ಮಂಗಳವಾರ, 24 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಗಳಗಿ: ಶಾಲಾ ಕಟ್ಟಡ ಶಿಥಿಲ, ಆತಂಕ

ಸಿದ್ದರಾಜ ಎಸ್ ಮಲ್ಕಂಡಿ
Published : 24 ಸೆಪ್ಟೆಂಬರ್ 2024, 4:53 IST
Last Updated : 24 ಸೆಪ್ಟೆಂಬರ್ 2024, 4:53 IST
ಫಾಲೋ ಮಾಡಿ
Comments

ವಾಡಿ: ಪಟ್ಟಣ ಸಮೀಪದ ಇಂಗಳಗಿ ಪ್ರೌಢಶಾಲೆಯ ಕಟ್ಟಡಗಳು ಸಂಪೂರ್ಣ ಹಾಳಾಗಿದ್ದು ಮಳೆ ಬಂದರೆ ಸೋರುತ್ತಿವೆ. ಇದರಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗಿದ್ದು ಹೊಸ ಕೋಣೆಗಳ ನಿರ್ಮಾಣಕ್ಕೆ ಒತ್ತಾಯ ಕೇಳಿಬಂದಿದೆ.

ಕಳಪೆ ಕಾಮಗಾರಿಯಿಂದ ಕೊಠಡಿ ಚಾವಣಿ ಮೇಲೆ ಮಳೆ ನೀರು ನಿಲ್ಲುತ್ತಿದ್ದು ಕೊಳೆತು ಹೋಗಿದೆ. ಸ್ವಲ್ಪ ಮಳೆ ಬಂದರೆ ಚಾವಣಿ ಮೂಲಕ ಹನಿಹನಿಯಾಗಿ ನೀರು ಮಕ್ಕಳ ನೆತ್ತಿ ಮೇಲೆ ಬೀಳುತ್ತದೆ. ಚಾವಣಿ ರಾಡುಗಳು ಸತ್ವ ಕಳೆದುಕೊಂಡಿದ್ದು ಪದರು ಕಳಚಿ ಬೀಳುತ್ತಿದೆ. ಶಿಥಿಲ ಕೊಠಡಿಗಳು ಮಳೆಗಾಲದಲ್ಲಿ ಅಪಾಯದ ಕರೆ ಬಾರಿಸುತ್ತಿವೆ. ಪ್ರಾಣಾಪಾಯದಲ್ಲಿ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಮಳೆ ನೀರು ಬೀಳುತ್ತಿದ್ದುದರಿಂದ ಕುಳಿತುಕೊಳ್ಳುವ ಬೆಂಚುಗಳು ತುಕ್ಕು ಹಿಡಿದು ಹಾಳಾಗಿದ್ದು ಬಳಸಲು ಸೂಕ್ತವಾಗಿಲ್ಲ.

ಕಾಗಿಣಾ ನದಿ ಪಕ್ಕದಲ್ಲೇ ಶಾಲಾ ಕಟ್ಟಡ ಇದ್ದು ಒಟ್ಟು 5 ಕೋಣೆಗಳು ಸಂಪೂರ್ಣ ಸೋರುತ್ತಿವೆ. ಕಚೇರಿ ಕಟ್ಟಡ ಮಳೆ ನೀರಿನಿಂದ ತೊಯ್ದು ತೊಪ್ಪೆಯಾಗಿ ಕಡತಗಳಿಗೆ ರಕ್ಷಣೆ ಇಲ್ಲದಂತಾಗಿದೆ.

8 ರಿಂದ 10ನೇ ತರಗತಿಯ ಒಟ್ಟು 125 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. 10 ಜನ ಶಿಕ್ಷಕರು ಪಾಠದಲ್ಲಿ ತೊಡಗಿಕೊಂಡಿದ್ದು ಉತ್ತಮವಾಗಿ ಶಾಲೆ ನಡೆಯುತ್ತಿದೆ. ಆದರೆ ಕೋಣೆಗಳದ್ದೆ ದೊಡ್ಡ ಸಮಸ್ಯೆಯಾಗಿದೆ. ಕಟ್ಟಡದ ಐದೂ ಕೊಠಡಿಗಳು ಶಿಥಿಲಗೊಂಡಿದ್ದು, ಮಳೆ ನೀರು ಇಂಗಿ ಗೋಡೆಗಳು ಹಾಗೂ ಮೇಲ್ಚಾವಣಿ ಪದರು ಕಳಚಿ ಬೀಳುತ್ತಿದೆ. ಮಳೆ ಬಂದರೆ ಎಲ್ಲ ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಹೇಳಬೇಕಾದ ಸ್ಥಿತಿ ಇದ್ದು ಕೂಡಲೇ ಹೊಸ ಕೋಣೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎನ್ನುವುದು ವಿದ್ಯಾರ್ಥಿಗಳು, ಸ್ಥಳೀಯರ ಒತ್ತಾಯವಾಗಿದೆ.

2007ರಲ್ಲಿ ಪ್ರೌಢಶಾಲೆ ಆರಂಭಗೊಂಡಿದ್ದು 2012ರಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಆದರೆ ಅವೈಜ್ಞಾನಿಕ ಕಾಮಗಾರಿಯಿಂದ ಸಂಪೂರ್ಣ ಸೋರುತ್ತಿದ್ದು ಬಳಕೆಗೆ ಅಯೋಗ್ಯವಾಗಿವೆ. ಕಟ್ಟಡಕ್ಕೆ ಮೆಟ್ಟಿಲು ನಿರ್ಮಿಸಿಲ್ಲ. ಶಾಲೆ ನದಿ ಪಕ್ಕದಲ್ಲೇ ಇರುವುದರಿಂದ ನೆರೆ ಬಂದಾಗ ಹಾವು ಚೇಳುಗಳು ಒಳಬರುತ್ತಿದ್ದು ಸುರಕ್ಷತೆ ಕಲ್ಪಿಸಬೇಕು ಎನ್ನುವುದು ಪೋಷಕರ ಒತ್ತಾಯವಾಗಿದೆ. 

ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಟ್ಟಡ ದುರಸ್ತಿಗೆ ಕ್ರಿಯಾಯೋಜನೆ ರೂಪಿಸುತ್ತಿದ್ದು ಇಂಗಳಗಿ ಶಾಲಾ ಕಟ್ಟಡ ದುರಸ್ತಿಗೆ ಕ್ರಮವಹಿಸಲಾಗುವುದು
ಶಶಿಧರ ಬಿರಾದಾರ ಬಿಇಒ ಚಿತ್ತಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT