ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ದಾಖಲೆಗಳೇ ಇಲ್ಲವಾಗುವ ‘ಮಾಯಾಜಾಲ’: ಮುಡಾ ತನಿಖಾ ಸಮಿತಿ ಮುಂದೆ ಬಯಲು

ನಿವೃತ್ತ ನ್ಯಾಯಮೂರ್ತಿ ಪಿ.ಎಸ್‌. ದೇಸಾಯಿ ಆಯೋಗಕ್ಕೆ ಹಲವು ಸವಾಲು
Published 15 ಜುಲೈ 2024, 19:28 IST
Last Updated 15 ಜುಲೈ 2024, 19:28 IST
ಅಕ್ಷರ ಗಾತ್ರ

ಮೈಸೂರು: ಹಲವು ಪ್ರಕರಣಗಳಿಗೆ ಸಂಬಂಧಿಸಿದ ಪ್ರಮುಖ ಕಡತಗಳೇ ನಾಪತ್ತೆಯಾಗಿರುವ ಸಂಗತಿ ಮುಡಾ ಅಕ್ರಮಗಳ ತನಿಖಾ ಸಮಿತಿ ಮುಂದೆ ಬಯಲಾಗಿದ್ದು, ಅದರ ಹಿಂದಿರುವ ‘ಮಾಯಾ ಜಾಲ’ವನ್ನು ಭೇದಿಸುವ ಸವಾಲು, ನಿವೃತ್ತ ನ್ಯಾಯಮೂರ್ತಿ ಪಿ.ಎಸ್‌. ದೇಸಾಯಿ ಅವರ ಏಕಸದಸ್ಯ ವಿಚಾರಣಾ ಆಯೋಗದ ಮುಂದಿದೆ.

ಮುಡಾದ ದಾಖಲೆಗಳ ವಿಭಾಗದಿಂದ ಕಡತಗಳು ನಾಪತ್ತೆಯಾಗಿರುವುದನ್ನು ವೆಂಕಟಾಚಲಪತಿ ನೇತೃತ್ವದ ಆಯೋಗ ಪತ್ತೆಹಚ್ಚಿದೆ. ಮುಡಾದಲ್ಲಿ ಕಡತಗಳ ನಿರ್ವಹಣೆಗೆಂದೇ ಪ್ರತ್ಯೇಕ ವಿಭಾಗವಿದ್ದು, ಕೆಲವರಿಗಷ್ಟೇ ಪ್ರವೇಶ. ಕಡತ ಹೊರಗೆ ಹೋಗಬೇಕಿದ್ದರೆ, ವಿಭಾಗದ ರಿಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಯಾವ ಸಮಯದಲ್ಲಿ, ಯಾರು, ಯಾವ ಕಡತವನ್ನು ತೆಗೆದುಕೊಂಡರೆಂಬ ವಿವರಗಳನ್ನು ದಾಖಲಿಸಬೇಕು. ಆದರೆ, ವ್ಯವಸ್ಥಿತವಾಗಿ ದಾಖಲಿಸಿಲ್ಲ. ಅನೇಕ ಕಡತಗಳು ಆಯುಕ್ತರು ಹಾಗೂ ಸರ್ಕಾರದ ಮಟ್ಟದಲ್ಲೇ ಉಳಿದಿವೆ ಎಂದು ಷರಾ ಬರೆಯಲಾಗಿದೆ ಎಂಬುದನ್ನು ಸಮಿತಿ ಗುರುತಿಸಿದೆ.

ಅನೇಕ ಕಡತಗಳ ಹಾಳೆಗಳನ್ನು ಹರಿಯಲಾಗಿದೆ. ಆದೇಶಗಳಿರುವ ಪುಟಗಳನ್ನೇ ಕಿತ್ತೊಗೆದು, ಬೇಕಾದಂತೆ ದಾಖಲೆಗಳನ್ನು ತಿದ್ದಿರುವ ಆರೋಪಗಳಿವೆ. ಆರೋಪ ಕೇಳಿಬಂದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಳೆಯ ದಾಖಲೆಗಳೇ ನಾಪತ್ತೆಯಾಗಿವೆ. ಏಕಸದಸ್ಯ ವಿಚಾರಣಾ ಆಯೋಗವು ಈ ಸಂಗತಿಗಳನ್ನು ಬಯಲಿಗೆ ಎಳೆಯಬೇಕಿದೆ.

ಅಧಿಕಾರಿಗಳು ಬೆಂಗಳೂರಿಗೆ:
ಹೊಸ ಆದೇಶದ ಹಿನ್ನೆಲೆಯಲ್ಲಿ, ಸರ್ಕಾರ ಎರಡು ವಾರದ ಹಿಂದಷ್ಟೇ ನೇಮಿಸಿದ್ದ, ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತ ಆರ್‌. ವೆಂಕಟಾಚಲಪತಿ ನೇತೃತ್ವದ ತನಿಖಾ ಸಮಿತಿಯು ಬೆಂಗಳೂರಿಗೆ ವಾಪಸ್ ಆಗಿದೆ.

ಅಕ್ರಮಗಳ ಕುರಿತು ತನಿಖೆಗಾಗಿ ಸರ್ಕಾರ ಜುಲೈ 1ರಂದು ನಾಲ್ವರು ಸದಸ್ಯರ ತನಿಖಾ ಆಯೋಗವನ್ನು ನೇಮಿಸಿದ್ದು, ವರದಿಗೆ 15 ದಿನಗಳ ಗಡುವು ನೀಡಿತ್ತು. ಜುಲೈ 3ರಿಂದ 13ರವರೆಗೂ ತಂಡವು ತನಿಖೆ ಕೈಗೊಂಡು ದಾಖಲೆಗಳನ್ನು ಜಾಲಾಡಿತ್ತು. ಆದರೆ, ವರದಿ ಸಲ್ಲಿಸುವ ಮುನ್ನವೇ ಮತ್ತೊಂದು ವಿಚಾರಣಾ ಆಯೋಗದ ನೇಮಕವಾಗಿದೆ. ಹೀಗಾಗಿ, ವೆಂಕಟಾಚಲಪತಿ ಆಯೋಗದ ಸ್ಥಿತಿ–ಗತಿ ಏನು? ಸರ್ಕಾರಕ್ಕೆ ಆಯೋಗವು ವರದಿ ಸಲ್ಲಿಸಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಹಿಂದಿನ ವರದಿಯೂ ಬಾಕಿ:
ಮುಡಾ ಹಗರಣಗಳ ತನಿಖೆಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ತಾಂತ್ರಿಕ ಸಮಿತಿಯು ನೀಡಿರುವ ಶಿಫಾರಸುಗಳ ವರದಿಯನ್ನೂ ಸರ್ಕಾರ ಒಪ್ಪಿಲ್ಲ.

2022ರ ಜುಲೈ 2 ರಂದು ನಗರಾಭಿವೃದ್ಧಿ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕ ಟಿ.ವಿ. ಮುರಳಿ ಅಧ್ಯಕ್ಷತೆಯಲ್ಲಿ ನಾಲ್ವರು ಸದಸ್ಯರ ತಾಂತ್ರಿಕ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು 2023ರ ನವೆಂಬರ್‌ 3ರಂದು ಪ್ರಧಾನ ಕಾರ್ಯದರ್ಶಿಗೆ ಮೂರು ಸಂಪುಟಗಳಲ್ಲಿ ದೂರು ಹಾಗೂ ದಾಖಲೆಗಳನ್ನು ತೆರೆದಿಟ್ಟಿತ್ತು. ವರದಿ ಸರ್ಕಾರದ ಕಡತ ಸೇರಿದ್ದು ಬಿಟ್ಟರೆ, ಅಕ್ರಮ ಎಸಗಿದವರ ವಿರುದ್ಧ ಕ್ರಮವಾಗಿಲ್ಲ.

‘ಮೈಸೂರಿನ ಭೂ ಅಕ್ರಮಗಳ ಕುರಿತು ವಿಜಯಭಾಸ್ಕರ್ ನೇತೃತ್ವದ ಸಮಿತಿಯು ದಶಕಗಳ ಹಿಂದೆಯೇ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸಾರ್ವಜನಿಕವಾಗಿ ಲಭ್ಯವಿಲ್ಲ. ಅದನ್ನೂ ಸರ್ಕಾರವು ಜನರ ಮುಂದಿಡಬೇಕು’ ಎಂಬ ಒತ್ತಾಯ ಕೇಳಿಬಂದಿದ್ದು, ಮೈಸೂರು ಗ್ರಾಹಕರ ಪರಿಷತ್ತು ಹೋರಾಟವನ್ನು ರೂಪಿಸುತ್ತಿದೆ.

ಹೊಸ ವಿಚಾರಣಾ ಆಯೋಗಕ್ಕೆ 6 ತಿಂಗಳ ಕಾಲಾವಕಾಶ ನೀಡಿರುವುದು ಕೇವಲ ಕಣ್ಣೊರೆಸುವ ತಂತ್ರ. ಅದರ ಕಾಲಾವಧಿಯನ್ನು ಕಡಿತಗೊಳಿಸುವ ಜೊತೆಗೆ ಈಗ ಇರುವ ವರದಿಗಳ ಆಧಾರದಲ್ಲೇ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು
- ಭಾಮಿ ವಿ. ಶೆಣೈ ಸಂಸ್ಥಾಪಕ ಸಂಚಾಲಕ ಮೈಸೂರು ಗ್ರಾಹಕರ ಪರಿಷತ್ತು
ಮುಡಾ ಹಗರಣದಲ್ಲಿ ಪ್ರಭಾವಿಗಳು ಜನಪ್ರತಿನಿಧಿಗಳು ಪಾಲುದಾರರಾಗಿರುವ ಆರೋಪವಿದೆ. ಹೀಗಾಗಿ ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು
-ಕುರುಬೂರು ಶಾಂತಕುಮಾರ್‌ ಅಧ್ಯಕ್ಷ ರಾಜ್ಯ ರೈತ ಸಂಘಟನೆಗಳ ಒಕ್ಕೂಟ

6 ತಿಂಗಳ ಕಾಲಾವಕಾಶ; ಆಕ್ಷೇಪ

ಏಕಸದಸ್ಯ ವಿಚಾರಣಾ ಆಯೋಗದ ರಚನೆಯನ್ನು ಮೈಸೂರಿನ ಕೆಲವು ಪ್ರಗತಿಪರ ಸಂಘಟನೆಗಳು ಸ್ವಾಗತಿಸಿವೆ. ಆದರೆ ‘ವಿಚಾರಣೆಗೆ 6 ತಿಂಗಳ ಕಾಲಾವಕಾಶ ನೀಡಿರುವುದು ಕಣ್ಣೊರೆಸುವ ತಂತ್ರ. ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಸಬೇಕು’ ಎಂಬ ಒತ್ತಾಯ ಕೇಳಿಬಂದಿದೆ. ‘ಈ ಹಿಂದೆ ನೇಮಿಸಲಾದ ತನಿಖಾ ಸಮಿತಿಗಳಲ್ಲೂ ನಾಲ್ಕೈದು ಸದಸ್ಯರಿರುತ್ತಿದ್ದರು. ಈ ಬಾರಿ ಏಕಸದಸ್ಯ ಆಯೋಗ ನೇಮಿಸಿದ್ದು 6 ತಿಂಗಳ ಕಾಲ ತನಿಖೆ ನಡೆಯಲಿದೆ. ಆಯೋಗವು ವರದಿ ಸಲ್ಲಿಸಿ ಸರ್ಕಾರ ಕ್ರಮ ಕೈಗೊಳ್ಳುವ ಹೊತ್ತಿಗೆ ವರ್ಷವೇ ಆಗಬಹುದು. ಅದರ ಬದಲು ನ್ಯಾಯಮೂರ್ತಿಗಳಿಗೆ ಪೂರಕವಾಗಿ ತನಿಖಾಧಿಕಾರಿಗಳನ್ನು ‌ನಿಯೋಜಿಸಿ ತ್ವರಿತವಾಗಿ ತನಿಖೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂಬುದು ಸಾರ್ವಜನಿಕರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT