ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾಕ್ಕೆ ಪ್ರತಾಪ ಸಿಂಹ ವಂಚನೆ: ಅಧ್ಯಕ್ಷ ಮರಿಗೌಡ ಆರೋಪ

Published 23 ಜುಲೈ 2024, 17:13 IST
Last Updated 23 ಜುಲೈ 2024, 17:13 IST
ಅಕ್ಷರ ಗಾತ್ರ

ಮೈಸೂರು: ‘ಎರಡು ಬಾರಿ ಮೈಸೂರು–ಕೊಡಗು ಸಂಸದರಾಗಿದ್ದ ಪ್ರತಾಪ ಸಿಂಹ ತಮ್ಮ ಪತ್ನಿ ಹೆಸರಿನಲ್ಲಿ ಮುಡಾದಿಂದ ಪಡೆದ ನಿವೇಶನದಲ್ಲಿ ನಿಯಮಾನುಸಾರ ಮನೆ ನಿರ್ಮಿಸದೇ, ಮುಡಾಕ್ಕೆ ಶೇ 25ರಷ್ಟು ದಂಡ ಶುಲ್ಕವನ್ನೂ ಪಾವತಿಸದೇ ವಂಚಿಸಿದ್ದಾರೆ’ ಎಂದು ಮುಡಾ ಅಧ್ಯಕ್ಷ ಕೆ. ಮರಿಗೌಡ ಆರೋಪಿಸಿದ್ದಾರೆ.

‘ಪ್ರತಾಪ ಸಿಂಹರ ಪತ್ನಿ ಜೆ.ಎಸ್. ಅರ್ಪಿತಾ ಅವರಿಗೆ ಸರ್ಕಾರದ ‘ಜಿ’ ಪ್ರವರ್ಗದಡಿ ವಿಜಯನಗರ ನಾಲ್ಕನೇ ಹಂತದಲ್ಲಿ 40X60 ಅಳತೆಯ ನಿವೇಶನ ಮಂಜೂರಾಗಿತ್ತು. ಅಲ್ಲಿ ಮನೆ ನಿರ್ಮಿಸಲು 2021ರಲ್ಲಿ ನಕ್ಷೆ ಮಂಜೂರಾತಿ ಪಡೆದು ನಿವೇಶನದಲ್ಲಿ ಕೇವಲ ಒಂದು ಜಂಕ್‌ ಶೀಟಿನ ಕೋಣೆಯನ್ನು ಮಾತ್ರ ಕಟ್ಟಿದ್ದರು. ನಂತರ ಅದನ್ನೇ ಮನೆ ಎಂದು ಬಿಂಬಿಸಿ ಪ್ರಾಧಿಕಾರದಿಂದ 2021ರ ಅಕ್ಟೋಬರ್‌ನಲ್ಲಿ ಕಟ್ಟಡ ಪೂರ್ಣಗೊಂಡ ವರದಿಯನ್ನೂ ಪಡೆದಿದ್ದಾರೆ. ಆ ಕಟ್ಟಡಕ್ಕೆ ಮನೆ ಕಂದಾಯವನ್ನು ನಿಗದಿಪಡಿಸಿ, ಅದೇ ವರ್ಷ ನವೆಂಬರ್‌ನಲ್ಲಿ ಕ್ರಯಪತ್ರ ಪಡೆದಿದ್ದಾರೆ. ಆ ನಂತರ ದೂರು ದಾಖಲಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ಪೂರ್ಣಗೊಂಡ ವರದಿಯನ್ನು ರದ್ದುಪಡಿಸಿದ್ದಾರೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಸರ್ಕಾರದಿಂದ ಪಡೆದ ನಿವೇಶನದಲ್ಲಿ ಮನೆ ನಿರ್ಮಿಸದಿದ್ದರೆ, ನಿವೇಶನದಾರರು ನಿವೇಶನದ ಮಾರುಕಟ್ಟೆ ಮೌಲ್ಯದ ಶೇ 25ರಷ್ಟನ್ನು ದಂಡದ ರೂಪದಲ್ಲಿ ಪಾವತಿಸಬೇಕು. ಅದನ್ನು ತಪ್ಪಿಸಿಕೊಳ್ಳಲು ವಾಮ ಮಾರ್ಗ ಅನುಸರಿಸಿ ನಿವೇಶನಕ್ಕೆ ಕ್ರಯಪತ್ರ ಪಡೆದಿರುವ ಪ್ರತಾಪ ಸಿಂಹ, ಮುಡಾದಿಂದ ನ್ಯಾಯಯುತವಾಗಿ ನಿವೇಶನ ಪಡೆದಿರುವ ಸಿದ್ದರಾಮಯ್ಯ ಕುಟುಂಬದವರನ್ನು ಟೀಕಿಸುವುದು ಎಷ್ಟರಮಟ್ಟಿಗೆ ಸರಿ?’ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT