ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಲು ಕೇಂದ್ರ ನೀತಿ ರೂಪಿಸಲಿ:ಮಂತ್ರಾಲಯಶ್ರೀ

Published : 22 ಸೆಪ್ಟೆಂಬರ್ 2024, 17:31 IST
Last Updated : 22 ಸೆಪ್ಟೆಂಬರ್ 2024, 17:31 IST
ಫಾಲೋ ಮಾಡಿ
Comments

ರಾಯಚೂರು: ‘ಧಾರ್ಮಿಕ ದತ್ತಿ ಇಲಾಖೆಯಿಂದ ಧಾರ್ಮಿಕ ಕ್ಷೇತ್ರಗಳನ್ನು ಮುಕ್ತವಾಗಿಡಬೇಕು. ಧರ್ಮಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಲು ಹಾಗೂ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ದಿಸೆಯಲ್ಲಿ ಕೇಂದ್ರ ಸರ್ಕಾರ ಏಕರೂಪದ ನೀತಿಯನ್ನು ರೂಪಿಸಬೇಕು’ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ  ಹೇಳಿದರು.

ನಗರದಲ್ಲಿ ಭಾನುವಾರ ಸಂಜೆ ಅಸ್ಕಿಹಾಳ ಗೋವಿಂದದಾಸರ ಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ ಗೋವಿಂದ ಗಾನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಧರ್ಮಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪದಿಂದಾಗಿ ಅವುಗಳ ಪಾವಿತ್ರ್ಯತೆಗೂ ಧಕ್ಕೆ ಬರುತ್ತಿದೆ. ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬೆರೆಸಿರುವುದು ಖಂಡನೀಯ. ದೇಶದ ಪ್ರಸಿದ್ಧ ದೇವಸ್ಥಾನದ ಪ್ರಸಾದ ನೀಡುವ ತಿರುಪತಿ ತಿಮ್ಮಪ್ಪ ಸನ್ನಿಧಾನದಲ್ಲಿಯೇ ಇಂತಹ ಕೃತ್ಯ ನಡೆದಿದ್ದು ವಿಷಾದನೀಯ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ವಿಷಾದ ವ್ಯಕ್ತಪಡಿಸಿದ್ದಾರೆ. ಆಂಧ್ರಪ್ರದೇಶದ ‌ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತನಿಖೆಗೆ ಆದೇಶ ಮಾಡಿದ್ದು ಶ್ಲಾಘನೀಯ’ ಎಂದರು.

‘ತಿರುಪತಿ ತಿಮ್ಮಪ್ಪ ದೇವಸ್ಥಾನದಿಂದ ನೀಡುವ ಪ್ರಸಾದದಲ್ಲಿ ಕಲಬೆರಕೆಗೆ ಸಂಬಂಧಿಸಿದಂತೆ ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

‘ರಾಘವೇಂದ್ರ ರಾಯರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ತಿರುಪತಿ ತಿರುಮಲ ದೇವಸ್ಥಾನದಿಂದ ಶ್ರೀವಾರಿ ವಸ್ತ್ರ ಹಾಗೂ ಲಡ್ಡು ಪ್ರಸಾದ ಬಂದಿತ್ತು. ಆದರೆ, ಶ್ರೀಮಠದಲ್ಲಿ ಶ್ರೀವಾರಿ ವಸ್ತವನ್ನೇ ಪ್ರಸಾದ ರೂಪದಲ್ಲಿ ರಾಯರಿಗೆ ಅರ್ಪಿಸುವ ಸಂಪ್ರದಾಯವಿದೆ‘ ಎಂದು ಸ್ಪಷ್ಟಪಡಿಸಿದರು.

‘ಮಂತ್ರಾಲಯಕ್ಕೆ ಕರ್ನೂಲ್‌ನ ವಿಜಯ ಡೇರಿಯ ತುಪ್ಪ ಪೂರೈಕೆಯಾಗುತ್ತದೆ. ಇನ್ನು ತುಪ್ಪದ ಶುದ್ಧತೆ ಪರೀಕ್ಷಿಸಿದ ಪ್ರಮಾಣಪತ್ರ ನೀಡಿದ ನಂತರವೇ ತುಪ್ಪ ಪೂರೈಸುವಂತೆ ಡೇರಿ ಆಡಳಿತಕ್ಕೆ ಸೂಚಿಸಲಾಗುವುದು. ಶ್ರೀಮಠದಲ್ಲೇ ಪರಿಮಳ ಪ್ರಸಾದ ಸಿದ್ಧಪಡಿಸಲಾಗುತ್ತಿದೆ. ಆದರೆ, ಮಠದ ವ್ಯವಸ್ಥೆಯಲ್ಲಿ ತುಪ್ಪ ಪರಿಶುದ್ಧತೆಯ ಲ್ಯಾಬ್‌ ತೆರೆಯಲಾಗದು‘ ಎಂದು ಹೇಳಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಆಯಾ ಮಠಮಾನ್ಯಗಳ ನಿರ್ವಹಣೆ ಸ್ಥಳೀಯರ ವಶದಲ್ಲಿತ್ತು. ಈಗ ಲೌಕಿಕ ಕಾನೂನುಗಳು ಆಡಳಿತ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಆಯಾ ಊರಿನ ದೇವಸ್ಥಾನಗಳು, ಮಠ ಮಾನ್ಯಗಳು ಆಯಾ ಪ್ರಾಂತ್ಯದ ಜನರ, ಭಕ್ತರ ನೇತೃತ್ವದಲ್ಲಿಯೇ ವ್ಯವಸ್ಥೆ ನಡೆಯಬೇಕು‘ ಎಂದು ರಾಷ್ಟ್ರ ಧರ್ಮ ಪಾಲನೆ‌ ಸಮಿತಿಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT