ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ಬೆಟ್ಟದ ಬಸವನಹಳ್ಳಿ ಮಂಡ್ಯದ ಊಟಿ

ಕೈಗೆ ಸಿಗಲಿವೆ ಚಲಿಸುವ ಮೋಡಗಳು, ಪ್ರಕೃತಿಯ ರಮಣೀಯ ತಾಣ ಮನಮೋಹಕ
ಎ.ಬಿ.ಚೇತನ ಕುಮಾರ
Published : 17 ನವೆಂಬರ್ 2023, 5:34 IST
Last Updated : 17 ನವೆಂಬರ್ 2023, 5:34 IST
ಫಾಲೋ ಮಾಡಿ
Comments

ಹಲಗೂರು: ಕಾವೇರಿ ವನ್ಯಜೀವಿ ವಲಯದ ಬಸವನಹಳ್ಳಿ ಬೆಟ್ಟದಲ್ಲಿ ನೆಲೆಸಿರುವ ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ಭಕ್ತರ ಆರಾಧ್ಯ ದೈವವಾಗಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬಸವನಹಳ್ಳಿಯ ಪ್ರಕೃತಿ ಸೌಂದರ್ಯ ಮನಮೋಹಕವಾಗಿದ್ದು ಮಂಡ್ಯ ಜಿಲ್ಲೆಯ ಊಟಿ ಎಂದೇ ಪ್ರಸಿದ್ಧಿ ಪಡೆದಿದೆ.

ರಾಜಧಾನಿ ಬೆಂಗಳೂರಿನಿಂದ 90 ಕಿ.ಮೀ, ಮಂಡ್ಯ ಜಿಲ್ಲಾ ಕೇಂದ್ರದಿಂದ 54 ಕಿ.ಮೀ ದೂರವಿರುವ ಬಸವನಬೆಟ್ಟ ತನ್ನ ರುದ್ರ ರಮಣೀಯ ದೃಶ್ಯದಿಂದ ಗಮನ ಸೆಳೆಯುತ್ತಿದೆ. ಹಲಗೂರಿನಿಂದ ಎಚ್.ಬಸವಾಪುರ ಮಾರ್ಗವಾಗಿ ಬೆಟ್ಟದ ಕಡಿದಾದ ತಿರುವುಗಳ ನಡುವೆ ಸಾಗುವುದೇ ಒಂದು ಸುಂದರ ಅನುಭವವಾಗಿದೆ.

ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ದೇವಾಲಯವು ಏಕಶಿಲಾ ಬಂಡೆಯ ಮೇಲೆ ನಿರ್ಮಾಣವಾಗಿದ್ದು, ತಳಹದಿ ಪೀಠ, ಶಿವಲಿಂಗ, ನಂದಿ ರಚನೆ ಆಶ್ಚರ್ಯ ಸೃಷ್ಟಿಸುತ್ತದೆ. ಈ ದೇವಾಲಯದ ಮುಖಮಂಟಪದಲ್ಲಿ ವೀರಭದ್ರಸ್ವಾಮಿ, ಆನೆಯ ಕೆತ್ತನೆ ಇದೆ. ಮಹಾ ಮಂಟಪದಲ್ಲಿ ಭಕ್ತರು ನಿಲ್ಲಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಮುಂಭಾಗದಲ್ಲಿ ಸುಖನಾಶಿ ಇದ್ದು, ಗರ್ಭಗುಡಿಯಲ್ಲಿ ಶಿವಲಿಂಗ, ನಂದಿಯ ಕೆತ್ತನೆ ಇದೆ. ಕ್ರಿ.ಶ 570- 650 ಅವಧಿಯಲ್ಲಿ ಚೋಳರು ದೇವಾಲಯ ನಿರ್ಮಿಸಿದ ಕರುಹುಗಳಿವೆ.

ಬಸವನಬೆಟ್ಟ ಅರಣ್ಯ ಪ್ರದೇಶವು ಸಮುದ್ರ ಮಟ್ಟಕ್ಕಿಂತ 1128 ಮೀಟರ್‌ಗಳಷ್ಟು ಎತ್ತರದಲ್ಲಿದ್ದು, ಉತ್ತಮ ಹವಾಗುಣವನ್ನು ಹೊಂದಿದೆ. ಮಳೆಗಾಲ, ಚಳಿಗಾಲದಲ್ಲಿ ಬೀಳುವ ದಟ್ಟ ಮಂಜು ಪ್ರವಾಸಿಗರ ಮನಸ್ಸನ್ನು ಸೂರೆ ಮಾಡುತ್ತಿದೆ. ಬೆಟ್ಟ ಎತ್ತರದಲ್ಲಿರುವುದರಿಂದ ಮೋಡಗಳು ಕೈಗೆ ಸಿಗುವ ರಸಾನುಭವವನ್ನು ಪ್ರವಾಸಿಗರು ಅನುಭವಿಸುತ್ತಾರೆ.

ಪ್ರಕೃತಿಯ ಮಡಿಲು, ಅರಣ್ಯ ಪ್ರದೇಶ ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತದೆ. ಭಕ್ತಿಯಿಂದ ಬರುವ ಜನರಿಗೆ ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿಯು ಭಕ್ತರು ಕೇಳಿದ್ದನ್ನು ಆಶೀರ್ವಾದಿಸುತ್ತಾನೆ ಎಂಬ ನಂಬಿಕೆ ಇದೆ. ಪ್ರಕೃತಿಯನ್ನು ಆರಾಧಿಸುವ ಪ್ರವಾಸಿಗರಿಗೆ ಇಲ್ಲಿಯ ಹಸಿರು ಪರಿಸರ ಸುಂದರ ಅನುಭವ ನೀಡುತ್ತದೆ.

ದೇವಾಲಯದ ಅವರಣದಲ್ಲಿ ಶಾಂತಲಿಂಗ ಮಹಾಸ್ವಾಮಿಗಳ ಜೀವಂತ ಗದ್ದುಗೆ, ಮಜ್ಜನ ಕೊಳ, ತೀರ್ಥ ಕೊಳ, ಭಕ್ತನ ಕಟ್ಟೆ ಕಾಣಬಹುದಾಗಿದೆ. ನೂರಾರು ವರ್ಷಗಳಷ್ಟು ಹಳೆಯದಾದ ಆಲದಮರ ಮತ್ತು ಮಾವಿನ ಮರಗಳು ದೇವಾಲಯದ ಇತಿಹಾಸ ಸಾರುತ್ತಿವೆ.

ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ದೇವಾಲಯಗಳನ್ನು ನಿರ್ಮಾಣ ಮಾಡಿದರೂ ಗ್ರಾಮಸ್ಥರು, ಯಜಮಾನರು ಒಡಗೂಡಿ ಹೆಬ್ಬೆಟ್ಟಕ್ಕೆ ಬಂದು ಮೊದಲ ಪೂಜೆ ಸಲ್ಲಿಸಿ, ದೇವರನ್ನು ಕೊಂಡೊಯ್ಯಲಾಗುತ್ತದೆ. ಅರ್ಚಕರನ್ನು ನೇಮಕ ಮಾಡುವ ಪೂಜಾ ಕಾರ್ಯಗಳೂ ನಡೆಯುತ್ತವೆ. ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ದೇವಾಲಯವು ಪ್ರಾಚೀನ ಪುರಾತತ್ವ ಇಲಾಖೆಗೆ ಸೇರ್ಪಡೆಯಾಗಿದೆ.

ಸುಂದರ ಪ್ರಕೃತಿ ತಾಣದಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ ಎನ್ನುವುದೇ ನೋವಿನ ಸಂಗತಿ. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಪ್ರಸಿದ್ಧ ಪ್ರವಾಸಿ ತಾಣ ಹೆಚ್ಚು ಪ್ರಸಿದ್ಧಿ ಪಡೆಯಲು ಸಾಧ್ಯವಾಗಿಲ್ಲ. ಧಾರ್ಮಿಕ ದತ್ತಿ ಇಲಾಖೆ ನಿರ್ಮಾಣ ಮಾಡುತ್ತಿದ್ದ ಪ್ರವಾಸಿ ಮಂದಿರ ಕಾಮಗಾರಿ ಅರ್ಧಕ್ಕೆ ನಿಂತಿದೆ. ಶೌಚಾಲಯ ಸೇರಿ ಮೂಲ ಸೌಲಭ್ಯ ಒದಗಿಸಿದರೆ ಈ ತಾಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳಲಿದೆ ಎಂದು ಸ್ಥಳೀಯರು ಹೇಳುತ್ತಾರೆ.

‘ಕಾರ್ತೀಕ ಮಾಸದಲ್ಲಿ ದೀಪೋತ್ಸವಕ್ಕೆ ಅಪಾರ ಭಕ್ತರು ಬರುತ್ತಾರೆ, ಮಹಿಳೆಯರು ರಾತ್ರಿ ಅಲ್ಲಿಯೇ ಉಳಿಯುತ್ತಾರೆ. ಅವರಿಗೆ ಶೌಚಾಲಯ ಇಲ್ಲದೇ ಪರದಾಡುತ್ತಾರೆ, ಆದಷ್ಟು ಬೇಗ ಶೌಚಾಲಯ ನಿರ್ಮಾಣವಾಗಬೇಕು’ ಎಂದು ಭಕ್ತರೊಬ್ಬರು ಒತ್ತಾಯಿಸಿದರು.

ಹೆಬ್ಬೆಟ್ಟದ ಬಸವೇಶ್ವರಸ್ವಾಮಿ
ಹೆಬ್ಬೆಟ್ಟದ ಬಸವೇಶ್ವರಸ್ವಾಮಿ

ವಿಮಾನ ಗೋಪುರ ಲೋಕಾರ್ಪಣೆ; ಸಕಲ ಸಿದ್ಧತೆ

ಹೆಬ್ಬೆಟ್ಟದ ಬಸವೇಶ್ವರಸ್ವಾಮಿ ದೇವಸ್ಥಾನದ ನೂತನ ವಿಮಾನ ಗೋಪುರ ಲೋಕರ್ಪಣೆ ಸಮಾರಂಭ ನ.19 20ರಂದು ವೈಭವಯುತವಾಗಿ ನಡೆಯಲಿದೆ. ದೇವಸ್ಥಾನದ ಗೋಪುರವು ಶಿಥಿಲವಾಗಿರುವುದನ್ನು ಮನಗಂಡು ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿಯ ಕುಲಸ್ಥರಾದ ದಿ.ಎಚ್‌.ಬಿ. ಪುಟ್ಟಬಸಪ್ಪ– ಪುಟ್ಟಮಾದಮ್ಮ ಅವರ ಮೊಮ್ಮಕ್ಕಳು ಉದ್ಯಮಿ ಎಚ್.ಬಿ. ಶಿವಸ್ವಾಮಿ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಬಸವೇಶ್ವರ ಗೋಪುರ ಸಮಿತಿ ಅರ್ಚಕ ಸಮೂಹ ಹಾಗೂ ಬಸವನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದೊಂದಿಗೆ ಸುಂದರ ವಿಮಾನ ಗೋಪುರ ಸಿದ್ಧವಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ವಿಮಾನ ಗೋಪುರ ಉದ್ಘಾಟನೆ ಕಳಸಾರೋಹಣ ಷೋಡಸೋಪಾಚಾರ ಕುಂಭಾಬೀಷೇಕ ದೇವತಾ ಹೋಮ ಕಾರ್ಯಕ್ರಮ ನಡೆಯಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 2 ದಿನ ನಡೆಯಲಿರುವ ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಹೆಬ್ಬೆಟ್ಟಟು ಶ್ರೀ ಬಸವೇಶ್ವರಸ್ವಾಮಿ ಕೃಪೆಗೆ ಪಾತ್ರಾಗಬೇಕು  ಎಂದು ದೇವರ ಕುಲಸ್ಥರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT