ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಅಮೋಘ ಪ್ರದರ್ಶನ ತೋರಿದ ಆತಿಥೇಯ ಅರಮಣಮಾಡ ತಂಡ

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಲ್ಲಿ ಕಂಡು ಬಂತು ಹಲವು ವಿಶೇಷಗಳು
Published 24 ಏಪ್ರಿಲ್ 2024, 4:25 IST
Last Updated 24 ಏಪ್ರಿಲ್ 2024, 4:25 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಬಾಳೆಲೆಯ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಆರಂಭವಾಗಿರುವ ಅರಮಣಮಾಡ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಹಲವು ತಂಡಗಳು ಭರ್ಜರಿ ಪ್ರದರ್ಶನ ತೋರಿದವು. ಆತಿಥೇಯ ತಂಡ ಅರಮಣಮಾಡ ಸಹ ಭರ್ಜರಿ ಗೆಲುವು ಪಡೆಯಿತು.

ಅರಮಣಮಾಡ ತಂಡವು ಚೋವಂಡ ವಿರುದ್ಧ 9 ವಿಕೆಟ್‌ಗಳ ಗೆಲುವು ಪಡೆಯಿತು. ಚೋವಂಡ ನೀಡಿದ 55 ರನ್‌ಗಳ ಗುರಿಯನ್ನು ಕೇವಲ 3.1 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪಿತು.

ನಂದಿನೆರವಂಡ ಮತ್ತು ಅಚ್ಚಪ್ಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಚ್ಚಪ್ಪಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ನಂದಿನೆರವಂಡ ನಿಗದಿತ 8 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ನೀಡಿದ 41 ರನ್‌ಗಳ ಗುರಿಯನ್ನು ಅಚ್ಚಪ್ಪಂಡ ಯಾವುದೇ ವಿಕೆಟ್ ಕಳೆದುಕೊಳ್ಳದೇ ಕೇವಲ 2 ಓವರ್‌ಗಳಲ್ಲೇ ತಲುಪಿದ್ದು ವಿಶೇಷವಾಗಿತ್ತು. ಈ ಪಂದ್ಯ ನೋಡುಗರಿಗೆ ರಸದೌತಣ ನೀಡಿತು. 

ಮಂಡಂಗಡ ತಂಡವು ಆದೇಂಗಡ ತಂಡದ ವಿರುದ್ಧ 9 ವಿಕೆಟ್‌ಗಳ ಜಯ ಗಳಿಸಿತು. ನಿಗದಿತ 8 ಓವರ್‌ಗಳಲ್ಲಿ ಆದೇಂಗಡ 2 ವಿಕೆಟ್ ಕಳೆದುಕೊಂಡು ನೀಡಿದ 67 ರನ್‌ಗಳ ಗುರಿಯನ್ನು ಮಂಡಂಗಡ ತಂಡವು ಕೇವಲ 4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಭರ್ಜರಿ ಆಟ ಪ್ರದರ್ಶಿಸಿತು.

ಚೆರುಮಾಡಂಡ ತಂಡವಂತೂ ರನ್‌ಗಳ ಹೊಳೆಯನ್ನೇ ಹರಿಸಿತು. ನಿಗದಿತ 8 ಓವರ್‌ಗಳಲ್ಲಿ ಈ ತಂಡ ಪಡೆದಿದ್ದು ಬರೋಬರಿ 119 ರನ್‌ಗಳು. ಎದುರಾಳಿ ಕಾಳಮಂಡ ತಂಡವು ಕೇವಲ 73 ರನ್‌ಗಳಿಸಿತು. 46 ರನ್‌ಗಳ ಅಮೋಘ ಗೆಲುವು ಚೆರುಮಾಡಂಡ ತಂಡಕ್ಕೆ ಒಲಿಯಿತು.

ಮಾಚೇಟ್ಟಿರ ತಂಡವು ಚಂಗಣಮಾಡ ವಿರುದ್ಧ 6 ವಿಕೆಟ್‌ಗಳ ಗೆಲುವು ಪಡೆಯಿತು. ಚಂಗಣಮಾಡ ತಂಡವು 8 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 65 ರನ್‌ ಗಳಿಸಿತು. ಆದರೆ, ಮಾಚೇಟ್ಟಿರ ತಂಡವು 6.1 ಓವರ್‌ನಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು.

ಮುಕ್ಕಾಟ್ಟಿರ ತಂಡವು ಕೇಟಿರ ವಿರುದ್ಧ 10 ವಿಕೆಟ್‌ಗಳ ಗೆಲುವು ಪಡೆಯಿತು. ಕೇಟಿರ ನೀಡಿದ 28 ರನ್‌ಗಳ ಗುರಿಯನ್ನು ಮುಕ್ಕಾಟ್ಟಿರ ಯಾವುದೇ ವಿಕೆಟ್‌ ಕಳೆದುಕೊಳ್ಳದೆ ಕೇವಲ 3.3 ಓವರ್‌ಗಳಲ್ಲಿಯೇ ತಲುಪಿದ್ದು ವಿಶೇಷವಾಗಿತ್ತು.

ಪಾರುವಂಗಡ ತಂಡವು ಮಾಚಿಮಾಡ ತಂಡವನ್ನು 9 ರನ್‌ಗಳಿಂದ ಮಣಿಸಿತು. ಮಾಚಿಮಾಡ ತಂಡ ನೀಡಿದ 88 ರನ್‌ಗಳ ಗುರಿಯನ್ನು ಪಾರುವಂಗಡವು 1 ವಿಕೆಟ್ ಕಳೆದುಕೊಂಡು 6.2 ಓವರ್‌ಗಳಲ್ಲಿ ತಲುಪಿತು.

ಕೋಡಿಮಣಿಯಂಡ ತಂಡವೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು 8 ಓವರ್‌ಗಳಲ್ಲಿ ಅದು ಗಳಿಸಿದ್ದು 8 ವಿಕೆಟ್‌ ನಷ್ಟಕ್ಕೆ ಬರೋಬರಿ 107 ರನ್. ಇದಕ್ಕುತ್ತರವಾಗಿ ನಾಪಂಡ ತಂಡವು ಕೇವಲ 82 ರನ್‌ಗಳನ್ನಷ್ಟೇ ಗಳಿಸಿತು.

ಬಾಚಿನಾಡಂಡ ತಂಡವು ನುಚ್ಚಿಮಣಿಯಂಡ ತಂಡದ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿತು. ನುಚ್ಚಿಮಣಿಯಂಡ ತಂಡವು ನೀಡಿದ 59 ರನ್‌ಗಳ ಗುರಿಯನ್ನು 4 ಓವರ್‌ಗಳಲ್ಲಿಯೇ 2 ವಿಕೆಟ್ ಕಳೆದುಕೊಂಡು ತಲುಪಿದ ಬಾಚಿನಾಡಂಡ ಗೆಲುವಿನ ನಗೆ ಬೀರಿತು.

ಉಳುವಂಗಡ ತಂಡವು ಕುಂಜಿರ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು. ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡು ಕುಂಜಿರ ನೀಡಿದ 54 ರನ್‌ಗಳ ಗುರಿಯನ್ನು ಉಳುವಂಗಡ ಕೇವಲ ಒಂದು ವಿಕೆಟ್‌ ಕಳೆದುಕೊಂಡು 5.4 ಓವರ್‌ಗಳಲ್ಲೇ ತಲುಪಿತು.

ಮಹಿಳಾ ವಿಭಾಗ

ಅಚ್ಚಪಂಡ ನಿಗದಿತ 5 ಓವರ್‌ಗಳಲ್ಲಿ ನೀಡಿದ 47 ರನ್‌ಗಳ ಗುರಿಯನ್ನು ಬೆನ್ನತ್ತಿದ ಕಾಂಡಂಡ ತಂಡವು ಕೇವಲ 25 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಅಂತಿಮವಾಗಿ ಅಚ್ಚಪಂಡ 7 ವಿಕೆಟ್‌ಗಳಿಂದ ಗೆಲುವಿನ ನಗೆ ಬೀರಿತು.

ಕೊಂಗಂಡ ತಂಡವು ಮೂಕಳೆರ ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಪಡೆಯಿತು. ಕೊಂಗಂಡ ನೀಡಿದ 41 ರನ್‌ಗಳ ಗುರಿಗೆ ಮೂಕಳೆರ 33 ರನ್‌ಗಳನ್ನಷ್ಟೇ ಗಳಿಸಿ ಸೋಲೋಪ್ಪಿತು.

ಕಡೇಮಾಡ ತಂಡವು ಕೊಣಿಯಂಡ ತಂಡವನ್ನು 18 ರನ್‌ಗಳಿಂದ ಮಣಿಸಿತು. ಕಡೇಮಾಡ ತಂಡ ನೀಡಿದ 47 ರನ್‌ಗಳ ಗುರಿಗೆ ಕೊಣಿಯಂಡ ತಂಡ ಕೇವಲ 29 ರನ್‌ ಮಾತ್ರ ಗಳಿಸಿತು.

ಬಾಚಿನಾಡಂಡ ತಂಡವು ಕೊಟ್ರಮಾಡ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು. ಕೊಟ್ರಮಾಡ ನೀಡಿದ 38 ರನ್‌ಗಳ ಗುರಿಯನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೇ ಬಾಚಿನಾಡಂಡ ತಲುಪಿದ್ದು ವಿಶೇಷ ಎನಿಸಿತು.

ಚೋವಂಡ ತಂಡದ ವಿರುದ್ಧ ಅರಮಣಮಾಡ ತಂಡದ ಆಟಗಾರ ಬೌಲಿಂಗ್ ಮಾಡಿದ್ದು ಹೀಗೆ
ಚೋವಂಡ ತಂಡದ ವಿರುದ್ಧ ಅರಮಣಮಾಡ ತಂಡದ ಆಟಗಾರ ಬೌಲಿಂಗ್ ಮಾಡಿದ್ದು ಹೀಗೆ

ನೂರು ರನ್‌ ಗಳಿಸಿದ ಚೆರುಮಾಡಂಡ ಹಾಗೂ ಕೋಡಿಮಣಿಯಂಡ ತಂಡಗಳು ಮಹಿಳಾ ತಂಡಗಳಿಂದ ಅತ್ಯುತ್ತಮ ಪ್ರದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT