ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಸಿ.ಎಂ. ಪತ್ನಿಗೆ ನಿವೇಶನ: ‘ಸುಂದರಮ್ಮ’ ಪ್ರಕರಣವೇ ಕಾರಣ

‘ಪ್ರಜಾವಾಣಿ’ಗೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಮಜಾಯಿಷಿ
Published : 8 ಜುಲೈ 2024, 21:32 IST
Last Updated : 8 ಜುಲೈ 2024, 21:32 IST
ಫಾಲೋ ಮಾಡಿ
Comments

ಮೈಸೂರು: ‘ಮೈಸೂರಿನ ಶ್ರೀರಾಂಪುರದ ಸುಂದರಮ್ಮ ಹಾಗೂ ಮುಡಾ ವಿರುದ್ಧದ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ತೀರ್ಪು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ನೀಡಲಾಯಿತು’ ಎಂದು ನಗರಾಭಿವೃದ್ಧಿ ಇಲಾಖೆಯ, ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶ್ರೀರಾಂಪುರದ ಸರ್ವೆ ಸಂಖ್ಯೆ 128/1 ರಲ್ಲಿ 2 ಎಕರೆ 17 ಗುಂಟೆ ಜಮೀನನ್ನು ಮುಡಾ ಭೂಸ್ವಾಧೀನಪಡಿಸಿಕೊಳ್ಳದೆಯೇ ಬಡಾವಣೆ ನಿರ್ಮಿಸಲು ಹೊರಟಿತ್ತು. ಅದನ್ನು ಪ್ರಶ್ನಿಸಿ ಭೂ ಮಾಲೀಕರಾದ ಸುಂದರಮ್ಮ ನ್ಯಾಯಾಲಯದ ಮೆಟ್ಟಿಲು ಏರಿದ್ದು, ಜಮೀನು ಡಿನೋಟಿಫೈಗೆ ಮನವಿ ಮಾಡಿದ್ದರು. ಆದರೆ ಮುಡಾ ಒಪ್ಪಿಗೆ ಸೂಚಿಸಲಿಲ್ಲ.

‘ಭೂಮಾಲೀಕರ ಕೋರಿಕೆಯನ್ನು ಪರಿಗಣಿಸುವಂತೆ ನ್ಯಾಯಾಲಯ ಸೂಚಿಸಿದ್ದು, ಅದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಲಿಲ್ಲ. ಕಡೆಗೆ ಅಧಿಕಾರಿಗಳ ತಲೆದಂಡದ ಮಟ್ಟಕ್ಕೆ ಪ್ರಕರಣ ಹೋಯಿತು. ಈಗಾಗಲೇ ಅಭಿವೃದ್ಧಿಪಡಿಸಿದ್ದ 2.17 ಎಕರೆ ಜಮೀನನ್ನು ಮರಳಿ ಮಾಲೀಕರಿಗೆ ಹಸ್ತಾಂತರಿಸುವಂತೆ ನ್ಯಾಯಾಲಯವು 2020ರ ಜನವರಿಯಲ್ಲಿ ಆದೇಶಿಸಿತ್ತು’ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಪಾರ್ವತಿ ಅವರ ಪ್ರಕರಣವೂ ಅದೇ ರೀತಿಯದ್ದಾಗಿದ್ದು, ಇಡೀ ಜಮೀನನ್ನೇ ಬಿಟ್ಟುಕೊಡಬೇಕಾದ ಪರಿಸ್ಥಿತಿ ಬರಬಹುದು. ಅದರಿಂದ ಇನ್ನಷ್ಟು ಜನ ನ್ಯಾಯಾಲಯದ ಮೆಟ್ಟಿಲು ಏರಬಹುದು ಎಂಬ ಕಾರಣಕ್ಕೆ ಅಧಿಕಾರಿಗಳ ತಂಡವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಬದಲಿ ನಿವೇಶನಕ್ಕೆ ಒಪ್ಪಿಸಿತು’ ಎಂದು ಅಧಿಕಾರಿ ಸಮಜಾಯಿಷಿ ನೀಡಿದ್ದಾರೆ.

ರಾಜ್ಯಪಾಲ, ಮುಖ್ಯ ನ್ಯಾಯಮೂರ್ತಿಗೆ ಶ್ರೀವತ್ಸ ಮನವಿ

ಮುಡಾದಲ್ಲಿನ ಅಕ್ರಮ ನಿವೇಶನಗಳ ಹಂಚಿಕೆ ವಿರುದ್ಧ ಕಾನೂನು ಕ್ರಮಕ್ಕೆ ಕೋರಿ ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ರಾಜ್ಯಪಾಲರು ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ. ‘ ನಿವೇಶನಗಳ ಅಕ್ರಮ ಹಂಚಿಕೆ ಮೂಲಕ ಮುಡಾ ಹಾಗೂ ರಾಜ್ಯ ಸರ್ಕಾರಕ್ಕೆ ಸಾಕಷ್ಟು ನಷ್ಟ ಉಂಟು ಮಾಡಲಾಗಿದೆ. ಈ ಸಮಗ್ರ ತನಿಖೆ ನಡೆಸಿ ನ್ಯಾಯ ಎತ್ತಿ ಹಿಡಿಯಬೇಕು. ಈ ಬಗ್ಗೆ ಅಗತ್ಯ ದಾಖಲೆಗಳನ್ನು ಒದಗಿಸಲು ಕಾಲಾವಕಾಶ ನೀಡಬೇಕು’ ಎಂದು ಅವರು ಮನವಿಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT