರ 2–3 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು. ಇಲಾಖೆಯಿಂದಲೇ ನೌಕರರಿಗೆ ವೇತನ ಪಾವತಿಸಬೇಕು. ಇಲ್ಲಿಯವರೆಗೂ ಸೇವೆ ಸಲ್ಲಿಸಿರುವ ನೌಕರರಿಗೆ ನೇಮಕಾತಿ ಆದೇಶ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಮೇಘರಾಜ ಕಠಾರೆ, ಕಾರ್ಯದರ್ಶಿ ಮಲ್ಲಮ್ಮ ಕೋಡ್ಲಿ, ಕಾಶಿನಾಥ ಬಂಡಿ, ಸಿದ್ದರಾಮ ಹರವಾಳ, ಬಸಪ್ಪ ನಡುವಿನಕೇರಿ, ನಾಗರತ್ನ ಮದನಕರ್, ಬಾಬು ಹೊಸಮನಿ ಸೇರಿ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT