ಮೈಸೂರು: ಇಡೀ ದೇಶದ ಗಮನಸೆಳೆದಿದ್ದ ಮತ್ತು ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಗೆಲುವಿನ ಕೇಕೆ ಹಾಕಿದ್ದರೆ ಕಾಂಗ್ರೆಸ್ ಸತತ 3ನೇ ಬಾರಿಗೆ ಸೋಲುಂಡಿದೆ.

ರಾಜ್ಯದಲ್ಲಿ ಸರ್ಕಾರ ಇರುವುದು, ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬರೋಬ್ಬರಿ ಐದರಲ್ಲಿ ಕಾಂಗ್ರೆಸ್ನ ಶಾಸಕರನ್ನು ಹೊಂದಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಭಾವ ಮೊದಲಾದವುಗಳನ್ನೆಲ್ಲ ಮೀರಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆಲುವು ಕಂಡಿದ್ದಾರೆ. ‘ಅಚ್ಚರಿಯ ಅಭ್ಯರ್ಥಿ’ಯಾಗಿ ಕಣಕ್ಕಿಳಿದು ಗೆಲುವಿನ ಸಿಹಿ ಉಂಡಿದ್ದಾರೆ.

‘ಆಳರಸರಿಗೆ ಮಾದರಿಯಾದ ರಾಜಯೋಗಿ’ ಎಂದೇ ಖ್ಯಾತಿ ಗಳಿಸಿರುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಯಂತಿಯ ದಿನವಾದ ಮಂಗಳವಾರ ಆ ವಂಶದ ಕುಡಿಯು ಲೋಕಸಭೆಗೆ ಆಯ್ಕೆಯಾಗುವ ಮೂಲಕ ‘ಸಂಭ್ರಮ ಡಬಲ್’ ಆಗಿಸಿಕೊಂಡಿದೆ. ಎರಡೂ ಪಕ್ಷಗಳ ನಾಯಕರು ಕ್ಷೇತ್ರವಾರು ಒಗ್ಗಟ್ಟಾಗಿ ಕೆಲಸ ಮಾಡಿದ್ದು ಅವರಿಗೆ ನೆರವಾಗಿದೆ.

ಮೈತ್ರಿ ತಂತ್ರ ಸಫಲ: ಇದುವರೆಗೆ ಸ್ಪರ್ಧಿಸಿದ್ದ ಎಲ್ಲ ಚುನಾವಣೆಗಳಲ್ಲೂ ಸೋಲು ಕಂಡಿದ್ದ ಕಾಂಗ್ರೆಸ್ನ ಎಂ. ಲಕ್ಷ್ಮಣ ಈ ಚುನಾವಣೆಯಲ್ಲಿ ಗೆಲುವು ಕಾಣುವುದು ಸಾಧ್ಯವಾಗಿಲ್ಲ. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಅಖಾಡದಲ್ಲಿ ‘ಬಿಜೆಪಿ–ಜೆಡಿಎಸ್ ಮೈತ್ರಿ’ಯು ತಳಮಟ್ಟದಿಂದಲೂ ಸಂಘಟಿತವಾಗಿ ‘ತಂತ್ರಗಾರಿಕೆ’ ಮಾಡಿದ್ದು ಕೈಹಿಡಿದಿದ್ದು, ಕಮಲ ಅರಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲದ ಮುಂದೆ ಸಿದ್ದರಾಮಯ್ಯ ಅವರ ವರ್ಚಸ್ಸು– ಕಾರ್ಯತಂತ್ರ ಗೆಲುವಿನ ದಡ ಸೇರಿಸಲಾಗದೆ ಮಂಕಾಗಿದೆ! ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ 3ನೇ ಬಾರಿಗೆ ಸೋಲು ಕಂಡಿರುವುದು ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಮಟ್ಟದಲ್ಲಿ ಮುಜುಗರವನ್ನೂ ತಂದೊಡ್ಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಪರವಾಗಿ ಖುದ್ದು ಪ್ರಧಾನಿ ನರೇಂದ್ರ ಮೋದಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಆಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದವರು ಪ್ರಚಾರ ಮಾಡಿದ್ದರು. ಅವರ ವರ್ಚಸ್ಸು ಕೂಡ ‘ಕೊಡುಗೆ’ ನೀಡಿದೆ. ‘ಪ್ರತಾಪ ವಿರೋಧಿ ಪಡೆಯು ಸಮನ್ವಯದಿಂದ ಮಾಡಿದ ಕೆಲಸವೂ ಯದುವೀರ್’ ಕೈಹಿಡಿದಿರುವುದು ಫಲಿತಾಂಶದಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಾಂಗ್ರೆಸ್ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಮತ ಯಾಚಿಸಿದ್ದರು. ‘ಲಕ್ಷ್ಮಣ ಗೆದ್ದರೆ ನಾನೇ ಗೆದ್ದಂತೆ’ ಎಂಬ ಭಾವನಾತ್ಮಕ ಅಸ್ತ್ರವನ್ನೂ ಸಿದ್ದರಾಮಯ್ಯ ಅವರು ಪ್ರಯೋಗಿಸಿದ್ದರು. ಆದರೆ, ಅವರ ಮನವಿಗೆ ಮತದಾರರು ಮಣೆ ಹಾಕಿಲ್ಲ. ಪರಿಣಾಮ, ಲಕ್ಷ್ಮಣ ಹೀನಾಯವಾಗಿ ಸೋಲು ಕಂಡಿದ್ದಾರೆ.

ಆಗ ಮುಖ್ಯಮಂತ್ರಿ ಆಗಿದ್ದಾಗಲೂ: 2014ರ ಲೋಕಸಭಾ ಚುನಾವಣೆಯಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಆಗ ನರೇಂದ್ರ ಮೋದಿ ‘ಅಲೆ’ಯ ಕಾರಣ ಬಿಜೆಪಿ ಗೆದ್ದಿತ್ತು. 2019ರಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ಎದುರಿನ ಸ್ಪರ್ಧೆಯಲ್ಲೂ ಬಿಜೆಪಿ ಗೆದ್ದು ಬೀಗಿತ್ತು. ಈಗ 2ನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ತವರಿನ ಕ್ಷೇತ್ರ ವಶಪಡಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಬಿಜೆಪಿ–ಜೆಡಿಎಸ್ ಸಾಂಘಿಕ ಶಕ್ತಿಯ ಮುಂದೆ ಅವರ ‘ತಂತ್ರ’ ಫಲಿಸಿಲ್ಲ. ಹಲವು ದಿನಗಳವರೆಗೆ ಇಲ್ಲೇ ಇದ್ದುಕೊಂಡು ಕ್ಷೇತ್ರ ಪ್ರವಾಸ–ಪ್ರಚಾರ ಮಾಡಿದ್ದು ಕೂಡ ಕೈಹಿಡಿದಿಲ್ಲ. ಶಾಸಕರಿಗೆ ನೀಡಿದ್ದ ‘ಲೀಡ್’ ಗುರಿಯೂ ಅಷ್ಟೇನು ನಿರೀಕ್ಷಿತ ಮಟ್ಟದಲ್ಲಿ ‘ಲಾಭ’ ತಂದುಕೊಟ್ಟಿಲ್ಲ.

‘47 ವರ್ಷಗಳ ಬಳಿಕ ಒಕ್ಕಲಿಗ ಅಭ್ಯರ್ಥಿಗೆ ಅವಕಾಶ ನೀಡಿದ್ದೇವೆ’ ಎಂದು ಎದೆಯುಬ್ಬಿಸಿದ್ದ ಕಾಂಗ್ರೆಸ್ ಆ ಸಮುದಾಯದಿಂದ ಹೆಚ್ಚಿನ ಬೆಂಬಲವನ್ನು ಪಡೆಯುವುದು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಇಲ್ಲಿ ಸತತ ಎರಡು ಬಾರಿ ಗೆದ್ದಿದ್ದ ವ್ಯಕ್ತಿಗೆ ಟಿಕೆಟ್ ನಿರಾಕರಿಸಿ, ಹೊಸ ಮುಖಕ್ಕೆ ಮಣೆ ಹಾಕಿದ್ದ ಬಿಜೆಪಿಯು ಕ್ಷೇತ್ರವು ತನ್ನ ಭದ್ರಕೋಟೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ.

ಪ್ರತಾಪ ಅವರಿಗೆ ಟಿಕೆಟ್ ತಪ್ಪಿಸಿದ್ದರಿಂದಾಗಿ, ಆ ಸಮಾಜದವರ ಮತಗಳನ್ನು ಕ್ರೋಡೀಕರಿಸುವ ಭಾಗವಾಗಿ ಆ ಸಮುದಾಯಕ್ಕೆ ಸೇರಿದ ಲಕ್ಷ್ಮಣಗೆ ಕಾಂಗ್ರೆಸ್ ಮಣೆ ಹಾಕಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರೆಲ್ಲರಿಗೂ ಆಪ್ತರಾಗಿರುವ ಲಕ್ಷ್ಮಣ ಅವರನ್ನು ಕಣಕ್ಕಿಳಿಸಲಾಯಿತು. ಇದರಿಂದ, ಒಕ್ಕಲಿಗರು ಕಾಂಗ್ರೆಸ್ ಪರ ನಿಲ್ಲುತ್ತಾರೆಂಬ ಕಾಂಗ್ರೆಸ್ ಮುಖಂಡರ ಅಪರಿಮಿತ ವಿಶ್ವಾಸ ಹುಸಿಯಾಗಿದೆ. ಸತತ ಎರಡು ಚುನಾವಣೆಗಳಲ್ಲಿನ ಸೋಲಿನ ಸೇಡು ತೀರಿಸಿಕೊಳ್ಳಬೇಕೆಂಬ ಬಯಕೆ ಈಡೇರಲಿಲ್ಲ. ಬಿಜೆಪಿಯ ಗೆಲುವಿಗೆ ಶ್ರಮಿಸುವ ಮೂಲಕ ಶಾಸಕ ಜಿ.ಟಿ.ದೇವೇಗೌಡರು ತಮ್ಮ ಸಾಂಪ್ರದಾಯಿಕ ಎದುರಾಳಿ ಸಿದ್ದರಾಮಯ್ಯ ವಿರುದ್ಧ ಮೇಲುಗೈ ಸಾಧಿಸಿದ್ದಾರೆ!

4 ದಶಕಗಳ ನಂತರ ಬಿಜೆಪಿ

‘ಹ್ಯಾಟ್ರಿಕ್’ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬಿಜೆಪಿಯು ಜೆಡಿಎಸ್ ಸಹಕಾರ ಪಡೆದು ಬರೋಬ್ಬರಿ ನಾಲ್ಕು ದಶಕಗಳ ಬಳಿಕ ‘ಹ್ಯಾಟ್ರಿಕ್’ ಗೆಲುವು ದಾಖಲಿಸಿ ಸಂಭ್ರಮಿಸುವ ಜತೆಗೆ ಕಾಂಗ್ರೆಸ್ ದಾಖಲೆಯನ್ನು ಸರಿಗಟ್ಟಿದೆ. ಈ ಹಿಂದೆ ಕಾಂಗ್ರೆಸ್ನ ಎಚ್.ಡಿ.ತುಳಸಿದಾಸ್ ಅವರು ಸತತ ಮೂರು ಬಾರಿ ಗೆದ್ದು ‘ಹ್ಯಾಟ್ರಿಕ್’ (1962 1971 ಮತ್ತು 1977) ಸಾಧನೆ ಮಾಡಿದ್ದರು. ಅವರ ಬಳಿಕ ಯಾರಿಬ್ಬರೂ ಸತತ 3ನೇ ಬಾರಿಗೆ ಗೆದ್ದಿರಲಿಲ್ಲ. ಸತತ 2 ಬಾರಿ ಜಯಿಸಿದ್ದ ಪ್ರತಾಪ ಸಿಂಹ ಅವರಿಗೆ 3ನೇ ಬಾರಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.