ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಮೀನಾಕ್ಷಿಪುರದಲ್ಲಿ ‘ರೇವ್‌ ಪಾರ್ಟಿ’: 60 ಮಂದಿ ವಶಕ್ಕೆ

Published : 29 ಸೆಪ್ಟೆಂಬರ್ 2024, 19:23 IST
Last Updated : 29 ಸೆಪ್ಟೆಂಬರ್ 2024, 19:23 IST
ಫಾಲೋ ಮಾಡಿ
Comments

ಮೈಸೂರು: ತಾಲ್ಲೂಕಿನ ಮೀನಾಕ್ಷಿಪುರ ಕೆಆರ್‌ಎಸ್‌ ಹಿನ್ನೀರು ಪ್ರದೇಶದ ಸಮೀಪದ ಖಾಸಗಿ ಜಾಗದಲ್ಲಿ ಶನಿವಾರ ರಾತ್ರಿ ಆಯೋಜನೆಗೊಂಡಿದ್ದ ‘ರೇವ್ ಪಾರ್ಟಿ’ ಮೇಲೆ ಇಲವಾಲ ಠಾಣೆ ಪೊಲೀಸರು ದಾಳಿ ನಡೆಸಿ, ಯುವತಿಯರು ಸೇರಿದಂತೆ 60 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಪಾರ್ಟಿ ಬಗ್ಗೆ ಪ್ರಚಾರ ಮಾಡಿದ್ದ ಕಾರಣ ಪಾಲ್ಗೊಳ್ಳಲು 25ಕ್ಕೂ ಹೆಚ್ಚು ಜೋಡಿಗಳು ನೋಂದಾಯಿಸಿದ್ದರು. ಈ ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಎಎಸ್‌ಪಿ ನಾಗೇಶ್‌, ಡಿವೈಎಸ್‌ಪಿ ಕರೀಂ ರಾವರ್ತ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಪಾರ್ಟಿಯಲ್ಲಿ ಬಳಸಿದ್ದ ಸಂಗೀತ ಉ‍ಪಕರಣ, 18 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯುವಕ– ಯುವತಿಯರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ಹಾರ್ಮೊನಿ ಆಫ್‌ ಕಾಸ್ಮೋಸ್ 2.0’ ಹೆಸರಿನಲ್ಲಿ ಪಾರ್ಟಿ ಆಯೋಜಿಸಿರುವ ಬಗ್ಗೆ ‘ಅವಧೂತ್_ಗ್ಯಾದರಿಂಗ್‌’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಟಿಕೆಟ್‌ ದರ ತಲಾ ₹ 2 ಸಾವಿರವಿದ್ದು, ಇಸ್ರೇಲ್‌ನ ಡಿಜೆ ಕಲಾವಿದ ಗ್ರೇನ್‌ರೈಪರ್‌ ಹಾಗೂ ದೇಶದ ಡಿಜೆಗಳಾದ ಶಾಂತ, ಬಬಲ್‌ಗನ್ಸ್, ಮೆಂಟಲ್‌ ಮಶ್ರೂಮ್‌, ಸ್ಪೇಸ್‌ ಸರ್ಪೆಂಟ್‌ ಭಾಗವಹಿಸಿದ್ದವು ಎನ್ನಲಾಗಿದೆ.

‘ಪ್ರಕರಣ ಸಂಬಂಧ ಎಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಎಫ್‌ಎಸ್‌ಎಲ್ ವರದಿ ಪಡೆಯಲಾಗುವುದು’ ಎಂದು ವಿಷ್ಣುವರ್ಧನ್ ಪ್ರತಿಕ್ರಿಯಿಸಿದರು.

‘ಸ್ಥಳದಲ್ಲಿ ಯಾವುದೇ ಮಾದಕ ವಸ್ತುಗಳೂ ಸಿಕ್ಕಿಲ್ಲ. ಪಾಲ್ಗೊಂಡಿದ್ದವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬರಬೇಕಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಿಂದಲೂ ವರದಿ ಪಡೆಯಲಾಗುವುದು. ಪಾರ್ಟಿ ಆಯೋಜಿಸಿದ್ದು ಯಾರು, ಭಾಗವಹಿಸಿದ್ದವರು ಯಾರು, ಯಾವ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ಆಹ್ವಾನಿಸಲಾಗಿತ್ತು, ಅದರ ಸ್ವರೂಪವವೇನು ಎಂಬಿತ್ಯಾದಿ ವಿಷಯಗಳ ಕುರಿತು ತನಿಖೆ ನಡೆಯುತ್ತಿದೆ. ವಿದೇಶಿಯರು ಭಾಗಿಯಾಗಿದ್ದಾರೆಯೇ, ಪ್ರಭಾವಿಗಳು ಇದ್ದಾರೆಯೇ, ಜಾಗ ಯಾರದ್ದು ಎಂಬಿತ್ಯಾದಿ ವಿಷಯಗಳ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ರೇವ್ ಪಾರ್ಟಿ ನಡೆದಿರುವ ಬಗ್ಗೆ ಎಸ್‌ಪಿ ಮಾಹಿತಿ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ
ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT