ಮಂಡ್ಯ: ‘ರಾಜ್ಯದ ವಸತಿ ಶಾಲೆಗಳಲ್ಲಿಯೂ ಬಾಲ ಗರ್ಭಿಣಿಯರು ಪತ್ತೆಯಾಗುತ್ತಿರುವುದು ಆತಂಕಕಾಗಿ ಬೆಳವಣಿಗೆಯಾಗಿದ್ದು, ಹೆಣ್ಣು ಮಕ್ಕಳ ರಕ್ಷಣೆಗಾಗಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ‘ಕೇಂದ್ರ ಕಾರ್ಯಪಡೆ’ ರಚನೆ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.

ಈಚೆಗೆ ತುಮಕೂರು ಜಿಲ್ಲೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಬಾಲ ಗರ್ಭಿಣಿ ಪತ್ತೆಯಾದ ಪ್ರಕರಣವನ್ನು ಮುಖ್ಯಮಂತ್ರಿ ಬಹಳ ಗಂಭೀರವಾಗಿ ಪರಿಗಣಿಸಿದ್ದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಜೊತೆಗೆ ಕೇಂದ್ರ ಸರ್ಕಾರದ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್ಸಿಎಚ್) ಪೋರ್ಟಲ್ ದಾಖಲಾತಿಯಂತೆ ರಾಜ್ಯದಲ್ಲಿ 2023 ಜನವರಿಯಿಂದ ನವೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 28,657 ಬಾಲಗರ್ಭಿಣಿಯರು ಪತ್ತೆಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ಬಾಲ್ಯವಿವಾಹ, ಬಡತನ, ಸಾಂಸ್ಕೃತಿಕ ಭಿನ್ನತೆ, ವೈಯಕ್ತಿಕ ವರ್ತನೆ, ದುಶ್ಚಟ, ಲೈಂಗಿಕ ದೌರ್ಜನ್ಯವೇ ಬಾಲ ಗರ್ಭಿಣಿಯರು ಹೆಚ್ಚಾಗಲು ಕಾರಣ. ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಸಮರೋಪಾದಿಯಲ್ಲಿ ಪರಿಹಾರ ಕಂಡುಕೊಳ್ಳಲು ಕೇಂದ್ರ ಕಾರ್ಯಪಡೆಯ ಸದಸ್ಯರು ಕಾರ್ಯೋನ್ಮುಖರಾಗಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.

ವಸತಿ ಶಾಲೆಗಳಲ್ಲಿ, ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಬಾಲಗರ್ಭಿಣಿ ಸಮಸ್ಯೆ ಮರುಕಳಿಸಬಾರದು ಎಂದು ನಿರ್ದೇಶಿಸಿರುವ ಅವರು ಇಲಾಖೆಗಳು ಕೈಗೊಳ್ಳಬೇಕಾದ ಕಾರ್ಯಸೂಚಿ ರೂಪಿಸಿದ್ದಾರೆ. ಈ ಕುರಿತ ನಿರ್ದೇಶನಗಳ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧೀನದಲ್ಲಿ ಬರುವ ವಸತಿ ಶಾಲೆ, ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿನಿಯರ ಚಟುವಟಿಕೆಯ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ.

‘ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡುವ ಜೊತೆಗೆ ಸಂತ್ರಸ್ತರಿಗೆ ರಕ್ಷಣೆ ನೀಡಲು, ಅವರ ಮನೋಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಕಾರ್ಯಪಡೆ ರಚನೆ ಮಾಡಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಬಾಲ ಗರ್ಭಿಣಿ ವಿದ್ಯಾರ್ಥಿನಿಯಾಗಿರಲಿ, ಯಾರೇ ಆಗಿರಲಿ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ. ಜೊತೆಗೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಪಡೆ ರಚಿಸಲಾಗುವುದು.
–ಡಾ.ಜಿ.ಎನ್.ಶ್ರೀನಿವಾಸ್, ಯೋಜನಾ ನಿರ್ದೇಶಕರು, ಆರ್ಸಿಎಚ್

ಗರ್ಭಪಾತ ಔಷಧಿ ಮಾರಾಟ

ಗರ್ಭಪಾತಕ್ಕೆ ಅವಶ್ಯವಿರುವ ‘ಶೆಡ್ಯೂಲ್–ಎಚ್’ (ವರ್ಗದ) ಔಷಧಿಗಳು ಅನಧಿಕೃತವಾಗಿ ಮಾರಾಟವಾಗುತ್ತಿರುವುದು ಕೂಡ ಬಾಲಗರ್ಭಿಣಿ ಸಮಸ್ಯೆ ಹೆಚ್ಚಳಕ್ಕೆ ಕಾರಣ ಎಂಬ ಅಂಶವೂ ಮುಖ್ಯಮಂತ್ರಿ ಪತ್ರದಲ್ಲಿದೆ.

ವೈದ್ಯರ ಸಲಹಾ ಚೀಟಿ ಇಲ್ಲದೇ ಗರ್ಭಪಾತ ಔಷಧಿ ಮಾರುವ ಔಷಧಿ ಅಂಗಡಿ ಮಾಲೀಕರು ಹಾಗೂ ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕು. ಈ ಕುರಿತು ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂದೂ ಸೂಚಿಸಲಾಗಿದೆ.

ಸೂಚಿಸಿದ ಕ್ರಮಗಳೇನು?

* ವಿದ್ಯಾರ್ಥಿನಿಯರು ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಇರಬೇಕು, ಪ್ರತಿ ತಿಂಗಳು ಅವರ ಆರೋಗ್ಯ ತಪಾಸಣೆ ನಡೆಸಬೇಕು.

* ದೀರ್ಘಾವಧಿ ರಜೆ ಪಡೆದ ವಿದ್ಯಾರ್ಥಿನಿ ಮತ್ತೆ ವಸತಿನಿಲಯಕ್ಕೆ ಬಂದಾಗ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಅವರ ದೈಹಿಕ ಬೆಳವಣಿಗೆಗಳ ಕುರಿತು ಜಾಗೃತಿ ಮೂಡಿಸಬೇಕು.

* ಶಾಲೆಗೆ ಗೈರು ಹಾಜರಾದ ವಿದ್ಯಾರ್ಥಿನಿಯರ ಮಾಹಿತಿ ಪರಿಶೀಲಿಸಬೇಕು. ಈ ಎಲ್ಲಾ ವಿಷಯಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.