ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ಹುದ್ದೆ ವಿಚಾರ | ಮಠಾಧೀಶರ ಹೇಳಿಕೆ ಅನಗತ್ಯ: ದೊಡ್ಡನಗೌಡ ಪಾಟೀಲ

Published 29 ಜೂನ್ 2024, 16:19 IST
Last Updated 29 ಜೂನ್ 2024, 16:19 IST
ಅಕ್ಷರ ಗಾತ್ರ

ಕುಷ್ಟಗಿ (ಕೊಪ್ಪಳ ಜಿಲ್ಲೆ): ‘ಮುಖ್ಯಮಂತ್ರಿ ಬದಲಾವಣೆ ಅಥವಾ ಆಯ್ಕೆ ವಿಚಾರದಲ್ಲಿ ಮಠಾಧೀಶರ ಹೇಳಿಕೆಗಳು ಅನಗತ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.

ಡಿ.ಕೆ.ಶಿವಕುಮಾರ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂದು ಮತ್ತು ಲಿಂಗಾಯತರು ಕಾಂಗ್ರೆಸ್‌ ಬೆಂಬಲಿಸಿದ್ದು ತಮ್ಮವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಇನ್ನೊಬ್ಬ ಮಠಾಧೀಶರು ನೀಡಿದ ಹೇಳಿಕೆಗೆ ಶನಿವಾರ ಇಲ್ಲಿ ಸುದ್ದಿಗಾರರ ಬಳಿ ಪ್ರತಿಕ್ರಿಯಿಸಿದ ಅವರು ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರು ಮಾತ್ರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಹೊರತು ಯಾವುದೇ ಸ್ವಾಮೀಜಿಗಳು ಹೇಳುವುದನ್ನು ನಂಬುವುದಲ್ಲ. ಆದರೆ ತಮ್ಮ ಸಮುದಾಯಕ್ಕೂ ಮುಖ್ಯಮಂತ್ರಿ ಸ್ಥಾನ ದೊರೆಯಲಿ ಎಂಬ ಕಾರಣಕ್ಕೆ ಕೆಲ ಮಠಾಧೀಶರು ಹಾಗೆ ಹೇಳಿರಬಹುದು’ ಎಂದರು.

‘ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಬಹಳಷ್ಟು ಗೊಂದಲ, ಆಂತರಿಕ ಕಚ್ಚಾಟ ಆರಂಭಗೊಂಡಿರುವುದು ಕಂಡುಬರುತ್ತಿದೆ. ಒಂದೆಡೆ ಪೀಠ ಬಿಟ್ಟುಕೊಟ್ಟರೆ ನಾನೇ ಸ್ವಾಮೀಜಿ ಆಗುತ್ತೇನೆ ಎಂದು ಸಹಕಾರ ಸಚಿವ ರಾಜಣ್ಣ ಹೇಳುತ್ತಾರೆ, ಇನ್ನೊಂದೆಡೆ ಜಾತಿವಾರು ಉಪ ಮುಖ್ಯಮಂತ್ರಿ ಸ್ಥಾನಗಳ ಸೃಷ್ಟಿಗೆ ಹೋರಾಟ ನಡೆಯುತ್ತಿದೆ. ಹಾಗಾಗಿ ಈ ಸರ್ಕಾರದಲ್ಲಿ ಆಂತರಿಕ ಗೊಂದಲ ಹೆಚ್ಚುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಿ ಎಲ್ಲ ರೀತಿಯ ಬಲವನ್ನೂ ವಿನಿಯೋಗಿಸಿ ಅತಿ ಹೆಚ್ಚು ಸ್ಥಾನಗಳೊಂದಿಗೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿದ್ದ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಮೂಲೆಗುಂಪಾಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಒಂದು ಬಣ ಇನ್ನಿಲ್ಲದ ವ್ಯವಸ್ಥಿತ ಸಂಚು ನಡೆಸುತ್ತಿದೆ. ಇದೇ ಸ್ಥಿತಿ ಮುಂದುವರೆದರೆ ಕಾಂಗ್ರೆಸ್‌ ಸರ್ಕಾರದಿಂದ ಸುಗಮ ಆಡಳಿತ ನಿರೀಕ್ಷಿಸಲು ಸಾಧ್ಯವೇ ಇಲ್ಲ’ ಎಂದರು.

ಬಿಜೆಪಿ ಮುಖಂಡರಾದ ಬಸವರಾಜ ಹಳ್ಳೂರು, ವಿಜಯಕುಮಾರ ಹಿರೇಮಠ, ಚಂದ್ರಕಾಂತ ವಡಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT