100 ಎಕರೆಯಷ್ಟು ಕೃಷಿ ಜಮೀನಿನಲ್ಲಿ ಕಾರ್ಯಕ್ರಮ 1 ಲಕ್ಷ ಆಸನಗಳ ವ್ಯವಸ್ಥೆ ಮೊಬೈಲ್ ಶೌಚಾಲಯ, ನೀರು, ಪಾರ್ಕಿಂಗ್ ವ್ಯವಸ್ಥೆ
ಓಡಾಟಕ್ಕೆ ತೊಂದರೆ
ಆಹಾರ ಮೇಳ– ಯುವ ದಸರಾದಂತಹ ಕಾರ್ಯಕ್ರಮಗಳು ಅಕ್ಕಪಕ್ಕದಲ್ಲೇ ನಡೆಯುತ್ತಿದ್ದು ಸಾವಿರಾರು ಮಂದಿ ಎರಡೂ ಕಡೆ ಭೇಟಿ ಕೊಟ್ಟು ಕಾರ್ಯಕ್ರಮದೊಟ್ಟಿಗೆ ಖಾದ್ಯಗಳನ್ನೂ ಸವಿಯುತ್ತಿದ್ದರು. ಆದರೆ ಈ ಬಾರಿ ಅದಕ್ಕೆ ಅವಕಾಶ ಇಲ್ಲದಂತೆ ಆಗಿದೆ. ನಗರದ ಹೊರವಲಯದ ಒಂದು ಮೂಲೆಯಲ್ಲಿ ಕಾರ್ಯಕ್ರಮ ನಡೆದರೆ ಓಡಾಟಕ್ಕೆ ತೊಂದರೆ ಆಗಲಿದೆ ಎನ್ನುವುದು ಜನರ ದೂರು. ನಗರದ ಹೃದಯ ಭಾಗದಲ್ಲಿ ಕಾರ್ಯಕ್ರಮ ನಡೆದರೆ ಅನುಕೂಲ ಹೆಚ್ಚು. ಬರುವವರಿಗೆ ಬೇಕಾದ ಊಟೋಪಚಾರ ಸೇರಿದಂತೆ ಸಕಲೆಂಟು ಸೌಲಭ್ಯಗಳು ಸಿಗುತ್ತವೆ. ಆದರೆ ಕಾರ್ಯಕ್ರಮ ವೀಕ್ಷಣೆಗೆ ಹೊರವಲಯಕ್ಕೆ ಹೋಗುವುದು ಕಷ್ಟ. ವೀಕ್ಷಕರಿಗೆ ಬೇಕಾದ ಮೂಲ ಸೌಕರ್ಯಗಳೂ ಇರುವುದಿಲ್ಲ. ಅದರಲ್ಲೂ ಮಹಿಳೆಯರ ಓಡಾಟ ಹಾಗೂ ಸುರಕ್ಷತೆ ದೃಷ್ಟಿಯಿಂದ ಮಹಾರಾಜ ಕಾಲೇಜು ಮೈದಾನವೇ ಕಾರ್ಯಕ್ರಮಕ್ಕೆ ಉತ್ತಮ ಆಯ್ಕೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಹೊರವರ್ತುಲ ರಸ್ತೆಗೆ ಸಮೀಪ
‘ಯುವ ದಸರೆಗೆ ಗುರುತಿಸಲಾದ ಹೊಸ ಸ್ಥಳವು ರಿಂಗ್ ರಸ್ತೆಗೆ ಸಮೀಪದಲ್ಲೇ ಇದ್ದು ಜನರ ಓಡಾಟಕ್ಕೆ ಅನುಕೂಲಕರವಾಗಿಯೇ ಇದೆ. ಯಾವುದೇ ತೊಂದರೆ ಆಗದಂತೆ ಸೌಲಭ್ಯಗಳನ್ನು ಒದಗಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು. ‘ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತ ಪ್ರತಿ ವರ್ಷ ದಸರೆ ಸಂದರ್ಭ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. ಮೈದಾನವು ಚಿಕ್ಕದಾಗಿದ್ದರಿಂದ ಹೆಚ್ಚಿನ ಜನರಿಗೆ ಸ್ಥಳಾವಕಾಶವೂ ಸಿಗುತ್ತಿರಲಿಲ್ಲ. ಈ ಬಾರಿ 1 ಲಕ್ಷದಷ್ಟು ಜನರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸುವ ಯೋಜನೆ ಇದ್ದು ಆ ಕಾರಣಕ್ಕೆ ಉತ್ತನಹಳ್ಳಿ ಬಳಿ ಸ್ಥಳ ಆಯ್ಕೆ ಮಾಡಿದ್ದೇವೆ. ಮೈಸೂರಿನ ಯಾವುದೇ ಭಾಗದ ಜನರು ರಿಂಗ್ ರಸ್ತೆ ಮುಖಾಂತರ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದ್ದು ಪ್ರವಾಸಿಗರಿಗೂ ಅನುಕೂಲ ಆಗಲಿದೆ’ ಎಂದು ಅವರು ಹೇಳಿದರು.