ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಹ ಪರಿಸ್ಥಿತಿ ಉಲ್ಬಣ: ಶಾಸಕ, ಡಿಸಿ ಪರಿಶೀಲನೆ

ಕೆಆರ್‌ಎಸ್‌ ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ ನೀರು
Published 26 ಜುಲೈ 2024, 14:41 IST
Last Updated 26 ಜುಲೈ 2024, 14:41 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸುತ್ತಿರುವುದರಿಂದ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಭಣಿಸಿದ್ದು, ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್‌ ಆಸಿಫ್‌ ಮತ್ತು ಅಧಿಕಾರಿಗಳ ತಂಡ ಪಟ್ಟಣ ಮತ್ತು ವಿವಿಧೆಡೆ ನದಿ ತೀರಕ್ಕೆ ಶುಕ್ರವಾರ ತೆರಳಿ ಪರಿಸ್ಥಿತಿ ಕುರಿತು ಪರಿಶೀಲಿಸಿತು

ಪಟ್ಟಣದ ವೆಲ್ಲೆಸ್ಲಿ ಸೇತುವೆ. ಪಶ್ಚಿಮವಾಹಿನಿ, ರಂಗನತಿಟ್ಟು ಪಕ್ಷಿಧಾಮ ಮತ್ತು ಬಲಮುರಿ ಪ್ರವಾಸಿ ತಾಣದ ಬಳಿಗೆ ತೆರಳಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿತು. ನದಿ ತೀರಕ್ಕೆ ಜನ, ಜಾನುವಾರು ತೆರಳದಂತೆ ನೋಡಿಕೊಳ್ಳಬೇಕು. ಪಶ್ಚಿಮವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಇತರ ಕೈಂಕರ್ಯ ನಡೆಸಲು ಯಾರಿಗೂ ಅವಕಾಶ ನೀಡಬಾರದು. ಸೇತುವೆ ಮೇಲೆ ಓಡಾಡುವುದನ್ನು ನಿರ್ಬಂಧಿಸಬೇಕು. ಪ್ರವಾಸಿಗರು ನದಿ ತೀರದ ಸ್ಥಳಗಳಿಗೆ ತೆರಳದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

‘ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಿದ್ದ ಶಾಸಕ ಮತ್ತು ಅಧಿಕಾರಿಗಳ ತಂಡ ಪಕ್ಷಿಗಳ ಬಗ್ಗೆ ಮಾಹಿತಿ ಪಡೆಯಿತು. ಪಕ್ಷಿಧಾಮದ ಗಾಜಿನ ಸೇತುವೆ, ಪಾದಚಾರಿ ಮಾರ್ಗ, ದೋಣಿ ವಿಹಾರ ಕೇಂದ್ರಗಳು ಜಲಾವೃತವಾಗಿರುವುದನ್ನು ವೀಕ್ಷಿಸಿತು. ನೀರಿನ ಮಟ್ಟ ಕಡಿಮೆ ಆಗುವವರೆಗೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಬಾರದು’ ಎಂದು ರಮೇಶ ಬಂಡಿಸಿದ್ದೇಗೌಡ ಹೇಳಿದರು.

‘ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಪಕ್ಷಿಧಾಮದಲ್ಲಿ ನದಿಯ ಒಳಗಿದ್ದ ಎಲ್ಲ ದೋಣಿಗಳನ್ನು ದಡಕ್ಕೆ ತಂದಿರಿಸಲಾಗಿದೆ. ಐಬಿಸ್‌, ಕಾರ್ಮೊರೆಂಟ್‌, ಇಗ್ರೆಟ್‌ ಜಾತಿಯ ಪಕ್ಷಿಗಳು ಇಲ್ಲಿದ್ದು, ಎತ್ತರದ ಮರಗಳ ಮೇಲೆ ಆಶ್ರಯ ಪಡೆದಿವೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಬೆಳೆ ನಷ್ಟ ಪರಿಹಾರ:

‘ನದಿಯಲ್ಲಿ ಉಂಟಾಗಿರುವ ಪ್ರವಾಹದಿಂದ ನದಿ ತೀರದ ಕೃಷಿ ಜಮೀನುಗಳು ಜಲಾವೃತವಾಗಿದ್ದು, ಬೆಳೆ ನಷ್ಟ ಅನುಭವಿಸುವ ರೈತರಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

‘ತಾಲ್ಲೂಕಿನ ಬೆಳಗೊಳ, ಕಾರೇಕುರ, ಪಾಲಹಳ್ಳಿ, ಗಂಜಾಂ, ಶ್ರೀನಿವಾಸ ಅಗ್ರಹಾರ, ಚಿಕ್ಕಪಾಳ್ಯ, ಮರಳಾಗಾಲ, ದೊಡ್ಡಪಾಳ್ಯ ಮತ್ತು ಮಹದೇವಪುರ ಬಳಿ ನದಿ ತೀರದ ಕೃಷಿ ಜಮೀನುಗಳು ಜಲಾವೃತವಾಗಿರುವ ಮಾಹಿತಿ ಬಂದಿದೆ. ಪ್ರವಾಹ ನಿಂತ ಕೂಡಲೇ ಬೆಳೆ ನಷ್ಟ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಹಶೀಲ್ದಾರ್‌ಗೆ ತಿಳಿಸಿದ್ದೇನೆ. ಭತ್ತ, ಕಬ್ಬು ಹಾಗೂ ತೋಟಗಾರಿಕೆ ಬೆಳೆಗಳು ಹಾಳಾಗಿದ್ದರೆ ಸರ್ಕಾರದ ನಿಯಮಾನುಸಾರ ಪರಿಹಾರ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.

ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೇಣು, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ, ಕಂದಾಯ ನಿರೀಕ್ಷಕರಾದ ರೇವಣ್ಣ, ಬಸವರಾಜು, ಸಿಪಿಐ ಬಿ.ಎಸ್‌. ಪ್ರಕಾಶ್‌ ಇದ್ದರು.

ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಜಿಲ್ಲಾಧಿಕಾರಿ ಕುಮಾರ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್‌ ಆಸಿಫ್‌ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌ ಶುಕ್ರವಾರ ಭೇಟಿ ನೀಡಿದ್ದರು
ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಜಿಲ್ಲಾಧಿಕಾರಿ ಕುಮಾರ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್‌ ಆಸಿಫ್‌ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌ ಶುಕ್ರವಾರ ಭೇಟಿ ನೀಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT