ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: 2 ಕೊಠಡಿಯಲ್ಲಿ ನಿತ್ಯ 10 ಕೆ.ಜಿ ಅಣಬೆ ಬೆಳೆದು ಯಶಸ್ಸು ಕಂಡ ಮಹಿಳೆ

2 ಕೊಠಡಿಯಲ್ಲಿ ನಿತ್ಯ 10 ಕೆ.ಜಿ, ಅಣಬೆ ಬೆಳೆಯುವ ಸಾಧಕಿ
Published 26 ಜುಲೈ 2024, 5:46 IST
Last Updated 26 ಜುಲೈ 2024, 5:46 IST
ಅಕ್ಷರ ಗಾತ್ರ

ಮಡಿಕೇರಿ: ಕೇವಲ 2 ಕೊಠಡಿಗಳಲ್ಲಿ ದಿನಕ್ಕೆ 10 ಕೆ.ಜಿ ಅಣಬೆ ಬೆಳೆದು, ಅದರ ಮೌಲ್ಯವರ್ಧಿತ ಉತ್ಪನ್ನಗಳನ್ನು ತಮ್ಮದೇ ‌ಬ್ರಾಂಡ್ ಮೂಲಕ ಮಾರುಕಟ್ಟೆಗೆ ಪರಿಚಯಿಸಿದವರು ಮಾಲ್ದಾರೆ ಗ್ರಾಮದ ನಿಶಾ ಥಾಮಸ್.

15 ವರ್ಷಗಳ ಕಾಲ ಬೆಂಗಳೂರಿನಲ್ಲಿ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡಿ ಕೋವಿಡ್ ಸಂದರ್ಭದಲ್ಲಿ ಮಾಲ್ದಾರೆಗೆ ಪತಿ ಕುರಿಯನ್ ಜಾರ್ಜ್ ಜೊತೆ ಬಂದು ನೆಲನಿಂತ ಇವರು ಇಂದು ಜಿಲ್ಲೆಯಲ್ಲಿ ಪ್ರಗತಿಪರ ಕೃಷಿಕರು ಎಂಬ ಹೆಸರು ಪಡೆದಿದ್ದಾರೆ.

ಕಾಫಿಯೊಂದಿಗೆ ಇವರು ಕೇವಲ 2 ಕೊಠಡಿಯಲ್ಲಿ ಅಣಬೆಗಳನ್ನು ರಾಸಾಯನಿಕ ರಹಿತವಾಗಿ ಬೆಳೆದು, ಅದನ್ನು ತಮ್ಮದೇ ಬ್ರಾಂಡ್‌ನಲ್ಲಿ ಮಾರುಕಟ್ಟೆಗೆ ತಂದಿದ್ದಾರೆ. ಇದೀಗ ಸಿದ್ದಾಪುರ ಹಾಗೂ ಪಿರಿಯಾಪಟ್ಟಣಗಳಲ್ಲಿ ಇವರ ‘ದ ಬೆಟರ್ ಮಶ್ರೂಮ್ಸ್’ ಹೆಸರಿನ ಅಣಬೆ ಪ್ಯಾಕೇಟ್‌ಗಳು ಮಾರಾಟವಾಗುತ್ತಿವೆ.

ಸಾಮಾನ್ಯವಾಗಿ ಅಣಬೆ ಬೇಸಾಯ ಮಳೆಗಾಲದಲ್ಲಿ ಮಾತ್ರವೇ ಯಶಸ್ಸು ಕಾಣುತ್ತದೆ. ಆದರೆ, ಇವರು ವರ್ಷಪೂರ್ತಿ ಅಣಬೆ ಬೆಳೆಯಲು ನಿಶ್ಚಯಿಸಿ ತಮ್ಮ ತೋಟದಲ್ಲಿದ್ದ 2 ಕೊಠಡಿಗಳನ್ನು ಹವಾನಿಯಂತ್ರಿತ ಕೊಠಡಿಗಳನ್ನಾಗಿ ಪ‍ರಿವರ್ತಿಸಿದರು. ನಂತರ, ಮೇಲಿಂದ ಕೆಳಗೆ ಉದ್ದುದ್ದವಾಗಿ ಬುಟ್ಟಿಗಳನ್ನಿಟ್ಟು ಅಣಬೆ ಬೆಳೆಯಲು ಆರಂಭಿಸಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದ ಅವರು, ‘ಮುಖ್ಯವಾಗಿ ನಾವು ರಾಸಾಯನಿಕ ರಹಿತವಾಗಿ ಅಣಬೆ ಬೆಳೆಯುತ್ತೇವೆ. ಪೌಷ್ಟಿಕಾಂಶಯುಕ್ತ ನಮ್ಮ ಆಯಿಸ್ಟರ್ ಅಣಬೆಗಳು ಬಿಳಿ ಮತ್ತು ಪಿಂಕ್‌ ಬಣ್ಣಗಳಿಂದ ಕೂಡಿವೆ. ನಮ್ಮದೇ ಬ್ರಾಡಿಂಗ್ ಮಾಡಿ, ಅದನ್ನ ಮಾರುಕಟ್ಟೆಗೆ ಪರಿಚಯಿಸಿದ್ದು, ಒಳ್ಳೆಯ ಬೇಡಿಕೆ ವ್ಯಕ್ತವಾಗಿದೆ’ ಎಂದು ಹೇಳಿದರು.

ಅಣಬೆ ಹೆಚ್ಚು ಬೆಳೆದಾಗ ಅದನ್ನು ಒಣಗಿಸಿ, ಅದನ್ನು ಚಟ್ನಿ ಪುಡಿ ರೂಪದಲ್ಲಿಯೂ ಅವರು ಹೊಸ ಮೌಲ್ಯವರ್ಧಿತ ಉತ್ಪನ್ನವನ್ನು ಪರಿಚಯಿಸಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಉತ್ತಮ ಬೇಡಿಕೆಯೂ ವ್ಯಕ್ತವಾಗಿದೆ. ಅಣಬೆ ಕೃಷಿಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ಅವರು ಅದಕ್ಕೆಂದೇ ಪ್ರತ್ಯೇಕ ಶೆಡ್‌ ಅನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ಔಷಧೀಯ ಗುಣವುಳ್ಳ ಅಣಬೆಗಳನ್ನು ಬೆಳೆಯುವ ಉದ್ದೇಶ ಹೊಂದಿದ್ದಾರೆ. ತೋಟಗಾರಿಕೆ ಇಲಾಖೆ ಇವರಿಗೆ ಸಹಕಾರ ನೀಡಿದೆ.

ಕಾ‍ಫಿ ಬೆಳೆಯಲ್ಲೂ ಇವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇವರ ಕಾಫಿ ಉತ್ತಮ ಗುಣಮಟ್ಟದ್ದು ಎಂಬ ಕೀರ್ತಿಗೆ ‘ಟಾಪ್‌ರೋಸ್ಟರ್ಸ್’ನಲ್ಲಿ ಪಾತ್ರವಾಗಿದೆ. ಇವರ ಸಾಧನೆ ಗಮನಿಸಿದ ಒಡಿಶಾ ಸರ್ಕಾರವು ಈ ವರ್ಷದ ಜನವರಿಯಲ್ಲಿ ಒಡಿಶಾದ ಭುವನೇಶ್ವರದಲ್ಲಿ ಆಯೋಜಿಸಿದ್ದ ‘ಕೃಷಿ ಒಡಿಶಾ’ ಸಮ್ಮೇಳನದಲ್ಲಿ ಇವರನ್ನು ಉಪನ್ಯಾಸ ನೀಡಲು ಆಹ್ವಾನಿಸಿತ್ತು.

ಸದ್ಯ, ಅವರು ಸ್ಥಳೀಯವಾಗಿ ಹೆಚ್ಚಿನ ಪ್ರಚಾರ ಬಯಸದೇ ಎಲೆ ಮರೆಯ ಕಾಯಂತೆ ತಮ್ಮಷ್ಟಕ್ಕೆ ತಾವು ವೈವಿಧ್ಯಮಯವಾದ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡು ತಮ್ಮದೇ ಶೈಲಿಯಲ್ಲಿ ಅಣಬೆ, ಕಾಫಿ ಬೆಳೆಯುತ್ತಿದ್ದಾರೆ.

ನಿಶಾ ಥಾಮಸ್ ಅವರು ಬೆಳೆದಿರುವ ವೈವಿಧ್ಯಮಯವಾದ ಅಣಬೆಗಳು
ನಿಶಾ ಥಾಮಸ್ ಅವರು ಬೆಳೆದಿರುವ ವೈವಿಧ್ಯಮಯವಾದ ಅಣಬೆಗಳು
ನಿಶಾ ಥಾಮಸ್ ಅವರು ಅಣಬೆ ಕೃಷಿಯಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಪರಿಶೋಧಿಸುತ್ತಾ ಮುಂದುವರಿಯುತ್ತಿದ್ದಾರೆ. ಅವರೊಬ್ಬ ಜಿಲ್ಲೆಯ ಪ್ರಗತಿಪರ ಅಣಬೆ ಕೃಷಿಕರು.
-ಎಂ.ಕೆ.ದೀನಾ ತೋಟಗಾರಕಾ ಹಿರಿಯ ಸಹಾಯಕ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT