ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ರೈತರ ₹5 ಲಕ್ಷ ಕೋಟಿ ಸಾಲ ಮನ್ನಾ ಮಾಡಿ: ಬಡಗಲಪುರ ನಾಗೇಂದ್ರ

Published : 5 ಅಕ್ಟೋಬರ್ 2024, 15:21 IST
Last Updated : 5 ಅಕ್ಟೋಬರ್ 2024, 15:21 IST
ಫಾಲೋ ಮಾಡಿ
Comments

ಕಲಬುರಗಿ: ‘ದೇಶದ 27 ಪ್ರಮುಖ ಉದ್ಯಮಿಗಳ ₹ 40.27 ಲಕ್ಷ ಕೋಟಿ ಸಾಲವನ್ನು ಕೇಂದ್ರದ ಬಿಜೆಪಿ ಸರ್ಕಾರ ಮನ್ನಾ ಮಾಡಿದೆ. ಅದೇ ರೀತಿ ದೇಶದಲ್ಲಿನ ಒಟ್ಟಾರೆ ರೈತರು ಮಾಡಿದ ಸಾಲದ ಮೊತ್ತ ₹ 5 ಲಕ್ಷ ಕೋಟಿ ಇದ್ದು, ಅದನ್ನೂ ಮನ್ನಾ ಮಾಡಿ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಂಘಟನೆಯ ಜಿಲ್ಲಾ ರೈತ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಬಹುತೇಕ ರೈತರು ಬೆಳೆ ನಷ್ಟ, ಅತಿವೃಷ್ಟಿಯಿಂದಾಗಿ ಉತ್ತಮ ಬೆಳೆ ಬಾರದೆ, ಬಂದ ಬೆಳೆಗೆ ವೈಜ್ಞಾನಿಕ ದರವೂ ಸಿಗದೇ ಇರುವುದರಿಂದ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಆದ್ದರಿಂದ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಲು ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು’ ಎಂದರು.

‘ನಮ್ಮ ಹಳ್ಳಿಗಳ ಬಸ್ ನಿಲ್ದಾಣಗಳಿಲ್ಲದ ಪರಿಸ್ಥಿತಿಯಲ್ಲಿ ಸರ್ಕಾರಗಳು ಜಿಲ್ಲೆಗೊಂದರಂತೆ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಹೊರಟಿದೆ. ಅದಕ್ಕಾಗಿ ರೈತರ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಶ್ರೀಮಂತರ ಕಾರುಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿಗಾಗಿಯೂ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ. ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿಯೂ ರೈತರ ಭೂಮಿಗೆ ಸರ್ಕಾರಗಳು ಕನ್ನ ಹಾಕುತ್ತಿವೆ. ಕೆಲವೇ ಕೆಲವು ಸಾವಿರ ಉದ್ಯಮಿಗಳ ಅನುಕೂಲಕ್ಕಾಗಿ ಶೇ 60ರಷ್ಟು ದೇಶದ ಜನತೆ ಆಶ್ರಯಿಸಿರುವ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ’ ಎಂದು ಟೀಕಿಸಿದರು.

‘ರೈತ ವಿರೋಧಿ ನೀತಿಯನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಅನುಸರಿಸುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಭೂಸುಧಾರಣಾ ಕಾಯ್ದೆಯನ್ನು ವಾಪಸ್ ಪಡೆಯುವುದಾಗಿ ಹೇಳಿದ್ದರು. ಆದರೆ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ರೈತರ ವಿಚಾರಕ್ಕೆ ಬಂದಾಗ ನಾನು ರೈತರ ಪರವಾದ ನಿಲುವು ತೆಗೆದುಕೊಳ್ಳುತ್ತೇನೆ. ನಮ್ಮ ಕಾಂಗ್ರೆಸ್ ಸರ್ಕಾರದ ಧೋರಣೆಗಳ ವಿರುದ್ಧವೂ ಮಾತನಾಡಿದ್ದೇನೆ’ ಎಂದು ಹೇಳಿದರು.

‘ವಿದೇಶದಿಂದ ಪಪ್ಪಾಯ, ದಾಳಿಂಬೆ ಸಸಿಗಳನ್ನು ತರಿಸಿ ಬಿತ್ತನೆ ಮಾಡಿದ್ದೆವು. ಬೆಳೆ ಬಂದಾಗ ಅವುಗಳಿಗೆ ಉತ್ತಮ ಬೆಲೆ ಸಿಗಲಿಲ್ಲ. ಇದರಿಂದ ಸಾಕಷ್ಟು ನಷ್ಟವಾಯಿತು. ಇದೇ ಪರಿಸ್ಥಿತಿಯನ್ನು ಹಲವು ರೈತರು ಎದುರಿಸುತ್ತಿದ್ದಾರೆ’ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ರಾಜ್ಯ ಕಾರ್ಯದರ್ಶಿ ಗೋಪಾಲ ಪಾಪೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರಪ್ಪ ಥಂಬೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಎಸ್. ಅಕ್ಕಿ, ಜಿಲ್ಲಾ ಗೌರವಾಧ್ಯಕ್ಷ ಉಮಾಪತಿ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಕೆ. ರಾಗಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಂಜುಳಾ ಭಜಂತ್ರಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

‘ಭಾರಿ ಪ್ರಮಾಣದಲ್ಲಿ ರೈತರ ಭೂಮಿ ಸ್ವಾಧೀನ’
ಕೈಗಾರಿಕೆಗಳ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಸರ್ಕಾರಗಳು ಸ್ವಾಧೀನ ಮಾಡಿಕೊಳ್ಳುತ್ತಿವೆ. ಈ ಬಗ್ಗೆ ರೈತ ಸಮುದಾಯ ಧ್ವನಿ ಎತ್ತಬೇಕು ಎಂದು ಮುಖ್ಯಮಂತ್ರಿಗಳ ಸಲಹೆಗಾರ ಆಳಂದ ಶಾಸಕ ಬಿ.ಆರ್. ಪಾಟೀಲ ಸಲಹೆ ನೀಡಿದರು. ರೈತ ಸಮಾವೇಶದಲ್ಲಿ ಮಾತನಾಡಿದ ಅವರು ‘ಸಾವಿರಾರು ಎಕರೆ ಭೂಸ್ವಾಧೀನ ಮಾಡಿ ಕೈಗಾರಿಕೆಗಳ ಸ್ಥಾಪನೆಗೆ ನೀಡಲಾಗುತ್ತದೆ. ಆದರೆ ಅಷ್ಟೂ ಭೂಮಿ ಬಳಕೆಯಾಗಿರುವುದಿಲ್ಲ. ಬೆಳೆ ಬೆಳೆಯುವ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ನಿಯಂತ್ರಣ ಕ್ರಮಗಳನ್ನು ರೂಪಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT