ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ವಸತಿ ಶಾಲೆ: ಪ್ರವೇಶಕ್ಕೆ ವಿದ್ಯಾರ್ಥಿಗಳ ಪರದಾಟ!

ಕೊನೇ ಕ್ಷಣದಲ್ಲಿ ಕೆಇಎ ನೀಡಿದ ಸೂಚನೆ ಪಾಲನೆಗೆ ತೊಂದರೆ
Published 18 ಜುಲೈ 2024, 6:34 IST
Last Updated 18 ಜುಲೈ 2024, 6:34 IST
ಅಕ್ಷರ ಗಾತ್ರ

ಮೈಸೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದೂವರೆ ತಿಂಗಳು ಮುಗಿದಿದ್ದರೂ, ಸೀಟು ಹಂಚಿಕೆಯಲ್ಲಿ ಆಗಿರುವ ವಿಳಂಬದಿಂದ ರಾಜ್ಯದ ವಸತಿ ಶಾಲೆಗಳಲ್ಲಿ ಸರಾಸರಿ ಶೇ 50ರಷ್ಟು ಸೀಟುಗಳು ಭರ್ತಿಯೇ ಆಗಿಲ್ಲ!

ಬಹಳಷ್ಟು ವಿದ್ಯಾರ್ಥಿಗಳು ಬೇರೆ ತಾಲ್ಲೂಕುಗಳಲ್ಲಿ ಸೀಟು ಸಿಕ್ಕಿದ್ದರಿಂದ‌ ದಾಖಲಾಗಿಲ್ಲ; ಊರಿಗೆ ಸಮೀಪದ ಶಾಲೆಯಲ್ಲೇ ಪ್ರವೇಶ ನಿರೀಕ್ಷಿಸಿದ್ದಾರೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಅಡಿ 807 ವಸತಿ ಶಾಲೆಗಳಿವೆ. ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ, ಅಂಬೇಡ್ಕರ್‌, ಅಟಲ್‌ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌, ಸಂಗೊಳ್ಳಿ ರಾಯಣ್ಣ, ನಾರಾಯಣಗುರು ಸೇರಿದಂತೆ ವಿವಿಧ ಮಾದರಿಯ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಈವರೆಗೂ ಸೀಟುಗಳು ಭರ್ತಿಯಾಗಿಲ್ಲ.

‘ವಿಳಂಬ ಧೋರಣೆಯೇ ಅದಕ್ಕೆ ಕಾರಣ’ ಎನ್ನುವುದು ಪೋಷಕರ ಆರೋಪ. ‘ಒಟ್ಟು 40,350 ಸೀಟುಗಳಲ್ಲಿ ಈವರೆಗೆ 26,517 ಸೀಟುಗಳಷ್ಟೆ ಭರ್ತಿಯಾಗಿವೆ’ ಎಂದು ಮೂಲಗಳು ತಿಳಿಸಿದೆ.

ಮಾರ್ಚ್‌ನಲ್ಲೇ ಪ್ರವೇಶ ಪರೀಕ್ಷೆ ನಡೆದಿತ್ತು: ಮಾರ್ಚ್‌ 12ರಂದು ಪ್ರವೇಶ ಪರೀಕ್ಷೆ ನಡೆದಿದ್ದು, ಮೇನಲ್ಲೇ ಪ್ರವೇಶ ಪ್ರಕ್ರಿಯೆ ಮುಗಿಸಬಹುದಿತ್ತು. ಹಿಂದಿನ ವ್ಯವಸ್ಥೆಯಲ್ಲಿ (ಜಿಲ್ಲಾ ಮಟ್ಟದಲ್ಲಿ ಸೀಟು ಹಂಚಿಕೆ ಕೌನ್ಸೆಲಿಂಗ್) ಜೂನ್‌ 5ರೊಳಗೆ ಮುಗಿಯುತ್ತಿತ್ತು.

‘ಕೆಇಎನಿಂದ 3ನೇ ಹಂತದ ಸೀಟು ಹಂಚಿಕೆ ಪೂರ್ಣಗೊಂಡ ನಂತರವೂ ದಾಖಲಾತಿ ಪೂರ್ಣಗೊಂಡಿಲ್ಲ. ಲಭ್ಯ ಸೀಟುಗಳಲ್ಲಿ ಶೇ 50ರಷ್ಟನ್ನು ಮೆರಿಟ್ ಪಡೆದವರಿಗೆ ಹಾಗೂ ಶೇ 50ರಷ್ಟನ್ನು ವಿಶೇಷ ವರ್ಗದ ಮಕ್ಕಳಿಗೆ ಮೀಸಲಿಡಲಾಗಿದೆ. ಹಂಚಿಕೆಯಲ್ಲಿ ಅವೈಜ್ಞಾನಿಕ ಕ್ರಮದ ಪರಿಣಾಮ, ಬಹಳಷ್ಟು ಮಕ್ಕಳು ಪ್ರವೇಶ ಪಡೆದಿಲ್ಲ’ ಎನ್ನುತ್ತಾರೆ ಪ್ರಾಂಶುಪಾಲರು.

‘ಸೀಟು ಹಂಚಿಕೆ ಕೌನ್ಸೆಲಿಂಗ್‌ ಜಿಲ್ಲಾ ಹಂತದಲ್ಲಿ ನಡೆಯುತ್ತಿದ್ದಾಗ ಎಲ್ಲವೂ ಸರಿಯಾಗಿತ್ತು. ಈಗ ಸರಾಸರಿ ಶೇ 50ರಷ್ಟು ಸೀಟುಗಳು ಖಾಲಿ ಇವೆ. ಪೋಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಪ್ರಶ್ನೆಗಳಿಗೆ ಸಮಜಾಯಿಷಿ ಕೊಡಲು ಆಗುತ್ತಿಲ್ಲ. ನಮ್ಮ ಶಾಲೆಯ 50 ಸೀಟುಗಳ ಪೈಕಿ 25 ಖಾಲಿ ಉಳಿದಿವೆ’ ಎಂದು ಪ್ರಾಂಶುಪಾಲರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತೊಂದರೆಯಾಗಿದೆ: ‘ಹಂಚಿಕೆ ಪ್ರಕ್ರಿಯೆಯಲ್ಲಿ ಗೊಂದಲವಾಗುತ್ತಿದೆ. ತಿ.ನರಸೀಪುರದವರಿಗೆ ಪಿರಿಯಾಪಟ್ಟಣದಲ್ಲಿ, ಹುಣಸೂರಿನವರಿಗೆ ಕೆ.ಆರ್. ನಗರದಲ್ಲಿ ಸೀಟು ನೀಡುವುದರಿಂದ ವಿದ್ಯಾರ್ಥಿಗಳು ಆಸಕ್ತಿ ತೋರುವುದಿಲ್ಲ. ಪೋಷಕರಿಗೂ ಸಮಸ್ಯೆಯಾಗಿದೆ’ ಎನ್ನುತ್ತಾರೆ ಅವರು.

‘ಸಫಾಯಿ ಕರ್ಮಚಾರಿಗಳ ಮಕ್ಕಳು, ಬಾಲ ಕಾರ್ಮಿಕರು, ಜೀತ ವಿಮುಕ್ತ ಕಾರ್ಮಿಕರ ಮಕ್ಕಳು, ಶೇ 25ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿರುವ ಮಕ್ಕಳು, ಅಲೆಮಾರಿ, ಅರೆ-ಅಲೆಮಾರಿಗಳ ಮಕ್ಕಳು.. ಹೀಗೆ ವಿಶೇಷ ವರ್ಗದವರಿಗೆ ಶೇ 50ರಷ್ಟು ಸೀಟುಗಳನ್ನು ಪ್ರವೇಶ ಪರೀಕ್ಷೆ ನಡೆಸದೇ ನೇರವಾಗಿ ಭರ್ತಿ ಮಾಡಲು ಜಿಲ್ಲಾಮಟ್ಟದಲ್ಲೇ ಕ್ರಮ ವಹಿಸುವಂತೆ ಜುಲೈ 12ರಂದು ಆದೇಶಿಸಲಾಗಿದೆ. ಒಂದೂವರೆ ತಿಂಗಳ ಪಾಠ ಮುಗಿದ ನಂತರ ಹಾಗೂ ಎಫ್‌ಎ–1 ಪರೀಕ್ಷೆಯ ಹೊಸ್ತಿಲಲ್ಲಿ ದಾಖಲಿಸಿಕೊಳ್ಳುವಂತೆ ಹೇಳುವುದು ಎಷ್ಟು ಸರಿ? ‘ವಿಶೇಷ ವರ್ಗ’ದ ಅಷ್ಟೊಂದು ಮಕ್ಕಳನ್ನು ಹುಡುಕುವುದೆಲ್ಲಿ?’ ಎಂಬುದು ಅಧಿಕಾರಿಗಳ ಪ್ರಶ್ನೆ.

ರಾಜ್ಯದಲ್ಲಿವೆ 807 ವಸತಿ ಶಾಲೆ ತಲಾ 50ರಂತೆ 40,350 ಸೀಟುಗಳು ಲಭ್ಯ ವಿಳಂಬದಿಂದಾಗಿ ತೊಂದರೆ
‘ಎಲ್ಲವೂ ಜಟಿಲ’
‘ಸೀಟು ಹಂಚಿಕೆಯಾಗದವರಿಗೆ ಒಂದೂವರೆ ತಿಂಗಳ ಪಾಠವೂ ತಪ್ಪಿ ಸುಮ್ಮನೇ ಕಾಯುವಂತಾಗಿದೆ’ ಎಂಬುದು ಪೋಷಕರು ಹಾಗೂ ವಿದ್ಯಾರ್ಥಿಗಳ ಅಳಲು. ‘3ನೇ ಪಟ್ಟಿಯಲ್ಲೂ ಸೀಟು ಸಿಕ್ಕಿಲ್ಲ ಅವಕಾಶ ಕೊಡಿ ಎಂದು ವಿದ್ಯಾರ್ಥಿಗಳು ಬರುತ್ತಾರೆ. ಅದರೆ ಕೆಇಎನಿಂದಲೇ ಪ್ರಕ್ರಿಯೆ ನಡೆಸುತ್ತಿರುವುದರಿಂದ ನಾವು ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ’ ಎನ್ನುತ್ತಾರೆ ಜಿಲ್ಲಾಮಟ್ಟದ ಅಧಿಕಾರಿಗಳು. ‘ಪ್ರವೇಶ ಪ್ರಕ್ರಿಯೆಯನ್ನು ಜಿಲ್ಲಾಮಟ್ಟದಲ್ಲೇ ನಡೆಸುವಂತೆ ಮುಖ್ಯಮಂತ್ರಿ ಹೋದ ವರ್ಷ ಸೂಚಿಸಿದ್ದರು. ಆದರೆ ಈ ವಿಷಯದಲ್ಲಿ ಕ್ರಮ ಕೈಗೊಂಡಿಲ್ಲ. ಸುಲಭವಾಗಿ ನಡೆಸಬಹುದಾದ ಪ್ರಕ್ರಿಯೆಯನ್ನು ಜಟಿಲಗೊಳಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ವಿಶೇಷ ಅಭಿಯಾನಕ್ಕೆ ಸೂಚನೆ
‘ವಸತಿ ಶಾಲೆಗಳಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿರುವುದರಿಂದ 2 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿದೆ. ಶೇ 50ರಷ್ಟು ಸೀಟುಗಳನ್ನು ವಿಶೇಷ ವರ್ಗದವರಿಗೆ ನೇರ ಪ್ರವೇಶಾತಿಗೆ ಮೀಸಲಾತಿ ಪ್ರಕಾರ ಸರ್ಕಾರ ಅವಕಾಶ ನೀಡಿದೆ. ವಿಶೇಷ ಅಭಿಯಾನ ನಡೆಸಿ ದಾಖಲಾತಿ ಮಾಡಿಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಆದರೂ ಉಳಿದ ಸೀಟುಗಳ ಭರ್ತಿಗೆ ಸರ್ಕಾರದ ನಿರ್ದೇಶನದ ಮೇರೆಗೆ ಕ್ರಮ ವಹಿಸಲಾಗುವುದು’ ಎಂದು ಕ್ರೈಸ್‌ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಎಸ್‌. ಲತಾಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT