ಸಂಘಟನೆಗಳ ಮಾತಿಗೆ ಬೆಲೆ ಇಲ್ಲ
‘ಮಾಲ್‌ಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ ಕನ್ನಡದ ಅಕ್ಷರಗಳೇ ಕಾಣದಾಗಿವೆ. ನೋಟಿಸ್ ನೀಡಿ ಕನ್ನಡ ಫಲಕಗಳನ್ನು ಹಾಕುವಂತೆ ಸೂಚಿಸಬೇಕು’ ಎಂದು ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ‘ಫಲಕಗಳಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಕೊಟ್ಟು ದೊಡ್ಡದಾಗಿ ಹಾಗೂ ಹೆಚ್ಚು ಭಾಗದಲ್ಲಿ ಬಳಸಿ ನಂತರ ಇಂಗ್ಲಿಷ್ ಬಳಸಿದರೆ ಆಕ್ಷೇಪವಿಲ್ಲ. ಆದರೆ ಉದ್ಯಮಿಗಳು ಮತ್ತು ಅಧಿಕಾರಿಗಳು ಈ ನೆಲದ ಭಾಷೆಗೆ ಪ್ರಾಧಾನ್ಯ ಕೊಡುವ ಸೌಜನ್ಯ ಮತ್ತು ಕರ್ತವ್ಯವನ್ನು ತೋರಿಸದಿದ್ದರೆ ಅಂಥವರಿಗೆ ನಾವು ಔದಾರ್ಯ ತೋರಬೇಕಾಗಿಲ್ಲ. ನಮ್ಮ ಸಹನೆಯನ್ನು ದೌರ್ಬಲ್ಯ ಎಂದು ಭಾವಿಸಬಾರದು’ ಎಂದು ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ.ರ. ಸುದರ್ಶನ ಹೇಳಿದರು.