ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಹುತಾತ್ಮ ಯೋಧರ ಸ್ಮರಣೆ, ಪುಷ್ಪನಮನ,
Published 26 ಜುಲೈ 2024, 16:24 IST
Last Updated 26 ಜುಲೈ 2024, 16:24 IST
ಅಕ್ಷರ ಗಾತ್ರ

ಸೋಮವಾರಪೇಟೆ: ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾಭವನ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಸಂಘದ ಅಧ್ಯಕ್ಷ ಈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದೇಶಾಭಿಮಾನಿಗಳು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಈರಪ್ಪ ಅವರು, ಕಾರ್ಗಿಲ್ ಯುದ್ಧದ ಸಂದರ್ಭ ದೇಶದ ಗಡಿಯಲ್ಲಿ ಆದ ಬೆಳವಣಿಗೆ, ಹುತಾತ್ಮರಾದ ಸೈನಿಕರ ಕೆಚ್ಚೆದೆಯ ಹೋರಾಟ, ಪಾಕಿಸ್ತಾನದ ಕಪಟ ಬುದ್ಧಿಯ ಬಗ್ಗೆ ವಿವರಿಸಿದರು.

ಈಗಾಗಲೇ ಭಾರತದೊಳಗೆ ಅಕ್ರಮವಾಗಿ ಬಾಂಗ್ಲಾ ವಲಸಿಗರು ನುಗ್ಗಿದ್ದು, ಇವರಿಂದ ದೇಶದ ಆಂತರಿಕ ಭದ್ರತೆಗೆ ಆತಂಕವಿದೆ. ಒಂದು ವೇಳೆ ಯುದ್ಧದ ಸನ್ನಿವೇಶ ನಿರ್ಮಾಣವಾದರೆ ದೇಶದ ಗಡಿಯಲ್ಲಿರುವ ಸೈನಿಕರಷ್ಟೇ ಮಂದಿ ದೇಶದ ಆಂತರಿಕ ಭದ್ರತೆಗೂ ಬೇಕಾಗುತ್ತದೆ. ಈ ವಿಷಯದ ಬಗ್ಗೆ ಗಂಭೀರ ಚಿಂತನೆ ಹರಿಸಬೇಕಿದೆ ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಸಿ.ಕೆ.ಶಿವಕುಮಾರ್ ಮಾತನಾಡಿ, ‘ಕಾರ್ಗಿಲ್ ಯುದ್ಧದಿಂದ ಭಾರತದ ಸೈನ್ಯದ ಪರಾಕ್ರಮ ಇಡೀ ವಿಶ್ವಕ್ಕೆ ಮನದಟ್ಟಾಗಿದೆ. ಹಗಲೂ ರಾತ್ರಿಯೆನ್ನದೆ ದೇಶದ ಗಡಿ ಕಾಯುತ್ತಿರುವ ಸೈನಿಕರ ಸೇವೆಯನ್ನು ಸ್ಮರಿಸಬೇಕು. ಅವರ ತ್ಯಾಗಕ್ಕೆ ಸ್ಥೈರ್ಯ ತುಂಬಬೇಕು. ಯುವ ಜನಾಂಗ ದೇಶ ಸೇವೆಯ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ಕೊಡಗು ಜಿಲ್ಲಾ ಯೋಧಾಭಿಮಾನಿ ಬಳಗದಿಂದ ರಚನೆಗೊಂಡಿರುವ ಅಮರ್ ಜವಾನ್ ಪ್ರತಿಮೆಗೆ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ರೋಟರಿ ಮಾಜಿ ಅಧ್ಯಕ್ಷ ಮಹೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್, ಹಿಂದೂ ಜಾಗರಣಾ ವೇದಿಕೆಯ ಸುಭಾಷ್ ತಿಮ್ಮಯ್ಯ, ಎಂ.ಬಿ.ಉಮೇಶ್, ಸಿ.ಕೆ.ಆರ್ಮಿ ಟ್ರೈನಿಂಗ್ ಅಕಾಡೆಮಿಯ ಮುಖ್ಯಸ್ಥ ಚಂದ್ರಕುಮಾರ್, ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ ಸೇರಿದಂತೆ ಮಾಜಿ ಸೈನಿಕರುಗಳು, ಮಹಿಳಾ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂ ಜಾಗರಣಾ ವೇದಿಕೆಯಿಂದ ಆಚರಣೆ

ಹಿಂದೂ ಜಾಗರಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಘಟಕದಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ನಡೆಯಿತು. ಅಗಲಿದ ಸೈನಿಕರ ಸ್ಮರಣೆಯೊಂದಿಗೆ ಪುಷ್ಪನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಬೋಜೇಗೌಡ, ಸುಭಾಷ್, ಎಂ.ಬಿ.ಉಮೇಶ್, ಪ್ರಮುಖರಾದ ಕೂತಿ ಪರಮೇಶ್, ರೂಪಾ ಸತೀಶ್, ದಯಾನಂದ, ಮಣಿ ಕುಶಾಲಪ್ಪ ಬಾಲಕೃಷ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಸೋಮವಾರಪೇಟೆ ಪತ್ರಿಕಾಭವನದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾಜಿ ಸೈನಿಕರು ಗೌರವ ನಮನ ಸಲ್ಲಿಸಿದರು.
ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಸೋಮವಾರಪೇಟೆ ಪತ್ರಿಕಾಭವನದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾಜಿ ಸೈನಿಕರು ಗೌರವ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT