ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ | 'ಮನೆ ಮನೆ ಹಬ್ಬದಂತೆ ದಸರಾ '

ಮೈಸೂರು ಮಾದರಿ ವಿದ್ಯುತ್‌ ದೀಪಾಲಂಕಾರ: ಶಾಸಕ ರಮೇಶ ಬಂಡಿಸಿದ್ದೇಗೌಡ
Published : 19 ಸೆಪ್ಟೆಂಬರ್ 2024, 12:36 IST
Last Updated : 19 ಸೆಪ್ಟೆಂಬರ್ 2024, 12:36 IST
ಫಾಲೋ ಮಾಡಿ
Comments

ಶ್ರೀರಂಗಪಟ್ಟಣ: ಅ.4ರಿಂದ ಪಟ್ಟಣದಲ್ಲಿ ನಡೆಯಲಿರುವ ದಸರಾ ಉತ್ಸವವನ್ನು ಮನೆ ಮನೆ ಹಬ್ಬದಂತೆ ಆಚರಿಸಲಾಗುವುದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ದಸರಾ ಮಹೋತ್ಸವದ ನಿಮಿತ್ತ ಪಟ್ಟಣದ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಅಧಿಕಾರಿಗಳು ಮತ್ತು ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

'ಪಟ್ಟಣದ ಎಲ್ಲ ಬೀದಿಗಳನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗುವುದು. ದಸರಾ ಉತ್ಸವ ನಡೆಯುವ ಸಂದರ್ಭದಲ್ಲಿ, ಸಂಜೆ ವೇಳೆ ಪ್ರತಿ ಮನೆಗಳಲ್ಲೂ ದೀಪಗಳನ್ನು ಬೆಳಗುವಂತೆ ಪರಂಪರೆ ನಡಿಗೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.‌

‘ವಿದ್ಯುತ್‌ ದೀಪಾಲಂಕಾರ: ಜಂಬೂ ಸವಾರಿ ಆರಂಭವಾಗಲಿರುವ ಕಿರಂಗೂರು ವೃತ್ತದ ಬನ್ನಿ ಮಂಟಪ, ಪಟ್ಟಣದ ಮುಖ್ಯ ಬೀದಿಗಳು, ವೃತ್ತಗಳು, ಪ್ರಮುಖ ಸ್ಮಾರಕಗಳು ಹಾಗೂ ಸರ್ಕಾರಿ ಕಚೇರಿಗಳನ್ನು ಆಕರ್ಷಕ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗುವುದು. ಮೈಸೂರು ಮಾದರಿಯಲ್ಲಿ ಇಲ್ಲಿಯೂ ವಿದ್ಯುತ್‌ ದೀಪಗಳ ಅಲಂಕಾರ ಮಾಡುವ ಮೂಲಕ ನಾಡ ಹಬ್ಬಕ್ಕೆ ವಿಶೇಷ ಮೆರಗು ನೀಡಲಾಗುತ್ತದೆ’ ಎಂದು ಸೆಸ್ಕ್‌ ಅಧ್ಯಕ್ಷರೂ ಆದ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ಮಾತನಾಡಿ, ‘ದಸರಾ ಉತ್ಸವದಲ್ಲಿ ಯೋಗ ದಸರಾ, ರೈತ ದಸರಾ, ಯುವ ದಸರಾ, ಕುಸ್ತಿ ದಸರಾ, ಮಹಿಳಾ ದಸರಾ, ಕ್ರೀಡಾ ದಸರಾ ಇರುತ್ತದೆ. ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಆಹಾರ ಮೇಳ, ಪುಸ್ತಕ ಪ್ರದರ್ಶನ ಹಾಗೂ ವಿವಿಧ ಇಲಾಖೆಗಳ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.

ಜ್ಯೋತಿಷಿ ವಿ. ಭಾನುಪ್ರಕಾಶ್‌ ಶರ್ಮಾ ಮಾತನಾಡಿ, ‘ಈ ಬಾರಿ ಕೆಆರ್‌ಎಸ್‌ ಅಣೆಕಟ್ಟೆ ಭರ್ತಿ ಆಗಿರುವುದು ದಸರಾ ಉತ್ಸವದ ಸಂಭ್ರಮವನ್ನು ಹೆಚ್ಚಿಸಲಿದೆ. ಬನ್ನಿ ಮಂಟಪದಲ್ಲಿ ಬನ್ನಿ ಪೂಜೆ ಇತರ ಸಾಂಪ್ರದಾಯಿಕ ಆಚರಣೆಗಳು ಜರುಗಲಿವೆ’ ಎಂದರು.

ಮನ್‌ಮುಲ್‌ ಅಧ್ಯಕ್ಷ ಬಿ. ಬೋರೇಗೌಡ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಂ. ನಂದೀಶ್‌, ಎಂಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಎನ್‌.ವಿ. ಚಲುವರಾಜು, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ, ಸದಸ್ಯ ಎಂ.ಎಲ್‌. ದಿನೇಶ್‌, ಶ್ರೀರಂಗನಾಥಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೋಮಶೇಖರ್‌, ತಾಲ್ಲೂಕು ಪಂಚಾಯಿತಿ ಇಒ ವೇಣು, ಡಿವೈಎಸ್ಪಿ ಮುರಳಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

‘ಸ್ಥಳೀಯ ಕಲಾವಿದರಿಗೆ ಆದ್ಯತೆ’ ‘ದಸರಾ ಉತ್ಸವದ ಮೆರವಣಿಗೆ ಮತ್ತು ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ನಡೆಯಲಿರುವ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕಾರ್ಯಕ್ರಮ ನೀಡುವ ಕಲಾವಿದರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಹಿಂಬರಹ ಪಡೆಯಬೇಕು’ ಎಂದು ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT