ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ: ಶುಂಠಿ ಬೆಳೆಗೆ ಕೊಳೆ ರೋಗದ ಆತಂಕ

ಕಳೆದ ವರ್ಷ ಸಿಕ್ಕ ಬಂಪರ್‌ ಬೆಲೆಗೆ ಮಾರುಹೋದ ಬೆಳೆಗಾರರು, ಹೆಚ್ಚಾಗಿ ನಡೆದಿದೆ ಶುಂಠಿ ಕೃಷಿ
Published 5 ಜುಲೈ 2024, 4:05 IST
Last Updated 5 ಜುಲೈ 2024, 4:05 IST
ಅಕ್ಷರ ಗಾತ್ರ

ಸೋಮವಾರಪೇಟೆ: ಹಿಂದಿನ ಸಾಲಿನಲ್ಲಿ ಶುಂಠಿ ಬೆಳೆಗೆ ಸಿಕ್ಕಿದ್ದ ಬೆಲೆಯಿಂದ ಆಕರ್ಷಿತರಾದ ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಶುಂಟಿ ಬಿತ್ತನೆ ಮಾಡಿ ಈಗ ಕೈ ಸುಟ್ಟುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.

ಹಿಂದಿನ ವರ್ಷ ಸರಿಯಾಗಿ ಮಳೆ ಬಾರದೆ, ಬರಗಾಲ ಆವರಿಸಿತ್ತು. ಹೆಚ್ಚಿನವರು ಅಧಿಕ ಬೆಲೆ ನೀಡಿ ಬೀಜದ ಶುಂಠಿಯನ್ನು ಖರೀದಿಸಿ ನಾಟಿ ಮಾಡಿದರು. ಆದರೆ, ಇದ್ದಕ್ಕಿದ್ದ ಹಾಗೆ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತ ಮತ್ತು ಕೆರೆ ನದಿಗಳಲ್ಲಿ ನೀರು ಬತ್ತಿದ ಪರಿಣಾಮ ಹಾಕಿರುವ ಬೆಳೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಪರಿಶ್ರಮ ಪಡಬೇಕಾಯಿತು. ಈಗ ಕೆಲವು ಕಡೆಗಳಲ್ಲಿ ಬೆಳೆಗೆ ಕೊಳೆರೋಗ ಕಾಣಿಸಿಕೊಳ್ಳುತ್ತಿದ್ದು, ಸಂಪೂರ್ಣ ಬೆಳೆಯನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿ, ಹಾಕಿದ ಬಂಡವಾಳವೂ ಕೈ ಸೇರದಂತಾಗಿದೆ.

ತಾಲ್ಲೂಕಿನಲ್ಲಿ ಸುಮಾರು 2,500 ಹೆಕ್ಟೇರ್ ಪ್ರದೇಶಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಶುಂಠಿ ಕೃಷಿಯನ್ನು ಮಾಡಲಾಗಿದೆ. ಕಳೆದ ವರ್ಷದಲ್ಲಿ ಉತ್ತಮ ಬೆಲೆ ದೊರಕಿದ್ದರಿಂದ ಈ ಬಾರಿ ಬೆಟ್ಟ ಗುಡ್ಡ, ಗದ್ದೆ, ಹೊಲ ಸೇರಿದಂತೆ ಹಳೆಯ ಕಾಫಿ ತೋಟಗಳಲ್ಲೂ ಕಾಫಿ ಗಿಡಗಳನ್ನು ಕಿತ್ತು ಶುಂಠಿ ಕೃಷಿಯನ್ನು ಮಾಡಲಾಗಿದೆ. ಕೆಲವರು ಹೆಚ್ಚಿನ ಬೆಲೆ ನೀಡಿ ಸ್ಥಳವನ್ನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದಾರೆ.

ಬೀಜದ ಶುಂಠಿಗೆ ಕಳೆದ ವರ್ಷ ₹ 3,500 ದಿಂದ ₹ 6 ಸಾವಿರದವರೆಗೆ ಬೆಲೆ ನೀಡಿ ಖರೀದಿಸಲಾಗಿದೆ. ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದು, ಸರಿಯಾದ ಸಮಯಕ್ಕೆ ಮುಂಗಾರು ಪ್ರಾರಂಭವಾಗಿರುವುದರಿಂದ, ಶೀತದ ಪ್ರಮಾಣ ಹೆಚ್ಚಾಗಿದೆ. ಶೀತ ಹೆಚ್ಚಾದ್ದರಿಂದ ಕೊಳೆರೋಗ ಬಂದಿದೆ. ಅಲ್ಲದೆ, ಕೆಲವು ರೈತರು ಉತ್ತಮ ಗುಣಮಟ್ಟದ ಬೀಜದ ಶುಂಠಿ ದೊರಕದ್ದರಿಂದ, ಸರಿಯಾಗಿ ಗಮನಿಸದೆ, ಸಿಕ್ಕ ಬೀಜದ ಶುಂಠಿಯನ್ನು ತಂದು ಕೃಷಿ ಮಾಡಿದ್ದರು. ಇದು ಕಾಯಿಲೆ ಬರಲು ಕಾರಣವಾಗಿದೆ.

ಏಳು ತಿಂಗಳ ಬೆಳೆಯಾದ ಶುಂಠಿಗೆ ಕಳೆದ ವರ್ಷ 60 ಕೆ.ಜಿ. ತೂಕದ ಚೀಲಕ್ಕೆ ₹ 5 ಸಾವಿರದ ತನಕ ಇತ್ತು. ತಾಲ್ಲೂಕಿನ ಶನಿವಾರಸಂತೆ, ಕೊಡ್ಲಿಪೇಟೆ, ಗೌಡಳ್ಳಿ, ಚಿಕ್ಕತೋಳೂರು, ಕೂತಿ, ಯಡೂರು, ತೋಳೂರುಶೆಟ್ಟಳ್ಳಿ, ದುಂಡಳ್ಳಿ, ಮೂದ್ರವಳ್ಳಿ, ಆಲೂರು ಸಿದ್ದಾಪುರ, ಮಾಲಂಬಿ, ಗಣಗೂರು, ಬಾಣಾವಾರ, ಅರೆಯೂರು, ಯಲಕನೂರು, ಹಿತ್ಲುಗದ್ದೆ, ಸಿದ್ದಲಿಂಗಪುರ, ಹೊಸಳ್ಳಿ, ಯಲಕನೂರು ಗ್ರಾಮಗಳಲ್ಲಿ ಹೆಚ್ಚು ಶುಂಠಿ ಕೃಷಿ ಮಾಡಲಾಗುತ್ತಿದೆ.

ಗಣಗೂರಿನ ಶುಂಠಿ ಬೆಳೆಗಾರ ಕಿರಣ ಮಾತನಾಡಿ, ‘ಶುಂಠಿಗೆ ಕಾಣಿಸಿಕೊಂಡ ರೋಗಬಾಧೆಯಿಂದ ಬೆಳೆ ನಷ್ಟವಾಗಿದೆ. ಬೆಳೆಗೆ ಎರಡು ರೀತಿಯ ಕೊಳೆ ರೋಗ ಕಾಣಿಸಿಕೊಳ್ಳುತ್ತಿದ್ದು, ಗಿಡಗಳು ಹಳದಿ ಬಣ್ಣಕ್ಕೆ ತಿರುಗುವ ಮೂಲಕ ಕೊಳೆರೋಗದ ಲಕ್ಷಣ ಕಂಡು ಬಂದರೆ, ಮತ್ತೊಂದು ಬ್ಯಾಕ್ಟೀರಿಯ ಮೂಲಕ ಹರಡುವ ಕೊಳೆರೋಗದಿಂದ ಬೆಳೆ ಹಾಳಾದ ನಂತರವೇ ಕಂಡುಬರುತ್ತಿದೆ. ಕೇವಲ ಮೂರು ತಿಂಗಳಾಗಿರುವುದರಿಂದ ಬೆಳೆಯನ್ನು ಕೀಳಲು ಸಾಧ್ಯವಾಗದೆ, ಬಿಡಲು ಆಗದೆ, ಪರದಾಡುವಾಂತಾಗಿದೆ’ ಎಂದು ಹೇಳಿದರು.

ಸೋಮವಾರಪೇಟೆ ಸಮೀಪದ ಯರಪಾರೆ ಗ್ರಾಮದಲ್ಲಿ ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದ್ದು ಕಾರ್ಮಿಕರು ಬೆಳೆಯನ್ನು ಕೀಳುತ್ತಿರುವುದು.
ಸೋಮವಾರಪೇಟೆ ಸಮೀಪದ ಯರಪಾರೆ ಗ್ರಾಮದಲ್ಲಿ ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದ್ದು ಕಾರ್ಮಿಕರು ಬೆಳೆಯನ್ನು ಕೀಳುತ್ತಿರುವುದು.
ಸೋಮವಾರಪೇಟೆ ತಾಲ್ಲೂಕಿನ ಬಾಣಾವಾರ ಗ್ರಾಮದಲ್ಲಿ ಬೆಳೆದಿರುವ ಆರೋಗ್ಯವಂತ ಶುಂಠಿ ಬೆಳೆ.
ಸೋಮವಾರಪೇಟೆ ತಾಲ್ಲೂಕಿನ ಬಾಣಾವಾರ ಗ್ರಾಮದಲ್ಲಿ ಬೆಳೆದಿರುವ ಆರೋಗ್ಯವಂತ ಶುಂಠಿ ಬೆಳೆ.

ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಆತಂಕ ಬಿಸಿಲು ಬಾರದ ಶೀತ ಹೆಚ್ಚಾಗಿ ರೋಗಬಾಧೆ ರೋಗ ಕಂಡು ಬಂದ ತಕ್ಷಣ ಗಿಡ ಕೀಳುವಂತೆ ಸಲಹೆ

ಕಳೆದ ಬಾರಿ ಹೆಚ್ಚಿನ ದರ ಸಿಕ್ಕಿದ್ದರಿಂದ ಹೆಚ್ಚಾಗಿ ಶುಂಠಿ ಕೃಷಿ ನಡೆಸಲಾಗಿದೆ. ಆದರೆ ಈಗ ಕಾಯಿಲೆ ಕಾಣಿಸಿಕೊಂಡಿರುವುದರಿಂದ ಬೆಳೆಯನ್ನು ಕೀಳಲು ಸಾಧ್ಯವಾಗುತ್ತಿಲ್ಲ.
ಸತೀಶ್ ಶುಂಠಿ ಬೆಳೆಗಾರ
ಶುಂಠಿಗೆ ಕೊಳೆರೋಗ ಕಂಡ ತಕ್ಷಣ ಅದನ್ನು ಕಿತ್ತು ನಾಶಪಡಿಸಬೇಕು. ಅದನ್ನು ಕಿತ್ತ ಸ್ಥಳಕ್ಕೆ ಸುಣ್ಣವನ್ನು ಹಾಕಿದಲ್ಲಿ ಕಾಯಿಲೆ ಹರಡುವುದಿಲ್ಲ. ನಂತರ ಉಳಿದ ಬೆಳೆಗೆ ಶಿಲೀಂದ್ರ ನಾಶಕ ಸಿಂಪಡಣೆ ಮಾಡಿದಲ್ಲಿ ಕಾಯಿಲೆಯನ್ನು ಹತೋಟಿಗೆ ತರಬಹುದು
ಡಾ.ಮಂಜುನಾಥ್ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT