ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಶಾಸಕರ ಹಿಂಬಾಲಕರಿಂದ ಶಾಲಾ ಜಾಗ ಅತಿಕ್ರಮಣ

ಶಾಲೆಯನ್ನೇ ಸ್ಥಳಾಂತರಿಸಲು ಶಾಸಕರಿಂದ ಜಿಲ್ಲಾಧಿಕಾರಿಗೆ ಪತ್ರ
Published : 31 ಜನವರಿ 2024, 4:07 IST
Last Updated : 31 ಜನವರಿ 2024, 4:07 IST
ಫಾಲೋ ಮಾಡಿ
Comments

ರಾಯಚೂರು: ಬಿಜೆಪಿ ಶಾಸಕ ಶಿವರಾಜ ಪಾಟೀಲ ಹಿಂಬಾಲಕರು ಸರ್ಕಾರಿ ಶಾಲಾ ಜಾಗವನ್ನು ಒತ್ತುವರಿ ಮಾಡಿದರೂ ಜಿಲ್ಲಾಡಳಿತ ಅತಿಕ್ರಮಣ ತೆರವುಗೊಳಿಸಲು ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಒಕ್ಕೂಟ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ವಾರ್ಡ್‌ ಸಂಖ್ಯೆ 28ರ ವ್ಯಾಪ್ತಿಯಲ್ಲಿರುವ ಸಂತೋಷನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ ಮೀಸಲಿಟ್ಟ ನಿವೇಶನವನ್ನು ಶಾಸಕರ ಬೆಂಬಲಿಗರೇ ಅತಿಕ್ರಮಣ ಮಾಡಿದ್ದಾರೆ. ಅಲ್ಲಿ ನಿರ್ಮಿಸಿದ ಶೆಡ್‌ ಅನ್ನು ತಕ್ಷಣ ತೆರವುಗೊಳಿಸಿ ಶಾಲಾ ಕೊಠಡಿ ನಿರ್ಮಾಣ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸರ್ಕಾರಿ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ಮುಂದಾಳತ್ವ ವಹಿಸಬೇಕಿದ್ದ ಶಾಸಕರೇ ಅತಿಕ್ರಮಣಕಾರರ ಬೆನ್ನಿಗೆ ನಿಂತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಡವರ ಮಕ್ಕಳೇ ಇಲ್ಲಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಬಡವರ ಪರವಾಗಿ ನಿಲ್ಲಬೇಕಾದ ಶಾಸಕರು ರಿಯಲ್‌ಎಸ್ಟೇಟ್‌ ದಂದೆಯಲ್ಲಿ ತೊಡಗಿರುವ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಿ ಪ್ರೌಢಶಾಲೆ, ಎಲ್‌ಬಿಎಸ್‌ ನಗರದ ಕನ್ನಡ ಮಾಧ್ಯಮ ಶಾಲೆಗೆ 1017.45 ಚದರ್‌ ಅಳತೆಯ ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿದೆ. 2022ರ ಜೂನ್‌1ರಂದು ನೋಂದಣಿ ಸಹ ಆಗಿದೆ. ಬಡಾವಣೆಯ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಶಾಲಾ ನಿವೇಶನ ಕಬಳಿಸುವ ಉದ್ದೇಶದಿಂದ ಶೆಡ್‌ನಿರ್ಮಿಸಿ ಅದರ ಮೇಲೆ ಧಾರ್ಮಿಕ ಚಿನ್ನೆ ಬರೆದು ಅದು ಮಂದಿರ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ, ಬಿಇಒ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆಯ ಆಯುಕ್ತರಿಗೂ ದೂರು ಕಡಲಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ಮನವಿ ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸುವ ಪ್ರಯತ್ನ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂತೋಷನಗರ ಬಡಾವಣೆಯಲ್ಲಿರುವ ಸರ್ಕಾರಿ ಶಾಲೆ ಸ್ಥಳಾಂತರಿಸಲು ಬಿಡುವುದಿಲ್ಲ. ಸರ್ಕಾರಿ ಶಾಲೆಗೆ ಸೇರಿದ ನಿವೇಶನವನ್ನು ರದ್ದುಪಡಿಸಿದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಗರ ಶಾಸಕ ಹಾಗೂ ಜಿಲ್ಲಾಡಳಿತ ವಿರುದ್ದ ಹೋರಾಟ ತೀವ್ರಗೊಳಿಸಲು ಹಿಂಜರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಎಸ್‌.ಮಾರೆಪ್ಪ ವಕೀಲ, ಹೇಮರಾಜ್‌ ಅಸ್ಕಿಹಾಳ, ಎಸ್.ನರಸಿಂಹಲು, ಶ್ರೀನಿವಾಸ, ಶ್ರೀನಿವಾಸ ಕೊ‍ಪ್ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಿವೇಶನ ಮಂಜೂರು ಆದೇಶ ಹಿಂಪಡೆಯಲು ಶಾಸಕರ ಪತ್ರ

ರಾಯಚೂರು ವಾರ್ಡ್‌ ನಂ.28ರ ಸಂತೋಷನಗರ ಬಡಾವಣೆಯ ಸರ್ವೆ ನಂ.384/01/ಎ ಸಿಎ ನಿವೇಶನದಲ್ಲಿ ಮಂಜೂರಾಗಿರುವ ಸರ್ಕಾರಿ ಪ್ರೌಢ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ನಗರ ಶಾಸಕ ಡಾ.ಎನ್‌.ಶಿವರಾಜ್‌ ಪಾಟೀಲ ಜಿಲ್ಲಾಧಿಕಾರಿಗೆ ಸೋಮವಾರ ಪತ್ರಕೊಟ್ಟಿದ್ದಾರೆ.

‘ನನ್ನ ಗಮನಕ್ಕೆ ತರದೇ ಸರ್ಕಾರಿ ಪ್ರೌಢ ಶಾಲೆಗೆ ನಿವೇಶನ ಮಂಜೂರು ಮಾಡಲಾಗಿದೆ. ಈ ಶಾಲೆಗೆ ಬೇರೆ ಬಡಾವಣೆಯಲ್ಲಿ ಜಾಗ ಗುರುತಿಸಬೇಕು. ಮುಂದಿನ ತೀರ್ಮಾನ ತೆಗೆದುಕೊಳ್ಳುವ ವರೆಗೂ ಶಾಲೆಗೆ  ನಿವೇಶನ ಮಂಜೂರು ಮಾಡಿದ ಆದೇಶವನ್ನು ಹಿಂದಕ್ಕೆ ಪಡೆಯಬೇಕು‘ ಎಂದು ಮನವಿಯಲ್ಲಿ ಬರೆದಿದ್ದಾರೆ.

ಪತ್ರದ ಪ್ರತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೂ ಕಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಜನವರಿ 29ರಂದು ಪತ್ರ ಪಡೆದು ಸ್ವೀಕೃತಿಯ ಶೀಲ್‌ ಹಾಕಿಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT