ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಬಣ್ಣ ಕಲ್ಮನಿ ನಿಧನ: ‘ಪ್ರಜಾವಾಣಿ’ ಎದುರು ನೋವು ತೋಡಿಕೊಂಡಿದ್ದ ರಂಗಭೂಮಿ ಕಲಾವಿದ

ಪ್ರಶಸ್ತಿ ಕೊಟ್ಟು ಪುಣ್ಯ ಕಟ್ಟಿಕೊಳ್ರಿ ಎಂದಿದ್ದರು ಬಾಬಣ್ಣ
Published 10 ಡಿಸೆಂಬರ್ 2023, 4:21 IST
Last Updated 10 ಡಿಸೆಂಬರ್ 2023, 4:21 IST
ಅಕ್ಷರ ಗಾತ್ರ

ಕುಕನೂರು/ಕೊಪ್ಪಳ: ‘ಗುಬ್ಬಿ ವೀರಣ್ಣ ಪ್ರಶಸ್ತಿ ಘೋಷಣೆ ಮಾಡಿದರೂ ಇನ್ನೂ ಪ್ರದಾನ ಮಾಡಿಲ್ಲ. ಸರ್ಕಾರದಿಂದ ಫೋನ್‌ ಬರ್ತದಂತ ನಿತ್ಯವೂ ಕಾಯುತ್ತಿದ್ದೇನೆ. ಅದೊಂದು ಪ್ರಶಸ್ತಿ ಕೊಟ್ಟು ಸರ್ಕಾರ ಪುಣ್ಯ ಕಟ್ಕೊಳ್ಳಿ’

ಮೂರು ದಿನಗಳ ಹಿಂದೆ (ಡಿ. 7) ‘ಪ್ರಜಾವಾಣಿ’ ಪ್ರತಿನಿಧಿಗೆ ಕರೆ ಮಾಡಿದ್ದ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ಹೀಗೆ ಮನವಿ ಮಾಡಿದ್ದರು. ‘ನಿಮ್ಮ ವರದಿ ಮೂಲಕ ಸರ್ಕಾರದವರಿಗೆ ನನ್ನ ಆಸೆ ತಿಳಸ್ರೀ’ ಎಂದು ಕೋರಿದ್ದರು. ಅದರ ಮರುದಿನವೇ ಅವರು ಮತ್ತಷ್ಟು ಅನಾರೋಗ್ಯಕ್ಕೆ ಒಳಗಾದರು.

ಕಡುಕಷ್ಟದ ಬದುಕಿನ ನಡುವೆಯೂ ರಂಗಭೂಮಿಯಾಗಿ ಜೀವ ಹಾಗೂ ಜೀವನವನ್ನೇ ಮುಡಿಪಾಗಿಟ್ಟ ಬಾಬಣ್ಣ ಕಲ್ಮನಿ ಅವರ ಆಸೆ ಕೊನೆಗೂ ಈಡೇರಲಿಲ್ಲ. 2021–22ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಅವರಿಗೆ ಘೋಷಣೆಯಾದರೂ ಪ್ರದಾನವಾಗಿಲ್ಲ.

ಬಾಬಣ್ಣನ ಬದುಕಿನ ನೋಟ: ರಂಗಭೂಮಿ ಕಲಾವಿದರ ಕುಟುಂಬದಿಂದ ಬಂದ ಬಾಬಣ್ಣ ನಟರಾಗಿ ಹಾಗೂ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ವೃತ್ತಿ ರಂಗಭೂಮಿಯ ಹೆಸರಾಂತ ಕಲಾವಿದೆ ಕುಕನೂರು ರೆಹಿಮಾನವ್ವ ಅವರ ಹಿರಿಯ ಪುತ್ರ ಬಾಬಣ್ಣ. ರೆಹಿಮಾನವ್ವ ಅವರ ಐವರು ಮಕ್ಕಳಲ್ಲಿ ದೊಡ್ಡವರೇ ಈ ಬಾಬಣ್ಣ.

ಬಾಬಣ್ಣ ಅವರು ದೊಡ್ಡವಾಡ, ಅರಿಷಿಣಗೋಡಿ, ಚಿಂದೋಡಿ, ಗುಡಿಗೇರಿ, ಶೇಖಮಾಸ್ತರ, ಪುಟ್ಟರಾಜ ಗವಾಯಿಗಳ ಕಂಪನಿ ಸೇರಿದಂತೆ ಕರ್ನಾಟಕದ ಹಲವು ಹತ್ತು ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.

ಬಾಬಣ್ಣ 1976ರಿಂದ ತಮ್ಮ ತಾಯಿಯ ಲಲಿತ ನಾಟ್ಯ ಸಂಘ, ನಂತರ ಅವರದೇ ಸ್ವಂತ ಕಂಪನಿ ವಿಜಯಲಕ್ಷ್ಮಿ ನಾಟ್ಯ ಸಂಘ ಆರಂಭಿಸಿ ಹತ್ತು ವರ್ಷ ನಡೆಸಿಕೊಂಡು ಬಂದರು. ಕಂಪನಿ ನಿಂತ ಮೇಲೆ ಮತ್ತೆ ಬೇರೆ ಬೇರೆ ಕಂಪನಿಗಳಲ್ಲಿ ಪುರುಷ, ಸ್ತ್ರೀ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಬದುಕು ಬಂಗಾರವಾಯ್ತು ನಾಟಕದಲ್ಲಿ ಬಾಬಣ್ಣ

ಬದುಕು ಬಂಗಾರವಾಯ್ತು ನಾಟಕದಲ್ಲಿ ಬಾಬಣ್ಣ

ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ನಾಗಮ್ಮ, ಮಹಾದೇವಿ, ಪದ್ಮವ್ವ, ಚಿತ್ತರಂಜನಿ, ಮಲ್ಲಿಕಾರ್ಜುನ, ವೇಮನ ಸೇರಿದಂತೆ ಅಷ್ಟೂ ಪಾತ್ರಗಳಲ್ಲಿ ನಟಿಸಿದರು.

ನಾಟಕ ಕಂಪನಿಗಳ ಭರಾಟೆ ಇಳಿಮುಖವಾದ ಮೇಲೆ ಕಳೆದ ಹತ್ತು ಹದಿನೈದು ವರ್ಷಗಳಿಂದ ವೃತ್ತಿರಂಗಭೂಮಿಯ ಮತ್ತೊಬ್ಬ ನಟ ಎಂ.ಎಸ್. ಕೊಟ್ರೇಶ ಅವರೊಂದಿಗೆ ತಂಡ ಮಾಡಿಕೊಂಡು ಆಹ್ವಾನ ಬಂದ ಕಡೆ ಹೋಗಿ ಅಭಿನಯ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT