ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಯಾಣ ಕರ್ನಾಟಕ: ತಗ್ಗಿದ ಮಳೆ, ನದಿಗಳ ಅಬ್ಬರ

Published : 3 ಸೆಪ್ಟೆಂಬರ್ 2024, 3:29 IST
Last Updated : 3 ಸೆಪ್ಟೆಂಬರ್ 2024, 3:29 IST
ಫಾಲೋ ಮಾಡಿ
Comments

ಕಲಬುರಗಿ: ಕಲ್ಯಾಣ ಕರ್ನಾಟಕದ ಭಾಗದಲ್ಲಿ ಎರಡು ದಿನಗಳಿಂದ ತೀವ್ರಗೊಂಡಿದ್ದ ವರುಣನ ಅಬ್ಬರ ಸೋಮವಾರ ತಗ್ಗಿದೆ. ಮೋಡ ಮುಸುಕಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆ ಮುಂದುವರಿದಿದೆ. ನದಿಗಳ ಹರಿವಿನ ಪ್ರಮಾಣ ಇಳಿಕೆಯಾಗಿ ಮುಳುಗಡೆಯಾಗಿದ್ದ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ಕಲಬುರಗಿ ಮತ್ತು ಬೀದರ್ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಕಾಗಿಣಾ, ಬೆಣ್ಣೆತೊರಾ, ಮುಲ್ಲಾಮಾರಿ, ಕಮಲಾ ವತಿ ನದಿಗಳು ಉಕ್ಕಿ ಹರಿದಿದ್ದರಿಂದ 15ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ ಯಾಗಿದ್ದವು. ಕಡಿತಗೊಂಡಿದ್ದ ಸಂಪರ್ಕ ಪುನರಾರಂಭವಾಗಿದೆ.

ಕಾಗಿಣಾ ಪ್ರವಾಹದಲ್ಲಿ ಕೊಚ್ಚಿ ಕೊಂಡು ಬಂದ ಮುಳ್ಳಿನ ಗಿಡಗಂಟಿಗಳು ಸೇಡಂನ ಬಿಬ್ಬಳ್ಳಿ ಸೇತುವೆ ಉದ್ದಕ್ಕೂ ಜಮೆಯಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸಂಗಾವಿ (ಎಂ) ಗ್ರಾಮದ ನಾಲಾ ನೀರಲ್ಲಿ ಕೊಚ್ಚಿ ಹೋದ ರಾಜು ನರಸಪ್ಪ ಅವರ ಶೋಧ ಕಾರ್ಯ ಮುಂದುವರಿದಿದೆ.

ಸೇಡಂನ 33, ಅಫಜಲಪುರದ 13 ಹಾಗೂ ಕಾಳಗಿಯ 6 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಆಳಂದದಲ್ಲಿ 22 ಮನೆಗಳ ಗೋಡೆಗಳು ಹಾಗೂ ಸಾಲೇಗಾಂವ ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್‌ ಕುಸಿದು ಬಿದ್ದಿದೆ. ರಾಯಚೂರು ಜಿಲ್ಲೆಯ ಕೆಲವೆಡೆ ಜಿಟಿಜಿಟಿ ಮಳೆಯಾಗಿದ್ದು, ನಗರದ ನಿಜಲಿಂಗಪ್ಪ ಕಾಲೊನಿಯಲ್ಲಿ ಹಳೆಯ ಮರವೊಂದು ನೆಲಕ್ಕರುಳಿದೆ. ದೇವ ದುರ್ಗ, ಲಿಂಗಸುಗೂರು ತಾಲ್ಲೂಕಿ ನಲ್ಲಿ ತುಂತುರು ಮಳೆಯಾಗಿದೆ. ಇಸ್ಲಾಂಪುರ ಮೂಲಕ ಬೀದರ್–ಔರಾದ್ ಸಂಪರ್ಕಿಸುವ ಸೇತುವೆ ಮಾಂಜ್ರಾ ನದಿ ಹಿನ್ನೀರಿನಲ್ಲಿ ಮುಳುಗಿದೆ. ಮೂರು ದಿನಗಳಲ್ಲಿ ಜಿಲ್ಲೆಯ 138 ಮನೆಗಳಿಗೆ ಹಾನಿಯಾಗಿದೆ.

ಬೀದರ್‌ ಜಿಲ್ಲೆಯಾದ್ಯಂತ ಸತತ ಮೂರನೇ ದಿನವೂ ಮಳೆಯಾಗಿದೆ. ನೆರೆಯ ಮಹಾರಾಷ್ಟ್ರದಲ್ಲೂ ವ್ಯಾಪಕ ಮಳೆಯಾಗುತ್ತಿರುವ ಕಾರಣ ಮಾಂಜ್ರಾ ನದಿ ಉಕ್ಕಿ ಹರಿಯುತ್ತಿದೆ. ಕೆಲವು ಗ್ರಾಮಗಳ ಗದ್ದೆಗಳಿಗೆ ನೀರು ನುಗ್ಗಿದೆ. ಕಾರಂಜಾ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದ್ದು, ನದಿಗೆ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ 119 ಮನೆಗಳಿಗೆ ಹಾನಿಯಾಗಿದೆ.

ಔರಾದ್‌ ತಾಲ್ಲೂಕಿನ ಎಕಂಬಾ ಗ್ರಾಮದಲ್ಲಿ ಮನೆಯ ಕಬ್ಬಿಣದ ಶೀಟುಗಳಲ್ಲಿ ವಿದ್ಯುತ್‌ ಪ್ರವಹಿಸಿದ ಪರಿಣಾಮ ದಿಲೀಪ ಪವಾರ (32) ಎಂಬುವರು ಮೃತಪಟ್ಟಿದ್ದಾರೆ.

ತುಂಗಭದ್ರಾ ಅಣೆಕಟ್ಟೆ ಭರ್ತಿಗೆ 1.94 ಅಡಿ ಬಾಕಿ

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಲು 1.94 ಅಡಿ ಬಾಕಿ ಉಳಿದಿದ್ದು, ಜಲಾಶಯದಲ್ಲಿ 98.10 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 1,633 ಅಡಿ ಅಗಿದ್ದು, ಸೋಮವಾರ ಬೆಳಿಗ್ಗೆ 1,631.06 ಅಡಿ ನೀರಿನ ಮಟ್ಟ ಇತ್ತು. 105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯ ಭರ್ತಿಗೆ ಇನ್ನು 7 ಟಿಎಂಸಿ ಅಡಿ ನೀರು ಬೇಕಿದೆ. ಒಳಹರಿವಿನ ಪ್ರಮಾಣ ಸರಾಸರಿ 26,272 ಕ್ಯುಸೆಕ್‌ ಇದೆ. ಹೊರ ಹರಿವಿನ ಪ್ರಮಾಣ 15,237 ಕ್ಯುಸೆಕ್‌ ಇದೆ.

‘ಸದ್ಯದ ಸ್ಥಿತಿಯಲ್ಲೇ ಒಳಹರಿವಿನ ಪ್ರಮಾಣ ಇದ್ದರೆ ತಕ್ಷಣಕ್ಕೆ ಕ್ರಸ್ಟ್‌ಗೇಟ್ ತೆರೆಯುವ ಅಗತ್ಯ ಇಲ್ಲ. ಆದರೆ ಒಳಹರಿವಿನ ಪ್ರಮಾಣ 40 ಸಾವಿರ ಕ್ಯುಸೆಕ್‌ಗಿಂತ ಹೆಚ್ಚಾದರೆ ಕ್ರಸ್ಟ್‌ಗೇಟ್ ತೆರೆದು, ನೀರು ನದಿಗೆ ಹರಿಸುವುದು ಅನಿವಾರ್ಯ ಆಗಬಹುದು. ನದಿತೀರದ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.

ನೀರು ಹೊರಕ್ಕೆ: ಎರಡು ದಿನಗಳಿಂದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಲು ಕ್ರಸ್ಟ್‌ ಗೇಟ್ ತೆರೆಯದೆ, ಅಧಿಕ ಜಲವಿದ್ಯುತ್ ಉತ್ಪಾದನೆ ಮಾಡುವ ಮೂಲಕ 5 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಧಿಕ ನೀರು ಹೊರಬಿಡುವ ಸಂದರ್ಭ ಎದುರಾದಾಗ ಕ್ರಸ್ಟ್‌ಗೇಟ್‌ ತೆರೆಯುವುದು ಅನಿವಾರ್ಯವಾಗಲಿದೆ.

3 ಜಿಲ್ಲೆಗೆ ‘ಯೆಲ್ಲೊ ಅಲರ್ಟ್‌’

ಬೆಂಗಳೂರು: ರಾಜ್ಯದ ವಿಜಯಪುರ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಈ ಮೂರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’ ಘೋಷಿಸಿದೆ.

ಒಳನಾಡಿನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ.ಗಳಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ. ಆದ್ದರಿಂದ ಮೀನುಗಾರರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT