ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದಗಲ್: ಜನರಿಗೆ ಮರೀಚಿಕೆಯಾದ ಶುದ್ಧ ನೀರು

Published 17 ಜುಲೈ 2024, 5:54 IST
Last Updated 17 ಜುಲೈ 2024, 5:54 IST
ಅಕ್ಷರ ಗಾತ್ರ

ಮುದಗಲ್: ಹೋಬಳಿಯ ಕನ್ನಾಪುರ ಹಟ್ಟಿ, ಆಶಿಹಾಳ ತಾಂಡಾ, ಜನತಾಪುರ, ಪಿಕ್ಕಳಿಹಾಳ, ರಾಮತನಾಳ, ಹಲ್ಕಾವಟಗಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ದಾಖಲಾತಿಗೆ ಹಾಗೂ ಸಭೆಗಳಲ್ಲಿ ಮಾಹಿತಿ ನೀಡಲು ಹೆಸರಿಗಷ್ಟೇ ಸೀಮಿತವಾಗಿವೆ.

ಇಲ್ಲಿನ ವಾಸ್ತವದ ಚಿತ್ರಣ ಬೇರೆಯೇ ಇದೆ. ಶುದ್ಧ ಕುಡಿಯುವ ನೀರಿಗಾಗಿ ಜನರು ನಿತ್ಯ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಆಗುತ್ತಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ಶುದ್ಧ ಜೀವ ಜಲಕ್ಕಾಗಿ ಪರದಾಡುತ್ತಿದ್ದಾರೆ.

ಮುದಗಲ್ ಹೋಬಳಿಯ ಅನೇಕ ಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್‌ಗಳು ಉಸಿರು ನಿಲ್ಲಿಸಿವೆ. ಶುದ್ಧ ಕುಡಿಯುವ ನೀರು ಪೂರೈಸುವಂತೆ ಜನರು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬಳಿ ಅಂಗಲಾಚುವುದು ಸಾಮಾನ್ಯ. ಜನಪ್ರತಿನಿಧಿಗಳು ಜನರ ಬೇಡಿಕೆ ಈಡೇರಿಸಲು ಘಟಕ ಪ್ರಾರಂಭಿಸಿದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವು ನಿರ್ವಹಣೆ ಸಮಸ್ಯೆ ಎದುರಿಸುತ್ತಿವೆ.

ಮುದಗಲ್ ಹೋಬಳಿಯ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಘಟಕ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಅದರಲ್ಲಿ 25 ಕ್ಕೂ ಹೆಚ್ಚು ಕಡೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ, ಶಾಸಕರು, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಸಹಕಾರ ಸಂಘಗಳ ನೆರವಿನಿಂದ ಘಟಕ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ 20 ಘಟಕಗಳು ಸ್ಥಗಿತವಾಗಿವೆ. ಆದರೆ, ಅಧಿಕಾರಿಗಳ ಮಾಹಿತಿಗೂ ವಾಸ್ತವಕ್ಕೂ ಬಹಳ ವ್ಯತ್ಯಾಸ ಕಂಡು ಬರುತ್ತಿದೆ ಎನ್ನುತ್ತಾರೆ ನೀರಿನ ಸಮಸ್ಯೆ ಅನುಭವಿಸುತ್ತಿರುವ ಗ್ರಾಮಸ್ಥರು.

ಕೆಲ ಕಡೆ ಘಟಕಗಳು ಪ್ರಾರಂಭವಾದ ಕೆಲವೇ ದಿನಗಳಿಗೆ ಸ್ಥಗಿತಗೊಳ್ಳುತ್ತಿವೆ. ನಿರ್ಮಾಣಕ್ಕೆ ಬಳಕೆ ಮಾಡುವ ಸಲಕರಣೆಗಳು ಕಳಪೆಯಾಗಿವೆ ಎಂಬ ದೂರಗಳು ಇವೆ. ಬಹುತೇಕ ಘಟಕಗಳಲ್ಲಿ ಅಳವಡಿಸಿದ್ದ ಗಾಜಿನ ಬಾಗಿಲು, ವಿದ್ಯುತ್ ಸಂಪರ್ಕದ ವೈರ್‌ಗಳು, ನೀರು ಸರಬರಾಜಿನ ಪೈಪ್‌ಗಳು, ಹಾಳಾಗಿವೆ. ದುರಸ್ತಿಯಿಲ್ಲದೇ ಕೆಲ ಘಟಕಗಳು ಪಾಳು ಬಿದ್ದಿವೆ. ನೀರಿನ ಘಟಕದ ದುರಸ್ತಿ ಬಗ್ಗೆ ಯಾರ ಗಮನಕ್ಕೆ ತರಬೇಕು ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಗ್ರಾಮೀಣ ಪ್ರದೇಶ ಜನ.

ಘಟಕಗಳ ನಿರ್ಮಾಣಕ್ಕೆ ಹಾಗೂ ದುರಸ್ತಿಗೆ ಹಣ ನೀರಿನಂತೆ ಖರ್ಚಾಗಿದೆ. ಕುಡಿಯುವ ನೀರಿನ ಉದ್ದೇಶಕ್ಕೆ ಕೋಟಿ ಲೆಕ್ಕದಲ್ಲಿ ಅನುದಾನ ಜಿಲ್ಲೆಗೆ ಬರುತ್ತಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗದೆ ಸಮಸ್ಯೆಯಾಗಿ ಉಳಿದಿದೆ.

ಸರಿಯಾದ ನಿರ್ವಹಣೆ ಇಲ್ಲದೆ, ಶುದ್ಧ ನೀರಿನ ಘಟಕಗಳು ಕಳೆದ ಎರಡು ಮೂರು ವರ್ಷಗಳಿಂದ ಸ್ಥಗಿತವಾಗಿ ಜನರು ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲದರ ಪರಿಣಾಮ ಗ್ರಾಮಗಳ ಜನರು, ಬೇರೆ ಊರುಗಳಿಗೆ ಹೋಗಿ ಅಲ್ಲಿನ ಶುದ್ಧೀಕರಣ ಘಟಕಗಳಿಂದ ನೀರನ್ನು ಹೊತ್ತು ತರುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT