ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಮೂಲೆ ಸೇರಿದ ಕೃಷಿ ‘ಯಂತ್ರ’ಧಾರೆ

ಜಿಲ್ಲೆಯಲ್ಲಿದೆ 32 ಕೇಂದ್ರಗಳು: ಎಡತಾಕಿದರೂ ರೈತರಿಗೆ ಸಿಗದ ಉಪಕರಣ
Published 23 ಜುಲೈ 2024, 4:40 IST
Last Updated 23 ಜುಲೈ 2024, 4:40 IST
ಅಕ್ಷರ ಗಾತ್ರ

ಕಲಬುರಗಿ: ‘ಬಾಡಿಗೆ ದರಗಳನ್ನು ಪರಿಷ್ಕರಿಸಿ ಹಲವು ವರ್ಷಗಳೇ ಕಳೆದಿವೆ. ಇಂಧನ ಬೆಲೆಯು ದಿನದಿಂದ ದಿನಕ್ಕೆ ಗಗನಕುಸುಮವಾಗುತ್ತಿದೆ. ಸರ್ಕಾರ ನೀಡಿದ ಕೃಷಿ ಉಪಕರಣಗಳು ಮೂಲೆ ಸೇರುತ್ತಿವೆ. ದುರಸ್ತಿ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ನಷ್ಟದ ಹಾದಿಯಲ್ಲಿದ್ದೇವೆ....’

ಕೃಷಿ ಯಂತ್ರಧಾರೆ ಕೇಂದ್ರವೊಂದರ ವ್ಯವಸ್ಥಾಪಕರೊಬ್ಬರ ಈ ಮಾತು ಕೃಷಿ ಯಂತ್ರಧಾರೆ ಯೋಜನೆಯ ಅವನತಿ ಹಂತವನ್ನು ಪ್ರತಿಬಿಂಬಿಸುತ್ತದೆ.

ದಿನದಿಂದ ದಿನಕ್ಕೆ ಕೃಷಿ ಕ್ಷೇತ್ರದ ಬಿಕ್ಕಟ್ಟುಗಳು ಹೆಚ್ಚುತ್ತಿವೆ. ಅವುಗಳಲ್ಲಿ ಕೃಷಿ ವೆಚ್ಚ ಕೂಡ ಒಂದು. ಇದು ರೈತರನ್ನು ಕೃಷಿಯಿಂದ ವಿಮುಖರನ್ನಾಗಿ ಮಾಡುತ್ತಿದೆ. ಇದನ್ನು ತಪ್ಪಿಸಲು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ರೈತರಿಗೆ ಯಂತ್ರಗಳನ್ನು ಬಾಡಿಗೆ ನೀಡುವ ಉದ್ದೇಶದಿಂದ ಸರ್ಕಾರ 2014–2015ರಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರಂಭಿಸಿತು. ಈಗ ಅವು ಅನುದಾನದ ಕೊರತೆಯಿಂದ ತೆವಳುತ್ತಿವೆ.

ಜಿಲ್ಲೆಯಲ್ಲಿ 32 ಕೃಷಿ ಯಂತ್ರಧಾರೆ ಕೇಂದ್ರಗಳಿವೆ. ಬೇರೆ ಬೇರೆ ಏಜೆನ್ಸಿಗಳು ಇವುಗಳನ್ನು ನಡೆಸುತ್ತಿವೆ. ಇಲ್ಲಿ ಯಂತ್ರಗಳ ಮಾದರಿ ಆಧಾರದಲ್ಲಿ ಗಂಟೆ, ಎಕರೆಗೆ ₹135 ರಿಂದ ₹1,350ರವರೆಗೆ ದರ ನಿಗದಿಪಡಿಸಲಾಗಿದೆ. ಮಹೀಂದ್ರಾ ಅಂಡ್ ಮಹೀಂದ್ರಾ (ಸ್ವರಾಜ್) ಮತ್ತು ಕ್ಲಾಸ್ ಅಗ್ರಿಕಲ್ಚರ್ ಮೆಷನರಿ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಚ್ಚಿನ ಕೇಂದ್ರಗಳನ್ನು ಹೊಂದಿವೆ.

ಇಂಧನ ವೆಚ್ಚ ಹೆಚ್ಚಳ, ಹೊಸ ಉಪಕರಣ ನೀಡದಿರುವುದು, ದರ ಪರಿಷ್ಕರಣೆ ಮಾಡದಿರುವುದು ಹಾಗೂ ದುಬಾರಿ ಯಂತ್ರ ದುರಸ್ತಿ ವೆಚ್ಚ ಈ ಕೇಂದ್ರಗಳನ್ನು ಹೈರಾಣಾಗಿಸಿದೆ. ಕೇಂದ್ರಗಳು ಸುಸ್ಥಿತಿಯಲ್ಲಿರುವ ಯಂತ್ರಗಳ ಕೊರತೆ ಎದುರಿಸುತ್ತಿವೆ. ರೈತರು ಬಾಡಿಗೆ ಯಂತ್ರಗಳಿಗಾಗಿ ಕೇಂದ್ರಗಳಿಗೆ ಎಡತಾಕಿದರೂ ಸಿಗುತ್ತಿಲ್ಲ. 

2018–19ರಲ್ಲಿ ಬಾಡಿಗೆ ಪರಿಷ್ಕರಣೆ: ಯೋಜನೆಯಡಿ ನೀಡುವ ಯಂತ್ರಗಳ ಬಾಡಿಗೆ ಪರಿಷ್ಕರಿಸುವ ಹೊಣೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ಜಿಲ್ಲಾ ಉಪಕರಣ ಸಮಿತಿಗೆ ವಹಿಸಲಾಗಿದೆ. ಜಂಟಿ ಕೃಷಿ ನಿರ್ದೇಶಕರು ಉಪಾಧ್ಯಕ್ಷರಾಗಿರುತ್ತಾರೆ. ಕಾಲ ಕಾಲಕ್ಕೆ ಸಭೆ ಸೇರಿ ದರ ಪರಿಷ್ಕರಣೆ ಮಾಡಬೇಕು. ಆದರೆ, ಜಿಲ್ಲೆಯಲ್ಲಿ ಕೊನೆಯದಾಗಿ 2018–19ರಲ್ಲಿ ದರ ಪರಿಷ್ಕರಣೆ ಮಾಡಲಾಗಿದೆ. ಇದರಿಂದ ಏಜೆನ್ಸಿಗಳು ಸಂಕಷ್ಟಕ್ಕೆ ಸಿಲುಕಿವೆ. ಇಂಧನ ದರ ಹೆಚ್ಚಳ ದೃಷ್ಟಿಯಲ್ಲಿಟ್ಟುಕೊಂಡು ಬಾಡಿಗೆ ಪರಿಷ್ಕರಣೆ ಮಾಡಬೇಕು ಎನ್ನುವುದು ಏಜೆನ್ಸಿಗಳ ಆಗ್ರಹವಾಗಿದೆ. 

ಯಂತ್ರಗಳ ನಿರ್ವಹಿಸುವುದೇ ಸವಾಲು: ಯಂತ್ರಗಳು ಪದೇ ಪದೇ ದುರಸ್ತಿಗೆ ಬರುತ್ತವೆ. 2–3 ಬಾರಿ ದುರಸ್ತಿ ಮಾಡಿದ ಬಳಿಕ ಮೂಲೆ ಸೇರುತ್ತವೆ. ನಿಗದಿತ ಅವಧಿಯೊಳಗೆ ಸರ್ಕಾರ ಹೊಸ ಯಂತ್ರಗಳನ್ನು ನೀಡಬೇಕು. ನಮ್ಮ ಕೇಂದ್ರಕ್ಕೆ ಸರ್ಕಾರ ನೀಡಿದ ನಾಲ್ಕು ಟ್ರ್ಯಾಕ್ಟರ್‌ಗಳಲ್ಲಿ ಒಂದು ಮಾತ್ರ ಸುಸ್ಥಿಯಲ್ಲಿದೆ. ರೈತರ ಬೇಡಿಕೆಗೆ ತಕ್ಕಂತೆ ಕೆಲಸ ಮಾಡಲಾಗುತ್ತಿಲ್ಲ ಎಂದು ಏಜೆನ್ಸಿಯ ವ್ಯವಸ್ಥಾಪಕರೊಬ್ಬರು ತಿಳಿಸಿದರು.

ಉಳಿದ ಕೇಂದ್ರಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ ಎಂದು ರೈತ ಸಂಘದ ಮುಖಂಡರು ಹೇಳುತ್ತಾರೆ.

ಅನುದಾನದ ಕೊರತೆಯಿಂದ ಹೊಸ ಯಂತ್ರಗಳನ್ನು ಒದಗಿಸಲಾಗಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದ ಸಮಿತಿ ದರ ಪರಿಷ್ಕರಣೆ ಮಾಡಲಿದೆ

-ಸಮದ್ ಪಟೇಲ್ ಜಂಟಿ ಕೃಷಿ ನಿರ್ದೇಶಕ ಕಲಬುರಗಿ

ಸರ್ಕಾರ ಕೃಷಿ ಯಂತ್ರಧಾರೆ ಕೇಂದ್ರಗಳ ಬಲವರ್ಧನೆಗೆ ಪ್ರಯತ್ನಿಸಬೇಕು. ರೈತರ ಬೇಡಿಕೆಗೆ ತಕ್ಕಂತೆ ಯಂತ್ರಗಳನ್ನು ಬಾಡಿಗೆಗೆ ನೀಡಬೇಕು

- ಮಲ್ಲಿಕಾರ್ಜುನ ಗಂವಾರ ಜಿಲ್ಲಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಸರ್ಕಾರ ಇಂಧನ ದರ ಹಾಗೂ ಯಂತ್ರಗಳ ನಿರ್ವಹಣೆ ವೆಚ್ಚ ದೃಷ್ಟಿಯಲ್ಲಿಟ್ಟುಕೊಂಡು ಬಾಡಿಗೆ ಪರಿಷ್ಕರಣೆ ಮಾಡಬೇಕು. ಕೇಂದ್ರಗಳಿಗೆ ಹೊಸ ಯಂತ್ರಗಳನ್ನು ಒದಗಿಸಬೇಕು.

-ಪ್ರಸನ್ನ ವ್ಯವಸ್ಥಾಪಕ ಕೃಷಿ ಯಂತ್ರಧಾರೆ ಕೇಂದ್ರ ಕಲಬುರಗಿ

ಬಾಡಿಗೆಗೆ ನೀಡುವ ಉಪಕರಣ

ಈ ಯೋಜನೆಯಡಿ ಆಯಾ ಪ್ರದೇಶಗಳಿಗೆ ಅನುಗುಣವಾಗಿ 44 ಉಪಕರಣಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಟ್ರ್ಯಾಕ್ಟರ್ ರಿವರ್ಸಿಬಲ್ ನೇಗಿಲು ರೋಟೊವೇಟರ್ ಬೀಜ ಬಿತ್ತನೆ ಕೂರಿಗೆ ರಸಗೊಬ್ಬರ ಬಿತ್ತನೆ ಕೂರಿಗೆ ಕಲ್ಟಿವೇಟರ್ ಡಬಲ್ ಬಾಟಂ ನೇಗಿಲು ಫ್ರಂಟ್ ಲೆವೆಲರ್ ಒಕ್ಕಣೆ ಯಂತ್ರ ಪವರ್ ಟ್ರಿಲ್ಲರ್ ಭತ್ತ ಬಿತ್ತನೆ ಕೂರಿಗೆ ಭತ್ತ ಒಕ್ಕಣೆ ಯಂತ್ರ ಸೇರಿ ವಿವಿಧ ಉಪಕರಣಗಳನ್ನು ಬಾಡಿಗೆಗೆ ನೀಡಲಾಗುತ್ತದೆ.

ಒಕ್ಕಣೆ ಯಂತ್ರಗಳಿಗೆ ಬೇಡಿಕೆ

‘ಜಿಲ್ಲೆಯಲ್ಲಿ ರೈತರು ಬಿತ್ತನೆ ಸಮಯದಲ್ಲಿ ಯಂತ್ರಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗುವುದು ಕಡಿಮೆ. ಬೆಳೆ ಕೊಯ್ಲಿಗೆ ಬಂದಾಗ ಹೆಚ್ಚಿನ ಸಂಖ್ಯೆಯ ರೈತರು ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಎಡತಾಕುತ್ತಾರೆ. ಒಕ್ಕಣೆ ಯಂತ್ರಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಾರೆ. ಯಂತ್ರಗಳಿಂದಲೇ ತೊಗರಿ ಕೊಯ್ಲು ಮಾಡುತ್ತಾರೆ’ ಎಂದು ಕೃಷಿ ಅಧಿಕಾರಿಗಳು ತಿಳಿಸುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT