ಮಂಡ್ಯ: ರೆಬಲ್‌ಸ್ಟಾರ್ ಅಂಬರೀಷ್ ಸಾವಿನ ಅನುಕಂಪ, ಬಿಜೆಪಿ– ರೈತಸಂಘದ ಬೆಂಬಲ, ಕಾಂಗ್ರೆಸ್ ಅತೃಪ್ತ ನಾಯಕರ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಗೆಲುವಿನ ನಗೆ ಬೀರಿದ್ದಾರೆ. ಗುಪ್ತಗಾಮಿನಿಯಂತೆ ಕೆಲಸ ಮಾಡಿದ ಜೆಡಿಎಸ್–ಕಾಂಗ್ರೆಸ್ ನಾಯಕರ ಒಳ ಏಟು ಮೈತ್ರಿ ಅಭ್ಯರ್ಥಿ ಕೆ.ನಿಖಿಲ್ ಅವರನ್ನು ಸೋಲಿಸಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಾಕಷ್ಟು ಪೂರ್ವ ತಯಾರಿಯಿಂದಲೇ ಪುತ್ರ ಕೆ.ನಿಖಿಲ್ ಅವರನ್ನು ಕಣಕ್ಕೆ ಇಳಿಸಿದ್ದರು. ಕ್ಷೇತ್ರದಲ್ಲಿರುವ ಎಂಟು ಜೆಡಿಎಸ್ ಶಾಸಕರು, ಅವರಲ್ಲಿ ಮೂವರು ಸಚಿವರು, ಮೂವರು ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಹಕಾರದಿಂದ ನಿಖಿಲ್ ಗೆಲುವು ಸಾಧಿಸುತ್ತಾರೆ ಎಂದು ಮುಖ್ಯಮಂತ್ರಿ ನಂಬಿದ್ದರು. ಅತಿಯಾದ ಆತ್ಮವಿಶ್ವಾಸದಲ್ಲಿ ಜೆಡಿಎಸ್ ಮುಖಂಡರು ತೇಲಿದ್ದರು. ಆದರೆ, ಸುಮಲತಾ ಸ್ಪರ್ಧೆಯ ನಂತರ ಜೆಡಿಎಸ್ ಭದ್ರಕೋಟೆಗೆ ಬಲವಾದ ಪೈಪೋಟಿ ಎದುರಾಯಿತು. ಇಂಥದ್ದೊಂದು ಸ್ಪರ್ಧೆಯನ್ನು ಜೆಡಿಎಸ್ ನಿರೀಕ್ಷಿಸಿರಲಿಲ್ಲ.

ಸ್ಥಳೀಯವಾಗಿ ಜೆಡಿಎಸ್‌ನಲ್ಲಿ ಹಲವು ಮುಖಂಡರು ಇದ್ದರೂ ಹಾಸನದಿಂದ ನಿಖಿಲ್ ಅವರನ್ನು ಕರೆತಂದು ನಿಲ್ಲಿಸಿದ್ದಕ್ಕೆ ಜೆಡಿಎಸ್‌ನಲ್ಲೇ ವಿರೋಧ ಇತ್ತು. ಇದು ಫಲಿತಾಂಶದಲ್ಲಿ ಒಳ ಏಟಾಗಿ ಪರಿವರ್ತನೆಗೊಂಡಿದ್ದು, ಸುಮಲತಾ ಗೆಲುವಿಗೆ ಸಹಕಾರಿ ಯಾಯಿತು. ಒಳ ಏಟು ಗುಪ್ತಗಾಮಿನಿ ಯಂತೆ ಕೆಲಸ ಮಾಡಿತು. ಈ ನಿಟ್ಟಿನಲ್ಲಿ ಸುಮಲತಾ ‘ಸ್ವಾಭಿಮಾನದ ಸಂಕೇತ’ ಎಂದೇ ಬಿಂಬಿತಗೊಂಡರು.

ಸುಮಲತಾ ಸ್ಪರ್ಧೆ, ಜೋಡೆತ್ತು ಯಶ್–ದರ್ಶನ್ ಬೆಂಬಲ, ಬಿಜೆಪಿ– ರೈತಸಂಘದ ಬೆಂಬಲ, ಕಾಂಗ್ರೆಸ್ ಅತೃಪ್ತ ಮುಖಂಡರ ಸಾಥ್‌ನಿಂದ ಮುಖ್ಯಮಂತ್ರಿ ಮುಂದೆ ಕಠಿಣ ಸ್ಪರ್ಧೆ ಎದುರಾಯಿತು. ಅನಾಯಾಸವಾಗಿ ಪುತ್ರನನ್ನು ಗೆಲ್ಲಿಸಿಕೊಳ್ಳುವ ಕನಸು ಕಟ್ಟಿದ್ದ ಅವರು ಕೊಂಚ ಹತಾಶರಾದಂತೆ ವರ್ತಿಸಿದರು. ಸುಮಲತಾ ಅವರ ವಿರುದ್ಧ ಆರೋಪಗಳ ಸುರಿಮಳೆಗೈದರು. ಜೆಡಿಎಸ್ ಮುಖಂಡರು ಜಾತಿ ವಿಷಯ ತೆಗೆದರು. ಜೆಡಿಎಸ್ ಮುಖಂಡರ ಮಾತುಗಳು ಸುಮಲತಾ ಅವರ ಖಾತೆಗೆ ಲಾಭದ ಅಂಕಗಳಾಗಿ ಸೇರುತ್ತಾ ಹೋದವು.

ಪ್ರಬುದ್ಧ ವರ್ತನೆ: ಪ್ರಚಾರದ ಹಂತದಲ್ಲಿ ಸುಮಲತಾ ಅವರು ಎಂದೂ ಅತಿರೇಕದಿಂದ ವರ್ತಿಸಲಿಲ್ಲ. ಮಹಿಳೆಯ ಘನತೆಗೆ ಕುಂದು ತರುವ ಆರೋಪ ಮಾಡಿದಾಗಲೂ ಸುಮಲತಾ ಮಿತಿ ಮೀರಿ ಮಾತುಗಳನ್ನಾಡಲಿಲ್ಲ. ಅದೇಅವರಿಗೆ ವರವಾಯಿತು. ಪ್ರಚಾರದ ಕಡೆಯ ದಿನ ಜೆಡಿಎಸ್‌ನ ಎಲ್ಲಾ ಆರೋಪಗಳಿಗೆ ತಿರುಗೇಟು ನೀಡಿದ ಸುಮಲತಾ ಬಹಳ ಅನುಭವಿ ರಾಜಕಾರಣಿಯಂತೆ ನಡೆದು ಕೊಂಡರು. ಪುತ್ರ ಅಭಿಷೇಕ್ ಗೌಡ, ಯಶ್, ದರ್ಶನ್ ಅವರ ಕಡೆಯ ದಿನದ ಮಾತುಗಳು ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದವು.

ಅಭಿಪ್ರಾಯ ಸಂಗ್ರಹ: ಕಾಂಗ್ರೆಸ್ ನಿಂದಲೇ ಸ್ಪರ್ಧೆ ಬಯಸಿದ್ದ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೊದಲೇ ಕ್ಷೇತ್ರದಮೂಲೆ ಮೂಲೆ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿದ್ದರು. ‘ಜನಾಭಿಪ್ರಾಯದಂತೆ ಸ್ವತಂತ್ರವಾಗಿ ಕಣಕ್ಕೆ ಇಳಿದಿದ್ದೇನೆ’ ಎಂಬುದಾಗಿ ಪದೇ ಪದೇ ಹೇಳುತ್ತಲೇ ಬಂದಿದ್ದರು. ಇದು ಜನರಿಗೆ ಇಷ್ಟವಾಯಿತು.

ಫಲ ನೀಡದ ಭೇಟಿ: ಸುಮಲತಾ ಸ್ಪರ್ಧೆ ಯೊಂದಿಗೆ ಕಣ ಬಿಗಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರದ ಹಲವು ಮುಖಂಡರ ಮನೆಗಳಿಗೆ ಭೇಟಿ ನೀಡಿದ್ದರು. ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದ ಅವರು ಪುತ್ರನ ಗೆಲುವಿಗಾಗಿ ಶ್ರಮಿಸಿದ್ದರು. ಸಣ್ಣ ಪುಟ್ಟ ಮುಖಂಡರ ಮನೆಗಳಿಗೂ ಭೇಟಿ ನೀಡಿ ಬೆಂಬಲ ಕೋರಿದ್ದರು. ವಿವಿಧ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳು ವಲ್ಲಿ ಯಶಸ್ವಿಯಾಗಿದ್ದರು. ಆದರೂ ಜನರ ವಿಶ್ವಾಸ ಪಡೆಯುವಲ್ಲಿ ವೈಫಲ್ಯ ಕಂಡರು.

ಅಭಿವೃದ್ಧಿ ಚರ್ಚೆ ಇಲ್ಲ: ಮಂಡ್ಯಕ್ಕೆ ₹ 8 ಸಾವಿರ ಕೋಟಿ ಅನುದಾನ ಹರಿಸಿದ್ದರೂ ಅಭಿವೃದ್ಧಿಯ ಬಗ್ಗೆ ಜೆಡಿಎಸ್ ಮುಖಂಡರು ಚರ್ಚೆ ಮಾಡಲೇ ಇಲ್ಲ. ಎಲ್ಲರೂ ವೈಯಕ್ತಿಕವಾಗಿ ಆರೋಪ ಮಾಡುವುದರಲ್ಲೇ ಕಾಲ ಕಳೆದರು. ಅದು ಕೂಡ ಜೆಡಿಎಸ್ ಅಭ್ಯರ್ಥಿಗೆ ಹಿನ್ನಡೆ ಉಂಟಾಯಿತು.

ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ಹಾಗೂ ಸೋಲುಂಡ ಇತರ ಮುಖಂಡರನ್ನು ಸಿ.ಎಸ್.ಪುಟ್ಟರಾಜು ‘ಸತ್ತ ಕುದುರೆಗಳು’ ಎಂದು ಜರಿದಿದ್ದರು. ಆದರೆ, ಅವರು ಲೋಕಸಭಾ ಚುನಾವಣೆ ವೇಳೆ ಕ್ಷಮೆ ಕೋರಿದರು. ಆದರೆ, ಮುಖ್ಯಮಂತ್ರಿ ಅತೃಪ್ತ ಮುಖಂಡರ ಮನವೊಲಿಕೆಗೆ ಮನಸ್ಸು ಮಾಡಲೇ ಇಲ್ಲ. ‘ಬೆನ್ನಿಗೆ ಚೂರಿ ಹಾಕಿದವರ ಬೆಂಬಲ ಬೇಕಾಗಿಲ್ಲ’ ಎಂದೇ ಹೇಳಿದರು. ಇದು ಕೂಡ ಸೋಲಿಗೆ ಕಾರಣವಾಯಿತು.

ನಿಖಿಲ್ ವಿರುದ್ಧ ತಿರುಗಿಬಿದ್ದಿದ್ದ ಮಹಿಳೆಯರು
ಪ್ರಚಾರದ ಸಂದರ್ಭದಲ್ಲಿ ಮಹಿಳೆಯರು ಮೈತ್ರಿ ಅಭ್ಯರ್ಥಿ ನಿಖಿಲ್ ಅವರನ್ನು ಪ್ರಶ್ನೆ ಮಾಡಿದ್ದರು. ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತು ತಪ್ಪಿದ್ದಾರೆ. ಮಹಿಳಾ ಸಂಘಗಳ ಸಾಲಮನ್ನಾ ಮಾಡುವ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಆದ ನಂತರ ಅವರು ಮೋಸ ಮಾಡಿದರು. ಈಗ ಗೆಲ್ಲಿಸಬೇಕಾ’ ಎಂದೇ ಪ್ರಶ್ನೆ ಮಾಡುತ್ತಿದ್ದರು. ಪ್ರಚಾರದುದ್ದಕ್ಕೂ ಇದು ನಿಖಿಲ್ ಅವರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಕಡೆಗೆ, ತಂದೆ ಜೊತೆ ಮಾತನಾಡಿ ಮಹಿಳಾ ಸಂಘಗಳ ಸಾಲಮನ್ನಾ ಮಾಡುವುದಾಗಿ ನಿಖಿಲ್ ಘೋಷಣೆ ಮಾಡಿದರು. ಆದರೂ ಮಹಿಳೆಯರು ಪಕ್ಷೇತರ ಅಭ್ಯರ್ಥಿಯ ಕೈ ಹಿಡಿದಿರುವುದು ಫಲಿತಾಂಶದಿಂದ ಅನಾವರಣಗೊಂಡಿದೆ.

ಮೂವರು ಸುಮಲತಾರಿಗೆ 20,563 ಮತಗಳು
ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಸೋಲಿಸಲು ಜೆಡಿಎಸ್ ಮುಖಂಡರು ನಾನಾ ತಂತ್ರ ಹೂಡಿದ್ದರು. ಅದರಲ್ಲಿ ಸುಮಲತಾ ಹೆಸರಿನ ಮೂವರನ್ನು ಕಣಕ್ಕೆ ಇಳಿಸಿದ್ದು ಒಂದು. ಅಲ್ಲದೇ ಅವರ ಕ್ರಮಸಂಖ್ಯೆ ಸುಮಲತಾ ಅಂಬರೀಷ್ ಅಕ್ಕಪಕ್ಕದಲ್ಲಿ ಬರುವಂತೆ ನೋಡಿಕೊಂಡಿದ್ದರು ಎಂದೇ ಆರೋಪಿಸಲಾಗಿತ್ತು. ಸುಮಲತಾ ಹೆಸರಿನ ಮೂವರು ಒಟ್ಟು 20,563 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 19ನೇ ಕ್ರಮಸಂಖ್ಯೆಯ ಸುಮಲತಾ 8,092 ಮತ, 21ನೇ ಕ್ರಮ ಸಂಖ್ಯೆಯ ಎಂ.ಸುಮಲತಾ 8,542, 22ನೇ ಕ್ರಮ ಸಂಖ್ಯೆಯ ಸುಮಲತಾ 3,119 ಮತಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಶಶಿಕುಮಾರ್ 18,323 ಮತ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ. ನೋಟ (ಮೇಲಿನವರು ಯಾರೂ ಅಲ್ಲ) 3,526 ಬಿದ್ದಿವೆ.

ಫಲ ನೀಡದ ಅನಿತಾ ಕುಮಾರಸ್ವಾಮಿ ವ್ರತ
ಮೈತ್ರಿ ಅಭ್ಯರ್ಥಿ ಕೆ.ನಿಖಿಲ್ ಅವರ ತಾಯಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮದ್ದೂರಿನ ಐತಿಹಾಸಿಕ ಹೊಳೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಐದು ವಾರಗಳ ವ್ರತ ಕೈಗೊಂಡಿದ್ದರು. ಪ್ರತಿ ಮಂಗಳವಾರದಂದು ದೇವಾಲಯಕ್ಕೆ ಭೇಟಿ ನೀಡಿ ಒಂದೂಕಾಲು ರೂಪಾಯಿ ಹರಕೆ ಸಲ್ಲಿಸಿದ್ದರು. ಆದರೆ, ಅವರ ವ್ರತ ಪುತ್ರನನ್ನು ಗೆಲ್ಲಿಸುವಲ್ಲಿ ಸಫಲವಾಗಲಿಲ್ಲ.

‘ಕಾಂಗ್ರೆಸ್ ನಾಯಕರ ಬೆಂಬಲದಿಂದ ಗೆಲುವು’
ಮಂಡ್ಯ: ಕಾಂಗ್ರೆಸ್ ನಾಯಕರ ಸಂಪೂರ್ಣ ಬೆಂಬಲ ಇದ್ದ ಕಾರಣ ಸುಮಲತಾ ಅವರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಕಾರಣವಾಗಿದೆ ಎಂದು ಕೆಪಿಸಿಸಿ ಉಚ್ಚಾಟಿತ ಸದಸ್ಯ ಇಂಡುವಾಳು ಸಚ್ಚಿದಾನಂದ ಹೇಳಿದರು.

‘ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಜೊತೆ ಮೈತ್ರಿ ಸಾಧ್ಯವಿಲ್ಲ ಎಂಬ ಸಂದೇಶ ವನ್ನು ಜಿಲ್ಲೆಯ ಜನರು ನೀಡಿದ್ದಾರೆ. ರಾಜ್ಯ ಮುಖಂಡರು ಎಲ್ಲರನ್ನೂ ಉಚ್ಚಾಟನೆ ಮಾಡಿದ್ದರೆ ಇಡೀ ಪಕ್ಷದ ಮುಖಂಡರನ್ನು ಹೊರಹಾಕಿ ಕಾಂಗ್ರೆಸ್ ಕಚೇರಿಗೆ ಬೀಗ ಹಾಕಬೇಕಾಗಿತ್ತು. ಅಂಬರೀಷ್ ಸಾವಿನ ನಂತರ ಸುಮಲತಾ ಅವರನ್ನು ರಾಜಕಾರಣಕ್ಕೆ ತರುವುದು ನಮ್ಮ ಉದ್ದೇಶ ವಾಗಿತ್ತು. ಅದಕ್ಕಾಗಿ ಅವರ ಮನೆಗೆ ತೆರಳಿ ಒತ್ತಾಯಪೂರ್ವಕವಾಗಿ ಕರೆ ತಂದೆವು. ಆ ಪ್ರಯತ್ನಕ್ಕೆ ಫಲ ಸಿಕ್ಕಿದೆ’ ಎಂದರು.

ರೈತರ, ಸ್ವಾಭಿಮಾನದ ಗೆಲುವು: ರೈತಸಂಘ
ಕೆ.ಆರ್.ಪೇಟೆ: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಗೆಲುವು ಜಿಲ್ಲೆಯ ರೈತರ ಮತ್ತು ಸ್ವಾಭಿಮಾನದ ಗೆಲುವಾಗಿದೆ ಎಂದು ರೈತ ಸಂಘದ ತಾಲ್ಲೂಕು ಘಟಕವು ಬಣ್ಣಿಸಿದೆ.

ಜಿಲ್ಲೆಯ ರಾಜಕಾರಣದಲ್ಲಿ ಅನ್ಯ ಜಿಲ್ಲೆಯವರು ಪ್ರವೇಶ ಮಾಡುವುದನ್ನು ಒಪ್ಪುವುದಿಲ್ಲ ಎಂಬ ಸಂದೇಶವನ್ನು ಈ ಫಲಿತಾಂಶ ನೀಡಿದೆ. ಜೆಡಿಎಸ್ ನಾಯಕರಿಗೆ ಜಿಲ್ಲೆಯ ಜನರು ನೀಡಿರುವ ಉತ್ತರವಾಗಿದೆ ರೈತ ಸಂಘದತಾಲ್ಲೂಕು ಘಟಕದ ಅಧ್ಯಕ್ಷ ಮರುವಿನಹಳ್ಳಿ ಶಂಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ರೈತಸಂಘವು ಮೊದಲಿನಿಂದಲೂ ಸ್ವಾಭಿಮಾನದ ಪಾಠವನ್ನು ಜಿಲ್ಲೆಯ ಜನರಿಗೆ ಹೇಳುತ್ತಾ ಬಂದಿದೆ. ಹಾಗಾಗಿ ಎಂತಹ ಒತ್ತಡ, ಲಾಬಿ ಮಾಡಿದರೂ ಪಕ್ಷೇತರ ಅಭ್ಯರ್ಥಿಯನ್ನು ರೈತ ಸಂಘ ಬೆಂಬಲಿಸಿತ್ತು. ಇದಲ್ಲದೆ,ಜಿಲ್ಲೆಯಾದ್ಯಂತ ಜನರು ಸುಮಲತಾ ಅವರನ್ನು ಪಕ್ಷಭೇದ ಮರೆತು ಬೆಂಬಲಿಸಿದ್ದಾರೆ. ಹಾಗಾಗಿ ಇದು ಮಂಡ್ಯ ಜಿಲ್ಲೆಯ ಜನರ ಸ್ವಾಭಿಮಾನದ ಗೆಲುವಾಗಿದೆ. ರೈತಸಂಘವು ಜಿಲ್ಲೆಯ ಮತದಾರರು ಮತ್ತು ಸುಮಲತಾ ಅವರನ್ನು ಅಭಿನಂದಿಸುತ್ತದೆ ಎಂದು ಹೇಳಿದ್ದಾರೆ.

ದರ್ಶನ್, ಯಶ್ ಅಭಿಮಾನಿಗಳಿಂದ ಸಂಭ್ರಮಾಚರಣೆ
ಕೆ.ಆರ್.ಪೇಟೆ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿಜಯ ಮಾಲೆ ತೊಡುತಿದ್ದಂತೆ ಪಟ್ಟಣದಲ್ಲಿ ಅಂಬರೀಷ್, ದರ್ಶನ್ ಮತ್ತು ಯಶ್ ಅಭಿಮಾನಿಗಳು, ಕಾಂಗ್ರೆಸ್, ಬಿಜೆಪಿ ಮತ್ತು ರೈತಸಂಘದ ಕಾರ್ಯಕರ್ತರು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಪ್ರವಾಸಿ ಮಂದಿರ ವೃತ್ತ, ದುರ್ಗಾ ಭವನ್ ವೃತ್ತ, ಖಾಸಗಿ ಬಸ್ ನಿಲ್ದಾಣ, ಬೋರಲಿಂಗೇಗೌಡ ವೃತ್ತ, ಟೌನ್ ಕ್ಲಬ್ ವೃತ್ತ, ಸೇರಿದಂತೆ ಪಟ್ಟಣದ ವಿವಿಧೆಡೆ ನಿಷೇಧಾಜ್ಞೆ ನಡುವೆಯೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ತಾಲ್ಲೂಕಿನ ಹೋಬಳಿ ಕೇಂದ್ರಗಳಾದ ಬೂಕನಕೆರೆ, ಶೀಳನೆರೆ, ಸಂತೇಬಾಚಹಳ್ಳಿ, ಕಿಕ್ಕೇರಿ, ಅಕ್ಕಿಹೆಬ್ಬಾಳು, ಹಾಗೂ ಪಂಚಾಯಿತಿ ಕೇಂದ್ರಗಳಲ್ಲಿಯೂ ಅಭಿಮಾನಿಗಳು ವಿಜಯೋತ್ಸವ ಮಾಡಿದರು.

ಇದು ಜಿಲ್ಲೆಯ ಸ್ವಾಭಿಮಾನದ ಗೆಲುವಾಗಿದೆ. ನಿಖಿಲ್ ಗೆದ್ದೇ ಗೆಲ್ಲುದ್ದಾರೆ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದರು. ಅವರಿಗೆ ತಕ್ಕ ಪಾಠ ಕಲಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿದರು.

ಮಳೆಯ ಸಿಂಚನ: ಪಟ್ಟಣದಲ್ಲಿ ಗುರುವಾರ ಮಳೆಯ ಸಿಂಚನ ವಾಯಿತು. ಫಲಿತಾಂಶ ಹಾಗೂ ಬಿಸಿಲಿನ ಕಾವಿನಿಂದ ಕಂಗೆಟ್ಟಿದ್ದ ಮತದಾರರಿಗೆ ಮಳೆ ಕೊಂಚ ತಂಪೆರೆಯಿತು. ಮಳೆ ನಡುವೆಯೂ ವಿಜಯೋತ್ಸವ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.