ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ: 8ನೇ ಆರೋಪಿ ಶರಣಾಗತಿ

ಆರೋಪಿಯ ಮನವೊಲಿಸಿದ ಟ್ಯಾಕ್ಸಿ ಮಾಲೀಕರ ಸಂಘದ ಪದಾಧಿಕಾರಿಗಳು
Published 13 ಜೂನ್ 2024, 16:14 IST
Last Updated 13 ಜೂನ್ 2024, 16:14 IST
ಅಕ್ಷರ ಗಾತ್ರ

ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣದ 8ನೇ ಆರೋಪಿ, ವೃತ್ತಿಯಲ್ಲಿ ಚಾಲಕನಾಗಿರುವ, ತಾಲ್ಲೂಕಿನ ಕುರುಬರಹಟ್ಟಿ ನಿವಾಸಿ ರವಿ ಗುರುವಾರ ನಗರದಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.

ರೇಣುಕಸ್ವಾಮಿಯನ್ನು ಅಪಹರಿಸಿದ್ದ ತಂಡ ಈತ ಚಾಲನೆ ಮಾಡುತ್ತಿದ್ದ ಕಾರು ಬಾಡಿಗೆಗೆ ಪಡೆದು ಬೆಂಗಳೂರಿಗೆ ಕರೆದೊಯ್ದಿತ್ತು.

ಕೊಲೆ ಪ್ರಕರಣದ 4ನೇ ಆರೋಪಿಯಾಗಿರುವ ರಾಘವೇಂದ್ರ ಹಾಗೂ ಇತರರು ಜೂನ್‌ 8ರಂದು ಟ್ಯಾಕ್ಸಿ ಕಾಯ್ದಿರಿಸಿದ್ದರು. ಇಟಿಯೋಸ್‌ ಕಾರು ತಂದಿದ್ದ ರವಿ, ರೇಣುಕಸ್ವಾಮಿ ಹಾಗೂ ಇತರರನ್ನು ನಗರದ ಜಗಳೂರು ಮಹಾಲಿಂಗಪ್ಪ ಪೆಟ್ರೋಲ್‌ ಬಂಕ್ ಬಳಿ ಹತ್ತಿಸಿಕೊಂಡಿದ್ದ. ಎಲ್ಲರೂ ಸಂಜೆ ಬೆಂಗಳೂರು ತಲುಪಿದ್ದರು. ಮಧ್ಯರಾತ್ರಿವರೆಗೂ ಬಾಡಿಗೆ ಹಣಕ್ಕಾಗಿ ಕಾದಿದ್ದ ರವಿಗೆ, ನಂತರ ಕೊಲೆ ವಿಷಯ ಗೊತ್ತಾಗಿತ್ತಾದರೂ ಅಂದೇ ನಗರಕ್ಕೆ ವಾಪಸಾಗಿ ತಲೆಮರೆಸಿಕೊಂಡಿದ್ದ.

ಶರಣಾಗತಿಗೆ ಮನವೊಲಿಕೆ:

ಪ್ರಕರಣ ಜಟಿಲವಾಗುತ್ತಿದ್ದಂತೆ ಟ್ಯಾಕ್ಸಿ ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಕರೆ ಮಾಡಿದ್ದ ರವಿ, ತನ್ನದೇ ಕಾರ್‌ನಲ್ಲಿ ರೇಣುಕಸ್ವಾಮಿಯನ್ನು ಕರೆದೊಯ್ದ ವಿಚಾರ ತಿಳಿಸಿದ್ದ. ಸಿಕ್ಕಿಬೀಳುವ ಭಯ ಕಾಡುತ್ತಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿದ್ದ. ನಂತರ ರವಿಯನ್ನು ಭೇಟಿಯಾದ ಟ್ಸಾಕ್ಸಿ ಮಾಲೀಕರ ಸಂಘದ ಸದಸ್ಯರು,  ಪೊಲೀಸರಿಗೆ ಶರಣಾಗಿ ಎಲ್ಲ ವಿವರವನ್ನು ತಿಳಿಸುವಂತೆ ಮನವೊಲಿಸಿದ್ದರು. ಆತ ಡಿವೈಎಸ್‌ಪಿ ಕಚೇರಿಗೆ ಬಂದು ಶರಣಾದ ಎಂದು ಮೂಲಗಳು ತಿಳಿಸಿವೆ.

‘ಜೂನ್‌ 8ರಂದು ರಾತ್ರಿ ರೇಣುಕಸ್ವಾಮಿ ಹತ್ಯೆಯಾದ ಸುದ್ದಿ ರವಿಗೆ ತಿಳಿದಿತ್ತು. ಕೊಲೆ ಹೊಣೆಯನ್ನು ಹೊತ್ತುಕೊಳ್ಳುವಂತೆ  ಇತರ ಆರೋಪಿಗಳು ಈತನಿಗೂ ಆಮಿಷವೊಡ್ಡಿದ್ದರು. ಅದಕ್ಕೆ ಒಪ್ಪದೆ ಕಾರಿನ ಬಾಡಿಗೆ ಮಾತ್ರ ಪಡೆದು ಚಿತ್ರದುರ್ಗಕ್ಕೆ ವಾಪಸ್ ಬಂದೆ. ಭಯದಿಂದಲೇ ತಲೆಮರೆಸಿಕೊಂಡಿದ್ದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತಿದೆ’ ಎಂದು ತಿಳಿಸಿದ. ನಾವು ಆತನ ಜೊತೆ ಮಾತನಾಡಿ ಪೊಲೀಸರಿಗೆ ಶರಣಾಗುವಂತೆ ಮನವೊಲಿಸಿದೆವು’ ಎಂದು ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಮೋಹನ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿ ಎದುರು ಹಾಜರುಪಡಿಸಿ ಎಂದು ಕೇಳಿಕೊಂಡು ರವಿ ಎನ್ನುವ ವ್ಯಕ್ತಿ ಡಿವೈಎಸ್‌ಪಿ ಕಚೇರಿಗೆ ಬಂದಿದ್ದಾನೆ. ಆತನನ್ನು ನಾವು ತನಿಖಾಧಿಕಾರಿಗೆ ಒಪ್ಪಿಸುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT