ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲ್ಲಿ ಬಿದ್ದಿದ್ದ ಉ‍ಪಾಹಾರ ಸೇವನೆ: 50 ಮಕ್ಕಳು ಅಸ್ವಸ್ಥ

Published 24 ಜುಲೈ 2024, 16:44 IST
Last Updated 24 ಜುಲೈ 2024, 16:44 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ಚಂದ್ರಬಂಡಾ ರಸ್ತೆಯ ಗಿಲ್ಲೆಸೂಗೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಬೆಳಿಗ್ಗೆ ಹಲ್ಲಿ ಬಿದ್ದಿದ್ದ ಉಪಾಹಾರ ಸೇವಿಸಿ 50 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ವಸತಿ ಶಾಲೆಯಲ್ಲಿ ಬೆಳಿಗ್ಗೆ ಫುಲಾವ್‌ ಸೇವಿಸಿದ ಕೆಲ ಹೊತ್ತಿನಲ್ಲೇ ಕೆಲವು ಮಕ್ಕಳು ವಾಂತಿ ಮಾಡಲು ಶುರು ಮಾಡಿದರು. ಉಪಾಹಾರ ಪಾತ್ರೆ ಪರಿಶೀಲಿಸಿದಾಗ ಹಲ್ಲಿ ಬಿದ್ದಿದ್ದು ಕಂಡುಬಂತು. ತಕ್ಷಣವೇ ವಸತಿ ಶಾಲೆ ಸಿಬ್ಬಂದಿ ಮಕ್ಕಳನ್ನು ರಿಮ್ಸ್‌ ಆಸ್ಪತ್ರೆಗೆ ದಾಖಲಿಸಿದರು. ಮಕ್ಕಳಲ್ಲಿ ವಾಂತಿ–ಭೇದಿ ಕಾಣಿಸಿಕೊಂಡ ಕಾರಣ ವೈದ್ಯಕೀಯ ಸಿಬ್ಬಂದಿ ತಕ್ಷಣ ಚಿಕಿತ್ಸೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಆಸ್ಪತ್ರೆಗೆ ಭೇಟಿ ಕೊಟ್ಟು ಮಕ್ಕಳ ಆರೋಗ್ಯ ವಿಚಾರಿಸಿದರು. ಸಂಜೆ ವೇಳೆಗೆ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಪಾಲಕರು ಆಸ್ಪತ್ರೆಗೆ ಬಂದು ಮಕ್ಕಳ ಆರೋಗ್ಯ ವಿಚಾರಿಸಿದರು. ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮಕ್ಕಳು ತೊಂದರೆ ಅನುಭವಿಸಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಇಂಥ ಘಟನೆಗಳು ನಿರಂತವಾಗಿ ನಡೆಯುತ್ತಿವೆ. ವಾರ್ಡನ್‌ಗಳು ಸರಿಯಾಗಿ ಮೇಲ್ವಿಚಾರಣೆ ನಡೆಸದೇ ಇರುವುದೇ ಇದಕ್ಕೆ ಕಾರಣ. ಜಿಲ್ಲಾಧಿಕಾರಿ ಅನಿರೀಕ್ಷಿತವಾಗಿ ಹಾಸ್ಟೆಲ್‌ಗಳಿಗೆ ಭೇಟಿ ಕೊಟ್ಟು ಪರಿಶೀಲಿಸುತ್ತಿದ್ದರೆ ವಸತಿ ನಿಲಯಗಳ ಸಿಬ್ಬಂದಿಗೆ ಚುರುಕು ಮುಟ್ಟಲಿದೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ಅಜೀಜ್ ಜಾಗಿರದಾರ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT