ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಚ್ಛತೆಯೇ ಸೇವೆ ಪಾಕ್ಷಿಕ ಅಭಿಯಾನ: 12 ಗ್ರಾ.ಪಂಚಾಯಿತಿಗೆ ಪ್ರಶಂಸನಾ ಪತ್ರ

Published : 8 ಅಕ್ಟೋಬರ್ 2024, 4:15 IST
Last Updated : 8 ಅಕ್ಟೋಬರ್ 2024, 4:15 IST
ಫಾಲೋ ಮಾಡಿ
Comments

ಮಡಿಕೇರಿ: ‘ಸ್ವಚ್ಛತೆಯೇ ಸೇವೆ’ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ 102 ಗ್ರಾಮ ಪಂಚಾಯಿತಿಗಳ ಪೈಕಿ 5 ತಾಲ್ಲೂಕಿನಿಂದ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವ 12 ಗ್ರಾಮ ಪಂಚಾಯಿತಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು.

ನಾಪೋಕ್ಲು, ಹಾಕತ್ತೂರು, ಗಾಳಿಬೀಡು, ಗುಡ್ಡೆಹೊಸೂರು, 7ನೇ ಹೊಸಕೋಟೆ, ದುಂಡಳ್ಳಿ, ಹಾನಗಲ್ಲು, ಶ್ರೀಮಂಗಲ, ಅಮ್ಮತ್ತಿ ಮತ್ತು ದೇವರಪುರ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಗೌರವಿಸಿ, ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಕೊಡಗು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಿ.ಧನರಾಜು, ‘ಜಿಲ್ಲೆಯಾದ್ಯಂತ ‘ಸ್ವಚ್ಛತೆಯೇ ಸೇವೆ’ ಪಾಕ್ಷಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ’ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ಸ್ವಚ್ಛತೆಯೇ ಸೇವೆ ಪಾಕ್ಷಿಕ ಅಭಿಯಾನವನ್ನು ಸೆ. 17ರಿಂದ ಅ. 2ರವರೆಗೆ ಜಿಲ್ಲೆಯ 102 ಗ್ರಾಮಪಂಚಾಯಿತಿಗಳಲ್ಲಿಯೂ ಉತ್ತಮ ಮತ್ತು ವಿಭಿನ್ನವಾಗಿ ಹಮ್ಮಿಕೊಳ್ಳಲಾಗಿತ್ತು ಎಂದರು.

ಅಭಿಯಾನದ ಭಾಗವಾಗಿ ಶ್ರಮದಾನ, ಶಾಲಾ ಮಕ್ಕಳಿಗೆ ರಸಪ್ರಶ್ನೆ, ಚಿತ್ರಕಲಾ ಸ್ಪರ್ಧೆ, ಮಹಿಳಾ ಸಂಘದ ಸದಸ್ಯರಿಗೆ ರಂಗೋಲಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು 15 ದಿನಗಳ ಕಾಲ ಹಮ್ಮಿಕೊಂಡು ಸ್ವಚ್ಛತೆಯ ಸಂದೇಶವನ್ನು ಸಾರಲಾಗಿದೆ. ಸೆ. 27ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

102 ಗ್ರಾಮ ಪಂಚಾಯಿತಿಗಳ ಪೈಕಿ 5 ತಾಲ್ಲೂಕಿನಿಂದ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವ 12 ಗ್ರಾಮ ಪಂಚಾಯಿತಿಗಳಿಗೆ ಪ್ರಶಂಸನಾ ಪತ್ರವನ್ನು ನೀಡುತ್ತಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿಯೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಸುಂದರ ಪರಿಸರವನ್ನು ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ‘ಸ್ವಚ್ಛ ಭಾರತ್ ಮಿಷನ್  ಯೋಜನೆಯಡಿಯಲ್ಲಿ ಉತ್ತಮ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ಯಾವುದೇ ಯೋಜನೆಯ ಯಶಸ್ವಿಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳು ಅತೀ ಅವಶ್ಯಕ. ಗ್ರಾಮ ಪಂಚಾಯಿತಿಗಳು ವಿಶಿಷ್ಟವಾಗಿ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸ್ವಚ್ಛತೆ ಎಂಬುದೂ ಸಹ ಸೇವೆ ಎಂಬುದನ್ನು ತಿಳಿಸಿವೆ ಎಂದರು.

ಸ್ವಚ್ಛತೆಯೇ ಸೇವೆ ಅಭಿಯಾನದ ಅನುಷ್ಠಾನಕ್ಕೆ ಸಂಬಂಧಿಸಿದಂತೆ 7ನೇ ಹೊಸಕೋಟೆ, ದೇವರಪುರ, ಕೂಡುಮಂಗಳೂರು, ನಾಪೋಕ್ಲು ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಭಿಪ್ರಾಯ ಹಂಚಿಕೊಂಡರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್, ಜಿಲ್ಲಾ  ಸಹಾಯಕ ಕಾರ್ಯದರ್ಶಿ ಅಬ್ದುಲ್ ನಬಿ, ಸಹಾಯಕ ಯೋಜನಾಧಿಕಾರಿ ಜೀವನ್ ಕುಮಾರ್, ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ಸಮಾಲೋಚಕ ಪೆಮ್ಮಯ್ಯ, ವಾಸುದೇವ್, ಹರ್ಷಿತಾ, ಭವ್ಯಾ ಭಾಗವಹಿಸಿದ್ದರು.

ಜಿಲ್ಲೆಯಲ್ಲಿರುವುದು 102 ಗ್ರಾಮಪಂಚಾಯಿತಿಗಳು 5 ತಾಲ್ಲೂಕಿನಿಂದ 12 ಗ್ರಾಮ ಪಂಚಾಯಿತಿ ಆಯ್ಕೆ ಸೆ. 17ರಿಂದ ಅ. 2ರವರೆಗೆ ನಡೆದಿದ್ದ ಅಭಿಯಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT