ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳವಳ್ಳಿ | ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್ ಆಗ್ರಹ

Published 25 ಜುಲೈ 2024, 14:03 IST
Last Updated 25 ಜುಲೈ 2024, 14:03 IST
ಅಕ್ಷರ ಗಾತ್ರ

ಮಳವಳ್ಳಿ: ಮುಡಾ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಗುರುವಾರ ಪ್ರತಿಭಟಿಸಿದರು.

ಜೆಡಿಎಸ್ ಎಸ್‌ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಅನ್ನದಾನಿ ಮಾತನಾಡಿ, ‘ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಅಕ್ರಮ ನಡೆದಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ. ಅಲ್ಲದೇ ಎಸ್‌ಸಿ, ಎಸ್‌ಟಿ ಅಭಿವೃದ್ಧಿಗಾಗಿ ಇತರೆ ಯೋಜನೆಗಳಿಗೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ವಿರೋಧಿ ನಡೆ ಅನುಸರಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸದನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಹೋರಾಟ ನಡೆಸುತ್ತಿದ್ದು, ಭ್ರಷ್ಟಾಚಾರ ಮಾಡಿರುವ ರಾಜ್ಯ ಸರ್ಕಾರವನ್ನು ವಜಾ ಮಾಡಲು ರಾಜ್ಯಪಾಲ, ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳು ಮುಂದಾಗಬೇಕು. ಸಿದ್ದರಾಮಯ್ಯ ಅವರು ಅಹಿಂದ ಹೆಸರು ಕಟ್ಟಿಕೊಂಡು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರಿಗೆ ಮೋಸ ಮಾಡಿ ದಲಿತರ ಹಣವನ್ನು ನುಂಗುತ್ತಿದ್ದಾರೆ. ಅವರಿಗೆ ಅಹಿಂದ ಎಂದು ಕರೆಸಿಕೊಳ್ಳುವ ನೈತಿಕತೆ ಇಲ್ಲ, ಬೋವಿ, ಅಲ್ಪಸಂಖ್ಯಾತರ ನಿಗಮಗಳಲ್ಲೂ ಅಕ್ರಮ ನಡೆದಿದೆ’ ಎಂದು ವಾಗ್ದಾಳಿ ನಡೆಸಿದರು.

‘ಇಲ್ಲಿನ ಶಾಸಕ ಪರಿಶಿಷ್ಟ ಜಾತಿ, ಪಂಗಡ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದು, 50 ವರ್ಷಗಳಿಂದ ದಲಿತರು ಎನ್ನುವ ಪದ ಬಳಸಬೇಡಿ ಎನ್ನುತ್ತಾರೆ. ಅವರಿಗೆ ದಲಿತ ಪದದ ಅರ್ಥ ಗೊತ್ತಿಲ್ಲ, ಎಲ್ಲಾ ವರ್ಗಗಳ ಬಡವರನ್ನು ದಲಿತ ಎಂದು ಕರೆಯುತ್ತಾರೆ. ನನಗೆ ಗುತ್ತಿಗೆ ಕೆಲಸದಲ್ಲಿ ಕಮಿಷನ್ ಹೊಡೆಯಲು ಬರುವುದಿಲ್ಲ’ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೆಸರು ಹೇಳದೆ, ಪರೋಕ್ಷವಾಗಿಯೇ ಟೀಕಿಸಿದರು.

‘ಮಳವಳ್ಳಿಯಲ್ಲಿ ಸಾವಿರಾರು ಎಕರೆ ಭೂಮಿ ಹಗರಣವಾಗಿದೆ. ಇಲ್ಲಿಯವರೆಗೆ ಎಷ್ಟು ಆರ್‌ಟಿಸಿ ಮತ್ತು ಖಾತೆಗಳನ್ನು ರದ್ದು ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ರಾಜಕೀಯವನ್ನು ವ್ಯಾಪಾರ ಮಾಡಿಕೊಂಡಿದ್ದಾರೆ. ಅಕ್ರಮ ಮರುಳು ಮತ್ತು ಮಣ್ಣು ಸಾಕಾಣಿಕೆಯಲ್ಲಿ ಪೊಲೀಸರು ಶಾಮೀಲಾಗಿದ್ದಾರೆ. ತಾಲ್ಲೂಕಿನಲ್ಲಿ ವ್ಯಾಪಕ ಭ್ರಷ್ಟಾಚಾರ ತಾಡಂವವಾಡುತ್ತಿದೆ’ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಕೆ.ಎನ್.ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಬಿ.ರವಿ ಕಂಸಾಗರ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್, ಪುರಸಭೆ ಸದಸ್ಯ ಟಿ.ನಂದಕುಮಾರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬುಲೆಟ್ ನಿಂಗಣ್ಣ, ಪ್ರಮುಖರಾದ ಡಿ.ಜಯರಾಮು, ಕಾಂತರಾಜು, ಬೂವಳ್ಳಿ ಸದಾನಂದ, ಪುಟ್ಟರಾಮು, ಸಿದ್ದಾಚಾರಿ, ಪುಟ್ಟಬುದ್ಧಿ, ಕಿಟ್ಟಿ, ಮೆಹಬೂಬ್ ಪಾಷಾ, ಆನಂದ್, ಗುರುಪ್ರಸಾದ್, ಜಯರಾಮು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT