ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯನವರೇ ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ: ಮಾಜಿ ಸಂಸದ ಪ್ರತಾಪ ಸಿಂಹ

ಮರೀಗೌಡ ದಡ್ಡ ಶಿಖಾಮಣಿ: ಪ್ರತಾಪ ತಿರುಗೇಟು
Published 24 ಜುಲೈ 2024, 12:39 IST
Last Updated 24 ಜುಲೈ 2024, 12:39 IST
ಅಕ್ಷರ ಗಾತ್ರ

ಮೈಸೂರು: ‘ನನ್ನ ವಿರುದ್ಧ ಅನವಶ್ಯ ಆರೋಪ ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ ದಡ್ಡ ಶಿಖಾಮಣಿ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕಿಸಿದರು.

‘2 ಬಾರಿ ಸಂಸದರಾಗಿದ್ದ ಪ್ರತಾಪ ಪತ್ನಿ ಹೆಸರಿನಲ್ಲಿ ಮುಡಾದಿಂದ ಪಡೆದ ನಿವೇಶನದಲ್ಲಿ ನಿಯಮಾನುಸಾರ ಮನೆ ನಿರ್ಮಿಸದೇ, ಶೇ 25ರಷ್ಟು ದಂಡ ಶುಲ್ಕ ಪಾವತಿಸದೆ ವಂಚಿಸಿದ್ದಾರೆ’ ಎಂಬ ಮರಿಗೌಡ ಆರೋಪಕ್ಕೆ ಇಲ್ಲಿ ಬುಧವಾರ ತಿರುಗೇಟು ನೀಡಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಡಾದಿಂದ ಶೇ 50:50 ಅನುಪಾತದಡಿ ಪಡೆದ ನಿವೇಶನಗಳನ್ನು ವಾಪಸ್ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಕಾಳಜಿ–ಗೌರವದಿಂದ ಸಲಹೆ ಕೊಟ್ಟಿದ್ದೆ. ಅದನ್ನು ಅರ್ಥ ಮಾಡಿಕೊಳ್ಳದೆ ಮರಿಗೌಡನಂತಹ ಬಕ್ರಾಗಳನ್ನು ಜತೆಗಿಟ್ಟುಕೊಂಡಿದ್ದೀರಿ. ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಶಿಖಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಒಂದೂವರೆ ತಿಂಗಳು ತಲೆ ಮರೆಸಿಕೊಂಡಿದ್ದ ವ್ಯಕ್ತಿಯಿಂದ ಪಾಠ ಕಲಿಯಬೇಕಿಲ್ಲ’ ಎಂದರು.

ಇಂತಹ ಬಕ್ರಾಗಳಿಂದಲೇ:‘ನಾನು ಜುಜುಬಿ ಶೇ 25ರಷ್ಟು ದಂಡ ಉಳಿಸಲು ಹೋಗಿಲ್ಲ. ನಾನು ಕಟ್ಟಬೇಕಿರುವುದು ಸಾವಿರ ರೂಪಾಯಿ ಅಥವಾ ಒಂದೆರಡು ಲಕ್ಷ ರೂಪಾಯಿಯೋ ದಂಡ. ಅದಕ್ಕೂ ಶೇ 50:50 ಅನುಪಾತದಡಿ ನಿವೇಶನ ಹಂಚಿಕೆ ಹಗರಣಕ್ಕೂ ಏನು ಸಂಬಂಧ?’ ಎಂದು ಕೇಳಿದರು.

‘ಇಂಥ ಬಕ್ರಾಗಳಿಂದಲೇ ಸಿಎಂಗೆ ಕೆಟ್ಟ ಹೆಸರು ಬರುತ್ತಿದೆ. ಸಂಬಂಧವಿಲ್ಲದ ವಿಚಾರವನ್ನು ಇನ್ನೊಂದಕ್ಕೆ ಹೋಲಿಸಬಾರದು ಎಂಬ ಸಣ್ಣ ಪ್ರಮಾಣದ ಕನಿಷ್ಠ ತಿಳಿವಳಿಕೆಯೂ ಮರಿಗೌಡ ಅವರಿಗಿಲ್ಲ’ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಅವರೇ, ನಿವೇಶನ ಹಿಂತಿರುಗಿಸಿ ತನಿಖೆ ಮಾಡಿಸಿ. ಇಲ್ಲದಿದ್ದರೆ ನಿಮ್ಮ ಕೇಸ್ ಇಟ್ಟುಕೊಂಡು ಹಲವರು ಬಚಾವಾಗುತ್ತಾರೆ. 40 ವರ್ಷದಲ್ಲಿ ಕಳಂಕ ಅಂಟಿಸಿಕೊಳ್ಳದಿರುವ ನೀವು ಇದ್ಯಾವುದೋ ನಿವೇಶನಕ್ಕಾಗಿ ಕಳಂಕ ಅಂಟಿಸಿಕೊಳ್ಳುತ್ತಿದ್ದೀರಿ. ಇದು ಬೇಕಾ? ಇನ್ನೂ ಮೂರೂವರೆ ವರ್ಷ ನೀವೇ ಮುಖ್ಯಮಂತ್ರಿ ಆಗಿರುತ್ತೀರಿ. ಅಷ್ಟೂ ಸಮಯ ಇದೇ ಆರೋಪಕ್ಕೆ ತುತ್ತಾಗುತ್ತೀರಿ. ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ’ ಎಂದು ಸಲಹೆ ನೀಡಿದರು.

‘ಸಿದ್ದರಾಮಯ್ಯ ಅವರೇ ಅಧಿಕಾರದಲ್ಲಿ ಮುಂದುವರಿಯುತ್ತಾರೆಂದು ಅವರ ಹಿಂಬಾಲಕರು ಹೇಳುತ್ತಿರುತ್ತಾರೆ. ಅದನ್ನೇ ನಾನೂ ಉಲ್ಲೇಖಿಸಿದ್ದೇನೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೂ ಖುಷಿಯೇ. ಅವರೂ ಹಳೇ ಮೈಸೂರಿನನವರೇ’ ಎಂದು ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಆಸ್ತಿ ಏನೇನಿಲ್ಲ:

‘ಹಿಂದೆ ಮುಖ್ಯಮಂತ್ರಿ ಆಗಿದ್ದವರ ಆಸ್ತಿ ನೋಡಿದರೆ, ಸಿದ್ದರಾಮಯ್ಯನವರ ಆಸ್ತಿ ಏನೇನೂ ಅಲ್ಲ. ಮೂಡಾ ಹಗರಣವನ್ನು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕುಮಾರ್‌ ಅವರಂಥವರಿಂದ ನ್ಯಾಯಾಂಗ ತನಿಖೆ ಮಾಡಿಸಿ’ ಎಂದರು.

‘ನಾನು ಮುಡಾದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಒಂದು ಸೈಟ್ ಕೊಡಿಸಿದ್ದರೆ ಅಥವಾ ತೆಗೆದುಕೊಂಡಿದ್ದರೆ ತೋರಿಸಿ. ನಾನು ಅಲ್ಲಿಗೆ ಎಂದಿಗೂ ವ್ಯವಹಾರಕ್ಕೆಂದು ಹೋಗಿಲ್ಲ’ ಎಂದು ಸಮರ್ಥಿಸಿಕೊಂಡರು.

‘ರಾಜಕಾರಣದಲ್ಲಿ ಮುಂದೆ ಏನು ಮಾಡ್ತೀವಿ ಎಂಬುದನ್ನು ಹೇಳಬಾರದು. ಹೇಳಿದರೆ ಕೆಲವರು ಅದಕ್ಕೂ ಬೇರೆ ಸ್ಕೀಂ ಹಾಕಿ ಬಿಡುತ್ತಾರೆ. ತಾಯಿ ಚಾಮುಂಡಿಯೇ ನನಗೆ ಮುಂದಿನ ದಾರಿ ತೋರಿಸುತ್ತಾಳೆ. ನಾನು ಜನರಿಂದ ತಿರಸ್ಕೃತನಾದ ವ್ಯಕ್ತಿಯಲ್ಲ‌. ಏನೋ ಕೆಲವರಿಂದ ಟಿಕೆಟ್ ತಪ್ಪಿತು. ಹಾಗಂತ ಇದೇ ಅಂತಿಮವಲ್ಲ’ ಎಂದರು.

‘ಕೀಳಮಟ್ಟದ ರಾಜಕೀಯಕ್ಷೆ ಸಾಕ್ಷಿ’

ಮೈಸೂರು: ‘ಪ್ರತಾಪ ಸಿಂಹ ಅವರು ನನ್ನ ವಿರುದ್ಧ ಏಕವಚನ ಬಳಸಿರುವುದು ಅವರ ಕೀಳುಮಟ್ಟದ ರಾಜಕೀಯಕ್ಕೆ ಸಾಕ್ಷಿಯಾಗಿದೆ’ ಎಂದು ಮುಡಾ ಅಧ್ಯಕ್ಷ ಮರೀಗೌಡ ತಿರುಗೇಟು ನೀಡಿದ್ದಾರೆ.

‘ಒಂದು ದಶಕದವರೆಗೆ ಸಂಸದರಾಗಿದ್ದ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಲು ಈ ರೀತಿಯ ನಡವಳಿಕೆಯೇ ಕಾರಣವಾಗಿದೆ’ ಎಂದು ಟೀಕಿಸಿದ್ದಾರೆ.

‘ಮುಡಾದಿಂದ ಮಂಜೂರಾಗಿದ್ದ ನಿವೇಶನದಲ್ಲಿ ಮನೆಯನ್ನೇ ನಿರ್ಮಿಸದೇ, ಕಟ್ಟಡ ಪೂರ್ಣಗೊಂಡ ವರದಿ ಪಡೆದುಕೊಂಡು ಕ್ರಯಪತ್ರಗಗಳನ್ನು ಪಡೆದಿರುವುದು ನೋಡಿದರೆ ನಿಜವಾದ ಬಕ್ರಾ ಯಾರು ಎನ್ನುವುದು ಜನರಿಗೆ ಗೊತ್ತಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT