ಮೈಸೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದ್ದು, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿರುವ ಮೂರ್ತಿ ಆಯ್ಕೆಯಾಗಿದೆ ಎನ್ನಲಾಗುತ್ತಿದೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ‘ಎಕ್ಸ್’ನಲ್ಲಿ ಹರ್ಷ ಹಂಚಿಕೊಂಡಿರುವುದು ಹಾಗೂ ಶುಭಾಶಯ ಕೋರಿರುವುದು ಇದಕ್ಕೆ ಪುಷ್ಟಿ ನೀಡಿದೆ.

ಮೂವರು ಶಿಲ್ಪಿಗಳು ಸಿದ್ಧಪಡಿಸಿರುವ ಮೂರ್ತಿಗಳಲ್ಲಿ ಒಂದು ಆಯ್ಕೆಯಾಗಿದೆ. ಆದರೆ, ಯಾವ ಮೂರ್ತಿ ಆಯ್ಕೆಯಾಗಿದೆ ಎಂಬ ವಿಷಯವಾಗಿ ರಾಮಮಂದಿರ ಟ್ರಸ್ಟ್ನಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಅರುಣ್ ಸಿದ್ಧಪಡಿಸಿದ ಮೂರ್ತಿಯೇ ಆಯ್ಕೆಯಾಗಿದೆ ಎಂಬ ಸುದ್ದಿ ಹರಡಿದ್ದು ಮೈಸೂರಿಗರಲ್ಲಿ ಸಂಭ್ರಮ ಮನೆ ಮಾಡಿದೆ.

ಐದು ವರ್ಷದ ಬಾಲಕನ ಪ್ರತಿರೂಪದಂತೆ ಮೂರ್ತಿ ಸಿದ್ಧಪಡಿಸಲು ಮೂವರು ಶಿಲ್ಪಿಗಳಿಗೆ ಸೂಚಿಸಲಾಗಿತ್ತು. ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್. ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ತಮ್ಮ ಕೌಶಲದಲ್ಲಿ ಅರಳಿದ ಮೂರ್ತಿಗಳನ್ನು ಒಪ್ಪಿಸಿದ್ದಾರೆ. ಇದರಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆ ಆಗಿರುವುದು ಯಾವುದೆಂಬುದು ಕುತೂಹಲ ಮೂಡಿಸಿದೆ.

ಮೂರ್ತಿ ನಿರ್ಮಾಣಕ್ಕಾಗಿ ಎಚ್.ಡಿ. ಕೋಟೆ ತಾಲ್ಲೂಕು ಕೃಷ್ಣಶಿಲೆಯನ್ನು ಅರುಣ್ ಬಳಸಿದ್ದಾರೆ. ಮೂರ್ತಿಗೆ ಅಂತಿಮ ರೂಪ ನೀಡಲು 6 ತಿಂಗಳು ತೆಗೆದುಕೊಂಡಿದ್ದಾರೆ. ಅದು 8 ಅಡಿ ಎತ್ತರ, ಮೂರೂವರೆ ಅಡಿ ಅಗಲ ಇದೆ. ಪಾದದಿಂದ ಹಣೆವರೆಗೆ 51 ಇಂಚು ಎತ್ತರ ಇದ್ದರೆ, ಅಲ್ಲಿಂದಾಚೆಗೆ ಪ್ರಭಾವಳಿಯ ಎತ್ತರ ಸೇರಿದೆ. ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ಐದು ವರ್ಷದ ಮಗುವಿನಂತೆ ಕಾಣುವ ಭಗವಾನ್ ರಾಮನ ಮೂರ್ತಿ ಇದಾಗಿದೆ ಎನ್ನುತ್ತಾರೆ ಅವರು.

ಕೇದಾರನಾಥದ ಶಂಕರಾಚಾರ್ಯರ ಪ್ರತಿಮೆ, ಸುಭಾಷ್ ಚಂದ್ರ ಬೋಸರ ಪ್ರತಿಮೆಗಳನ್ನು ಅವರು ಮಾಡಿದ್ದರು. ಇದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಗಮನಕ್ಕೆ ಬಂದಿತ್ತು. ಅವರು ಶಿಲ್ಪಿಯನ್ನು ಭೇಟಿಯಾಗಿ ಅಭಿನಂದನೆಯನ್ನೂ ಸಲ್ಲಿಸಿದ್ದರು.

ಅಯೋಧ್ಯೆಯ ರಾಮಲಲ್ಲಾ ಮೂರ್ತಿ ತಯಾರಿಕೆಗೆ ಪ್ರಸ್ತಾವ ಸಲ್ಲಿಕೆಗೆ ಸಿಕ್ಕಿದ್ದ ಅವಕಾಶವನ್ನು ಅರುಣ್ ಬಳಸಿಕೊಂಡಿದ್ದರು. ಅವರು ನೀಡಿದ್ದ ವಿವರಣೆ ಸಮಿತಿಗೆ ಇಷ್ಟವಾಗಿತ್ತು.

‘5 ವರ್ಷದ ಬಾಲಕನ ಶರೀರ ರಚನೆ, ದೇಹ ಸ್ವರೂಪ ಹಾಗೂ ರಾಮಚಂದ್ರನ ವರ್ಚಸ್ಸು ಹೊಂದಿದ ಮುಖವನ್ನು ಮನದುಂಬಿಕೊಂಡು ಕೆತ್ತನೆ ಶುರು ಮಾಡಿದ್ದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪಡೆದ 2000 ಗಣ್ಯರ ಪೈಕಿ ಅರುಣ್ ಒಬ್ಬರಾಗಿದ್ದಾರೆ. ಅವರ ತಂದೆ ಯೋಗಿರಾಜ್ ಕೂಡ ಶಿಲ್ಪಿ. ಅಜ್ಜ ಬಸವಣ್ಣ ಶಿಲ್ಪಿ. ತಲೆಮಾರುಗಳಿಂದ ಶಿಲ್ಪ ಕೆತ್ತನೆ ಕಾರ್ಯದಲ್ಲಿ ಈ ಕುಟುಂಬ ತೊಡಗಿದೆ.

ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಆದಿ ಶಂಕರಾಚಾರ್ಯರ ಪ್ರತಿಮೆ ಕೆತ್ತಿದ ನಂತರ ಅವರಿಗೆ ದೊಡ್ಡ ಹೆಸರು ದೊರೆಯಿತು.

ಮೈಸೂರಿನ ಬ್ರಹ್ಮಶ್ರೀ ಕಶ್ಯಪ ಶಿಲ್ಪಕಲಾ ನಿಕೇತನದ ಅರುಣ್, 14 ವರ್ಷಗಳಿಂದ ಶಿಲ್ಪ ಕೆತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರು ಶಿಲ್ಪ ಕಲಾಕೃತಿಯ 5ನೇ ತಲೆಮಾರಿನವರು. ಅಪ್ಪ ಯೋಗಿರಾಜ್ ಕೊಡುತ್ತಿದ್ದ ಉಳಿಪೆಟ್ಟು ಬಾಲ್ಯದ ಅರುಣ್ ಅವರನ್ನು ಈ ವೃತ್ತಿಯತ್ತ ಆಕರ್ಷಿಸಿತು.

ಅಂಬೇಡ್ಕರ್, ರಾಮಕೃಷ್ಣ ಪರಮಹಂಸ, ವಿಶ್ವೇಶ್ವರಯ್ಯ, ಜಯಚಾಮರಾಜ ಒಡೆಯರ್, ಶಿವಕುಮಾರ ಸ್ವಾಮೀಜಿ, ಹನುಮಂತ ಸೇರಿದಂತೆ ಹಲವು ಪ್ರತಿಮೆ ನಿರ್ಮಿಸಿದ್ದಾರೆ.

ಓದಿದ್ದು ಎಂಬಿಎ. ಆ ವಿದ್ಯಾರ್ಹತೆಯ ಆಧಾರದ ಮೇಲೆ ಖಾಸಗಿ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಆದರೆ, ಶಿಲ್ಪ ಕೆತ್ತನೆಯ ಸೆಳೆತಕ್ಕೆ ಮಾರು ಹೋದರು. ಕಲ್ಲಿಗೆ ಮೂರ್ತರೂಪ ಕೊಡುತ್ತಾ ಬದುಕು ‘ಕಟ್ಟಿ’ಕೊಂಡರು. ಅಗ್ರಹಾರದ ಗನ್ಹೌಸ್ ಪಕ್ಕದಲ್ಲಿ ಅರುಣ್ ಅವರ ಮನೆಯ ಆವರಣದಲ್ಲಿರುವ ‘ಕಾರ್ಯಾಗಾರ’ದಿಂದ ಸದಾ ಸದ್ದು ಬರುತ್ತಲೇ ಇರುತ್ತದೆ. 38 ವರ್ಷದ ಅರುಣ್ ಕಲಾಕೃತಿ ಕ್ಲೇ ಮಾಡೆಲಿಂಗ್, ಚಿತ್ರಕಲೆಯಲ್ಲೂ ನಿಪುಣರು. ವಾಲಿಬಾಲ್ ಕ್ರೀಡೆಯಲ್ಲೂ ಮಿಂಚಿದ್ದಾರೆ. ಹಲವು ಪ್ರಶಸ್ತಿಗಳು ಅವರ ಮುಡಿಗೇರಿವೆ.

‘ಶ್ರೀರಾಮ-ಹನುಮರ ಬಾಂಧವ್ಯಕ್ಕೆ ಕರುನಾಡ ನಂಟಿದೆ. ಇದೀಗ ರಾಮನೂರಿನ ಗುಡಿಯನು ಮೈಸೂರಿನ ಬಾಲರಾಮನು ಬೆಳಗುವನು’ ಎಂದು ವಿಜಯೇಂದ್ರ ‘ಎಕ್ಸ್’ ಮಾಡಿದ್ದಾರೆ.

‘ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು, ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ’ ಎಂದು ಆರ್. ಅಶೋಕ್ ಸಂತಸ ಹಂಚಿಕೊಂಡಿದ್ದಾರೆ.

ಪ್ರತಿಕ್ರಿಯೆಗೆ ಅರುಣ್ ದೂರವಾಣಿ ಕರೆ ಸ್ವೀಕರಿಸಲಿಲ್ಲ.

ಕುಟುಂಬದವರಲ್ಲಿ ಸಂಭ್ರಮ

‘ಅರುಣ್ ಸಿದ್ಧಪಡಿಸಿದ ಮೂರ್ತಿ ಆಯ್ಕೆಯಾಗಿದೆ’ ಎಂಬ ಸುದ್ದಿ ಹರಿದಾಡಿದ್ದು ಇಲ್ಲಿನ ಅವರ ಪೋಷಕರು ಹಾಗೂ ಕುಟುಂಬದವರಲ್ಲಿ ಸಂತಸ–ಸಂಭ್ರಮ ತಂದಿದೆ. ತಾಯಿ ಸರಸ್ವತಿ ಪತ್ನಿ ವಿಜೇತಾ ಎಂ.ರಾವ್ ಮಗಳು ಸಾನ್ವಿ ಸಹೋದರ ಸೂರ್ಯಪ್ರಕಾಶ್ ಸಹೋದರಿ ಚೇತನಾ ಸೋದರ ಮಾವ ಸುನೀಲ್ ಅವರನ್ನು ಬಂಧುಗಳು ಅಭಿನಂದಿಸಿದರು. ‘ಆಯ್ಕೆಯಾಗಿರುವ ಬಗ್ಗೆ ಪತಿ ಈವರೆಗೆ ನಮಗೆ ಖಚಿತಪಡಿಸಿಲ್ಲ’ ಎಂದು ವಿಜೇತಾ ಹೇಳಿದರು. ‘ಒಬ್ಬರ ಪ್ರತಿಮೆಯನ್ನು ಇನ್ನೊಬ್ಬರು ನೋಡುವಂತಿಲ್ಲ ಎಂದು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ’ ಎಂದರು. ‘ಶಿಲ್ಪಕಲೆಯಲ್ಲಿ ಅವರ ಭಕ್ತಿ ಮತ್ತು ಬದ್ಧತೆ ಅಪಾರ. ಈ ಕೆಲಸವನ್ನು ಅವರು ಭಕ್ತಿ ಮತ್ತು ನಿಸ್ವಾರ್ಥದಿಂದ ಮಾಡುತ್ತಾರೆ. ಸಿಗುತ್ತಿರುವ ಮನ್ನಣೆ ಮತ್ತು ಸಾಧನೆಗಳು ದೇವರ ಕೊಡುಗೆ’ ಎಂದು ವಿಜೇತಾ ಪ್ರತಿಕ್ರಿಯಿಸಿದರು. ನವದೆಹಲಿಯಲ್ಲಿ ಸ್ಥಾಪಿಸಲು ನಿರ್ಧರಿಸಲಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸಿದ್ಧಪಡಿಸುವುದಕ್ಕಾಗಿ ಅರುಣ್ ಅವರಿಗೆ ಕೇಂದ್ರ ಸರ್ಕಾರದಿಂದ ಕಾರ್ಯಾದೇಶ ಸಿಕ್ಕಿದೆ ಎಂದು ತಿಳಿದುಬಂದಿದೆ. ಅಂಬೇಡ್ಕರ್ ಅವರ 133ನೇ ಜನ್ಮದಿನದ ಅಂಗವಾಗಿ ಏ.14ರಂದು ಪ್ರತಿಮೆ ಅನಾವರಣಕ್ಕೆ ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಪ್ರತಿಷ್ಠಾಪನೆಯ ದಿನವೇ ಗೊತ್ತಾಗಲಿದೆ’

‘ನನ್ನ ಕೆಲಸ ನಾನು ಮಾಡಿದ್ದೇನೆ. ಮೂರ್ತಿಯು ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆಯೇ ಇಲ್ಲವೇ ಎನ್ನುವುದು ಜ.22ರಂದೇ ಗೊತ್ತಾಗಲಿದೆ ಎಲ್ಲವೂ ದೇವರ ಕೃಪೆ ಎಂದು ಮಗ ಹೇಳಿದ್ದಾನೆ’ ಎಂದು ತಾಯಿ ಸರಸ್ವತಿ ಪ್ರತಿಕ್ರಿಯಿಸಿದರು. ‘ರಾಜ್ಯಕ್ಕೆ ಹೆಮ್ಮೆ ಪಡುವಂತೆ ಮಾಡಬೇಕು ಎಂದು ಚಿಕ್ಕಂದಿನಿಂದಲೂ ಹೇಳುತ್ತಿದ್ದ. ತಂದೆಯೇ ಅವನ ಗುರು. ಮಗನ ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯೂ ಮೆಚ್ಚುಗೆ ಸೂಚಿಸಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.