ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎಚ್‌. ವಿಜಯಶಂಕರ್‌ಗೆ ಒಲಿದ ಸ್ಥಾನ: ಅಂದು ಸಿಮೆಂಟ್ ವ್ಯಾಪಾರಿ, ಈಗ ರಾಜ್ಯಪಾಲ

Published : 28 ಜುಲೈ 2024, 7:04 IST
Last Updated : 28 ಜುಲೈ 2024, 7:04 IST
ಫಾಲೋ ಮಾಡಿ
Comments

ಮೈಸೂರು: ಮೇಘಾಲಯ ರಾಜ್ಯಪಾಲರಾಗಿ ನೇಮಕಗೊಂಡಿರುವ ಸಿ.ಎಚ್‌. ವಿಜಯಶಂಕರ್‌ ಅವರು ಒಂದು ಕಾಲದಲ್ಲಿ ಸಿಮೆಂಟ್ ವ್ಯಾಪಾರ ಮಾಡುತ್ತಿದ್ದವರು. ಹಿಂದುಳಿದ ವರ್ಗವಾದ ಕುರುಬ ಸಮಾಜಕ್ಕೆ ಸೇರಿದ ಈ ನಾಯಕ ರಾಜಕೀಯದಲ್ಲಿ ಸಾಕಷ್ಟು ಏಳು–ಬೀಳುಗಳನ್ನು ಕಂಡವರು.

ಅವರ ಪೂರ್ಣ ಹೆಸರು ಚಂದ್ರಶೇಖರ ಹೊನ್ನಭಂಡಾರ ವಿಜಯಶಂಕರ್‌. ಸರಳ, ಸಜ್ಜನಿಕೆ ಹಾಗೂ ಸೌಮ್ಯ ಸ್ವಭಾವದಿಂದಲೇ ರಾಜಕಾರಣ ಮಾಡಿದ 67 ವರ್ಷ ವಯಸ್ಸಿನ ಅವರು, ಒಂದು ಬಾರಿ ಶಾಸಕ, ಎರಡು ಬಾರಿ ಸಂಸದ ಹಾಗೂ ಒಮ್ಮೆ ವಿಧಾನಪರಿಷತ್‌ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದಾರೆ. ಸಚಿವರೂ ಆಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಮೂರು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌ನಿಂದ ರಾಜಕಾರಣಕ್ಕೆ ಕಾಲಿಟ್ಟ ಅವರು, ಬಳಿಕ ಬಿಜೆಪಿ ಸೇರಿದ್ದರು. ನಂತರ ಕಾಂಗ್ರೆಸ್‌ಗೆ ಮರಳಿದ್ದರು. ಬಳಿಕ ಬಿಜೆಪಿಗೆ ವಾಪಸಾದರು. ಚುನಾವಣಾ ರಾಜಕಾರಣ ಆರಂಭಿಸಿದ್ದು ಬಿಜೆಪಿಯಿಂದ.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿ (2010ರಲ್ಲಿ), ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಸಣ್ಣ ಕೈಗಾರಿಕೆ ಮತ್ತು ಅರಣ್ಯ ಖಾತೆಯನ್ನು ನೀಡಿದ್ದರು. ಮೊದಲು ಚಾಮರಾಜನಗರ ಹಾಗೂ ಬಳಿಕ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನೂ ಕೊಟ್ಟಿದ್ದರು.

ದೇವೇಗೌಡರ ವಿರುದ್ಧ ಸ್ಪರ್ಧೆ:

ವಿಜಯಶಂಕರ್‌ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಎದುರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ, ‘ಇದೇ ನನ್ನ ಕೊನೆಯ ಚುನಾವಣೆ’ ಎಂದು ಘೋಷಿಸಿದ್ದ ಅವರಿಗೆ ಠೇವಣಿ ಉಳಿಸಿಕೊಳ್ಳುವುದೂ ಸಾಧ್ಯವಾಗಲಿಲ್ಲ. ಇದೀಗ ಅವರಿಗೆ ರಾಜ್ಯಪಾಲರ ಸ್ಥಾನವೇ ಒಲಿದು ಬಂದಿದೆ. ಸಾರ್ವಜನಿಕವಾಗಿ ಶ್ವೇತವಸ್ತ್ರಧಾರಿಯಾಗಿಯೇ ಕಾಣಿಸಿಕೊಳ್ಳುವುದು ಅವರ ವಿಶೇಷಗಳಲ್ಲೊಂದು.

ಮಾಕನೂರಿನಿಂದ ಹುಣಸೂರಿಗೆ:

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರಿನಲ್ಲಿ 1956ರ ಅ.21ರಂದು ಜನಿಸಿದ ಅವರು, ಬ್ಯಾಡಗಿಯಲ್ಲಿ ಶಿಕ್ಷಣ ಪಡೆದರು. ಬಿ.ಎಸ್ಸಿ. ಪದವೀಧರರರಾದ ಅವರ ರಾಜಕೀಯ ಜೀವನದ ಪುಟಗಳು ತೆರೆದುಕೊಂಡಿದ್ದು ಮೈಸೂರು ಜಿಲ್ಲೆಗೆ ಬಂದಾಗಲೇ. ಹುಣಸೂರಿನಲ್ಲಿ ಎಸ್‌ಐ ಆಗಿದ್ದ ತಮ್ಮ ಬಾವ ನಿಧನರಾದಾಗ ಅಕ್ಕನ ಕುಟುಂಬಕ್ಕೆ ನೆರವಾಗಲು ಬಂದು ನೆಲೆಯೂರಿದವರು. ಹುಣಸೂರಿನಲ್ಲಿ ಕುಟುಂಬದವರು ನಡೆಸುತ್ತಿದ್ದ ಸಿಮೆಂಟ್‌ ಅಂಗಡಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದರು. ಅದರಿಂದ ದೊರೆತ ಜನರ ಒಡನಾಟದಿಂದಾಗಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಸಕ್ರಿಯರಾಗಿದ್ದರು. ಬಳಿಕ ಬಿಜೆಪಿ ಸೇರ್ಪಡೆಯಾದರು.

1989ರಲ್ಲಿ ಹುಣಸೂರು ಕ್ಷೇತ್ರದಿಂದ ಗೆದ್ದಿದ್ದ ಚಂದ್ರಪ್ರಭಾ ಅರಸು ಅವರು 1991ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದರು. ಬಳಿಕ ಹುಣಸೂರು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ವಿಜಯಶಂಕರ್‌ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಎಸ್.ಚಿಕ್ಕಮಾದು ಅವರ ಎದುರು ಸೋತರು. ಆದರೆ, ನಾಯಕನಾಗಿ ಬೆಳೆಯುವ ನಿಟ್ಟಿನಲ್ಲಿ ಹೆಜ್ಜೆಗುರುತು ಮೂಡಿಸಿದ್ದರು. 1994ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದ ಅವರು ಗೆಲುವು ಸಾಧಿಸಿದ್ದರು.

1998ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಇಲ್ಲಿ ಮೊದಲಿಗೆ ‘ಕಮಲ’ ಅರಳಿಸುವಲ್ಲಿ ಯಶಸ್ಸು ಗಳಿಸಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್‌ ಸೇರ್ಪಡೆಯಾದರು. ಹೀಗಾಗಿ, 2019ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲನುಭವಿಸಿದರು. ಬಳಿಕ ರಾಜ್ಯ ರಾಜಕಾರಣದಲ್ಲಿ ಇರಲೆಂದು ಬಯಸಿ, ವರ್ಷದ ಬಳಿಕ ಬಿಜೆಪಿಗೆ ಮರು ಸೇರ್ಪಡೆಯಾದರು.

ಅವರು, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಬಿ.ಎಸ್. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಸಂಘಟನೆಗೆ ಸಾಕಷ್ಟು ಶ್ರಮಿಸಿದ ಅವರಿಗೆ ಪಕ್ಷ ಮಣೆ ಹಾಕಿದೆ.

ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಬಿ.ರಾಚಯ್ಯ ಅವರ ಬಳಿಕ ಸಿ.ಎಚ್‌. ವಿಜಯಶಂಕರ್‌ ಅವರಿಗೆ ರಾಜ್ಯಪಾಲರಾಗಲು ಅವಕಾಶ ದೊರೆತಿದೆ. ಅವರಿಗೆ ಸ್ಥಾನಮಾನ ನೀಡುವ ಮೂಲಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಾದ ಮೈಸೂರು ಭಾಗದಲ್ಲಿ ಹಿಂದುಳಿದ ವರ್ಗದವರ ‘ಪ್ರೀತಿ’ ಗಳಿಸುವ ಪ್ರಯತ್ನವನ್ನು ಬಿಜೆಪಿ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT