ಕಲಬುರ್ಗಿ: ನಗರದ ರೈಲ್ವೆ ನಿಲ್ದಾಣ ಅಥವಾ ಬಸ್ ನಿಲ್ದಾಣದಲ್ಲಿ ತಡರಾತ್ರಿ ಬಂದಿಳಿಯುವ ಪ್ರಯಾಣಿಕರು ತಮ್ಮ ಮನೆ ತಲುಪಲು ಪರದಾಡುವಂತಹ ಸ್ಥಿತಿ ಇದೆ. ನಗರದಲ್ಲಿ ಪ್ರೀಪೇಯ್ಡ್ ಆಟೊ ನಿಲ್ದಾಣ ಸ್ಥಾಪಿಸಬೇಕು ಎನ್ನುವ ಪ್ರಯತ್ನ ಹಲವು ವರ್ಷಗಳಿಂದ ನಡೆಯುತ್ತಿದ್ದು, ಇನ್ನೂ ಕೈಗೂಡಲಿಲ್ಲ.

ನಗರದ ರೈಲ್ವೆ ನಿಲ್ದಾಣಕ್ಕೆ ರಾತ್ರಿ 10ರಿಂದ ಬೆಳಿಗ್ಗೆ 6ರ ನಡುವೆ 16ಕ್ಕೂ ಹೆಚ್ಚು ರೈಲುಗಳು ಎರಡೂ ಕಡೆಯಿಂದ ಬರುತ್ತವೆ. ಇವುಗಳಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಬಂದಿಳಿಯುತ್ತಾರೆ ಮತ್ತು ರೈಲು ಹತ್ತುವ ಸಲುವಾಗಿ ಬರುತ್ತಾರೆ. ಆದರೆ ತಡ ರಾತ್ರಿಯಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ಆತಂಕ ಪಡುವಂತಾಗಿದೆ.

ಇಲ್ಲಿ ರಾತ್ರಿ ಸಮಯ ಆಟೊಗಳು ಸಿಗುತ್ತವೆ. ಆದರೆ ಅವರು ಕೇಳುವ ದರ ಬೆಚ್ಚಿಬೀಳುವಂತೆ ಇರುತ್ತದೆ. ಒಂದೆರಡು ಕಿ.ಮೀ ದೂರಕ್ಕೂ ₹100ರಿಂದ ₹150 ಕೇಳುತ್ತಾರೆ. ಇನ್ನು 5–6 ಕಿ.ಮೀ ದೂರವಿದ್ದರೆ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಹಣ ಕೊಡಬೇಕು. ತಡರಾತ್ರಿ ಅವರು ಕೇಳಿದಷ್ಟು ಹಣ ಕೊಡದಿದ್ದರೆ ರಾತ್ರಿಯೆಲ್ಲಾ ನಿಲ್ದಾಣದಲ್ಲಿಯೇ ಕಾಲ ಕಳೆಯಬೇಕು. ಕುಟುಂಬದೊಂದಿಗೆ ಬರುವವರಿಗೆ ಇದು ತ್ರಾಸದಾಯಕ ಸ್ಥಿತಿ.

ಅಲ್ಲದೆ ಆಟೊಗಳಲ್ಲಿ ಪ್ರಯಾಣಿಸಲು ಸುರಕ್ಷತೆ ಪ್ರಶ್ನೆ ಸಹ ಎದುರಾಗುತ್ತದೆ. ಈ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಆಟೊದಲ್ಲಿ ಹೋದ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಹಣ ದೋಚಲಾಗಿತ್ತು. ಆನಂತರ ರಾತ್ರಿ ಸಮಯದಲ್ಲಿ ಒಂಟಿ ಮಹಿಳೆಯರು ಆಟೊದಲ್ಲಿ ಪ್ರಯಾಣಿಸುವುದು ಆತಂಕಕಾರಿ ಎನ್ನುವಂತಾಗಿದೆ.

ನಗರದ ರೈಲ್ವೆ ನಿಲ್ದಾಣದಲ್ಲಿ ಮೇ 2011ರಲ್ಲಿ ಪ್ರೀಪೇಯ್ಡ್ ಆಟೊ ನಿಲ್ದಾಣ ಆರಂಭಿಸಲಾಗಿತ್ತು. ಅಂದಿನ ಐಜಿಪಿ ಕೆ.ವಿ.ಗಗನದೀಪ್ ಪ್ರೀಪೇಯ್ಡ್ ಟಿಕೆಟ್ ಕೌಂಟರ್ ಉದ್ಘಾಟನೆ ಮಾಡಿದ್ದರು. ಆದರೆ ಇದು 6 ತಿಂಗಳೂ ನಡೆಯಲಿಲ್ಲ. ರಾತ್ರಿ ಸಮಯದಲ್ಲಿ ಸಾಮಾನ್ಯ ದರಕ್ಕಿಂತ ಒಂದೂವರೆ ಪಟ್ಟು ಆಟೊ ದರ ನಿಗದಿ ಮಾಡಲಾಗಿತ್ತು. ಆದರೆ ಇದಕ್ಕೆ ಆಟೊ ಚಾಲಕರು ಸಹಕಾರ ನೀಡದ ಕಾರಣ ಕೆಲವೇ ದಿನಗಳಲ್ಲಿ ಕೌಂಟರ್ ಮುಚ್ಚಿಹೋಯಿತು ಎಂದು ಅಧಿಕಾರಿಯೊಬ್ಬರು ಸ್ಮರಿಸಿದರು.

ಪ್ರೀಪೇಯ್ಡ್ ಆಟೊ ನಿಲ್ದಾಣವಿದ್ದರೆ ಆಸಕ್ತ ಚಾಲಕರು ಇಲ್ಲಿ ನೋಂದಣಿ ಮಾಡಿಕೊಂಡು ಸೇವೆ ನೀಡಬಹುದು. ಈ ಮೊದಲೇ ಆಟೊ ಚಾಲಕರು ಮತ್ತು ಆಟೊದ ಸಂಪೂರ್ಣ ವಿವರ ನೋಂದಣಿ ಆಗಿರುತ್ತದೆ. ಯಾವ ಪ್ರಯಾಣಿಕರನ್ನು, ಎಲ್ಲಿಗೆ, ಯಾವ ಚಾಲಕ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇರುವುದರಿಂದ ಪ್ರಯಾಣಿಕರು ನಿರಾಂತಕವಾಗಿ ಮನೆ ತಲುಪಬಹುದು. ಕುಟುಂಬ ಸಮೇತರಾಗಿ ತಡರಾತ್ರಿ ಬಂದರೂ ನಿರಾಂತಕವಾಗಿ ಪ್ರಯಾಣ ಮಾಡಬಹುದು.

ಪ್ರೀಪೇಯ್ಡ್ ನಿಲ್ದಾಣ ಎಂದರೇನು?

ಬೆಂಗಳೂರು ಮತ್ತು ಮೈಸೂರಿನಂತಹ ನಗರದಲ್ಲಿ ಪ್ರೀಪೇಯ್ಡ್ ಆಟೊ ನಿಲ್ದಾಣಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಮಾತ್ರವಲ್ಲದೆ ಆಸ್ಪತ್ರೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ.

ಈ ವ್ಯವಸ್ಥೆ ಇರುವ ಕಡೆ ಪ್ರಯಾಣಿಕರು ತಮ್ಮ ಗಮ್ಯ ಸ್ಥಾನವನ್ನು ಮೊದಲೇ ಆಟೊ ಕೌಂಟರ್‌ನಲ್ಲಿ ತಿಳಿಸಿದರೆ, ಪ್ರಯಾಣದ ಅಂತರಕ್ಕೆ ಅನುಗುಣವಾಗಿ ನಿಗದಿತ ದರ ಪಾವತಿಸಿ ಟಿಕೆಟ್ ಪಡೆಯಬಹುದು. ಬಸ್ ಟಿಕೆಟ್ ಮಾದರಿಯಲ್ಲಿ ಕಂಪ್ಯೂಟರ್ ಆಧಾರಿತ ಟಿಕೆಟ್ ನೀಡಲಾಗುತ್ತದೆ. ಹೆಚ್ಚುವರಿಯಾಗಿ ₹1 ಸೇವಾ ಶುಲ್ಕ ವಿಧಿಸಲಾಗುತ್ತದೆ. ನೋಂದಾಯಿತ ಆಟೊ ಚಾಲಕರು ಪ್ರಯಾಣಿಕರನ್ನು ಗಮ್ಯ ಸ್ಥಾನಕ್ಕೆ ತಲುಪಿಸಬೇಕು. ಇದರಿಂದ ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆಯಲು ಸಾಧ್ಯವಾಗುವುದಿಲ್ಲ.

ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ (ಆರ್‌ಟಿಎ) ಚರ್ಚಿಸಿ ಪ್ರೀಪೇಯ್ಡ್ ಆಟೊ ನಿಲ್ದಾಣ ಸ್ಥಾಪನೆ ಬಗ್ಗೆ ಕ್ರಮಕೈಗೊಳ್ಳಬೇಕು. ಆದರೆ ಇತ್ತೀಚೆಗೆ ನಡೆದಿರುವ ಯಾವುದೇ ಸಭೆಯಲ್ಲಿ ಈ ಬಗ್ಗೆ ಚರ್ಚೆ ಸಹ ನಡೆದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಟೊಗಳಿಗೆ ಮೀಟರ್ ಇಲ್ಲ: ಪ್ರಯಾಣಿಕರ ಜೇಬಿಗೆ ಕತ್ತರಿ

ಕಲಬುರ್ಗಿ: ನಗರದಲ್ಲಿ ಆಟೊಗಳಿಗೆ ಮೀಟರ್ ಅಳವಡಿಸುವ ಪ್ರಯತ್ನ ಯಶಸ್ವಿಯಾಗಿಲ್ಲ. ಮೀಟರ್ ಕಡ್ಡಾಯಗೊಳಿಸಿ ಹಲವು ಬಾರಿ ಪ್ರಾದೇಶಿಕ ಸಾರಿಗೆ ಇಲಾಖೆ ಆದೇಶ ನೀಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ತಪ್ಪಲಿಲ್ಲ.

ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಸಭೆಯಲ್ಲಿ 2016ರಿಂದ ಹಲವು ಬಾರಿ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಆದರೆ ಕಟ್ಟುನಿಟ್ಟಾಗಿ ಜಾರಿಗೆ ತರಲು ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು ಮುಂದಾಗದ ಕಾರಣ ಆಟೊ ಚಾಲಕರು ಮೀಟರ್ ಅಳವಡಿಸುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಈ ಹಿಂದೆ ಮೀಟರ್ ಕಡ್ಡಾಯಗೊಳಿಸಿದ್ದ ಸಾರಿಗೆ ಇಲಾಖೆ, ₹2600 ಬೆಲೆ ನಿಗದಿ ಪಡಿಸಿ ಎರಡು ಕಂಪನಿಗಳಿಗೆ ಎಲೆಕ್ಟ್ರಾನಿಕ್ಸ್ ಮೀಟರ್ ಅಳವಡಿಕೆಗೆ ಅವಕಾಶ ನೀಡಿತ್ತು. ಕಾನೂನು ಮಾಪನ ಶಾಸ್ತ್ರ ಇಲಾಖೆ ಮೀಟರ್‌ಗಳನ್ನು ಪರಿಶೀಲನೆ ನಡೆಸಿ, ಅಧಿಕೃತ ಮುದ್ರೆ ಹಾಕಬೇಕು. ಆದರೆ ನಿರೀಕ್ಷೆಯಂತೆ ಮೀಟರ್ ಅಳವಡಿಕೆ ಆಗದ ಕಾರಣ ಪ್ರಯೋಜನವಾಗಲಿಲ್ಲ.

ನಗರದಲ್ಲಿ ಪರ್ಮಿಟ್ ಇರುವ 7,800 ಆಟೊಗಳಿವೆ. ಪರ್ಮಿಟ್ ಇಲ್ಲದ ಅನಧಿಕೃತ ಸುಮಾರು 2,500 ಆಟೊಗಳಿರಬಹುದು ಎಂದು ಅಂದಾಜು ಮಾಡಲಾಗಿದೆ. ಪರ್ಮಿಟ್ ನವೀಕರಣ ಮತ್ತು ಎಫ್‌ಸಿ ಮಾಡುವಾಗ ಮೀಟರ್ ಕಡ್ಡಾಯ ಮಾಡಿರುವುದರಿಂದ ಬೆರಳೆಣಿಕೆ ಆಟೊಗಳಿಗೆ ಮಾತ್ರ ಮೀಟರ್ ಹಾಕಲಾಗಿದೆ.

ನಗರದಲ್ಲಿ ಸೀಟ್ ಆಟೊ ವ್ಯವಸ್ಥೆ ಇದೆ (ಒಬ್ಬರಿಗೆ ದರ ನಿಗದಿ). ಆದರೆ ಇದು ಮುಖ್ಯರಸ್ತೆಗೆ ಸೀಮಿತಗೊಂಡಿರುವುದರಿಂದ ಬಡಾವಣೆಗಳ ಒಳಗೆ ಹೋಗಬೇಕಾದ ಪ್ರಯಾಣಿಕರು, ಆಟೊ ಚಾಲಕರು ಕೇಳಿದಷ್ಟು ಹಣ ಕೊಡಬೇಕಾಗಿದೆ. ಎರಡು ಕಿ.ಮೀ.ವರೆಗೆ ಕನಿಷ್ಠ ಪ್ರಯಾಣ ದರ ₹23 ನಿಗದಿ ಮಾಡಲಾಗಿದೆ. ಹೆಚ್ಚುವರಿ ಒಂದು ಕಿ.ಮೀಗೆ ₹13 ದರವಿದೆ. ಆದರೆ ಈ ದರ ನಿಗದಿ ಪಾಲನೆ ಆಗುತ್ತಿಲ್ಲ.

ಜನರು ಸೀಟ್ ಆಟೊಗಳಲ್ಲಿ ಓಡಾಡುವುದರಿಂದ ಮೀಟರ್ ಬಗ್ಗೆ ಪ್ರಶ್ನಿಸುವುದಿಲ್ಲ. ₹5ರಿಂದ 10ಕ್ಕೆ ಆಟೊದಲ್ಲಿ ಓಡಾಡುತ್ತೇವೆ. ಮೀಟರ್ ಅಳವಡಿಸಿದರೆ ಹೆಚ್ಚುವರಿ ಹಣ ಕೊಡಬೇಕಾಗುತ್ತದೆ ಎಂದು ಪ್ರಯಾಣಿಕರು ಲೆಕ್ಕ ಹಾಕುವುದರಿಂದ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಆರ್‌ಟಿಒ ಕಚೇರಿ ಅಧಿಕಾರಿಗಳು.

ಆಟೊಗಳಿಗೆ ಗ್ಯಾಸ್‌ಕಿಟ್ ಅಳವಡಿಕೆ ಕಡ್ಡಾಯ. ಹಳೆಯ ಎರಡು ಸ್ಟ್ರೋಕ್ ಆಟೊಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಆಟೊಗಳಲ್ಲಿ ಗ್ಯಾಸ್‌ಕಿಟ್ ಅಳವಡಿಸಲಾಗಿದೆ. ಕೆಲವರು ಎಂಜಿನ್ ಬದಲಿಸಿ ಗ್ಯಾಸ್‌ಕಿಟ್ ಅಳವಡಿಸಿದ್ದಾರೆ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ.

ಆಟೊಗಳಿಗೆ ಕನಿಷ್ಠ ಪ್ರಯಾಣ ದರ ನಿಗದಿ ಮಾಡಿ ಮೂರು ವರ್ಷ ಕಳೆದಿದೆ. ದರ ಹೆಚ್ಚಿಸುವಂತೆ ಆಟೊ ಚಾಲಕರ ಸಂಘಗಳ ಬೇಡಿಕೆ ಇದೆ. ಈ ಬಗ್ಗೆ ಆರ್‌ಟಿಎ ಸಭೆಯಲ್ಲಿ ಚರ್ಚಿಸಿ, ನಂತರ ಆಟೊ ಮೀಟರ್ ಅಳವಡಿಕೆ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.