ರಾಮನಗರದ ಮಂಡಿಪೇಟೆ ರಸ್ತೆಯಲ್ಲಿರುವ ದೊಡ್ಡ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿರುವುದು
ಕೆಸರಿನ ರಾಡಿಯಾಗಿರುವ ರಾಮನಗರ ಮಂಡಿಪೇಟೆ ರಸ್ತೆ
ನಗರದ ಗುಂಡಿಗಳು ಹದಗೆಟ್ಟಿರುವುದರ ಹೊಣೆಯನ್ನು ನಗರಸಭೆಯೇ ಹೊರಬೇಕು. ಜನರಿಂದ ತೆರಿಗೆ ಕಟ್ಟಿಸಿಕೊಳ್ಳಲು ತೋರುವ ಉತ್ಸಾಹವನ್ನು ರಸ್ತೆ ಸೇರಿದಂತೆ ಮೂಲಸೌಕರ್ಯ ಒದಗಿಸುವಲ್ಲೂ ತೋರಬೇಕು
ಪ್ರಸನ್ನ ಗಾಂಧಿನಗರ ನಿವಾಸಿ
ಜನ ಕೇಳುವುದೇ ರಸ್ತೆ ನೀರು ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ. ನಗರಸಭೆಯವರು ಈ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ತಮ್ಮ ಕರ್ತವ್ಯ ಮೆರೆಯಬೇಕು
ವಿಶ್ವಾಸ್ ಆರ್.ಕೆ ರಂಗರಾಯನದೊಡ್ಡಿ ನಿವಾಸಿ
ಗುಂಡಿ ಮುಚ್ಚಲು ‘ನೀತಿ ಸಂಹಿತೆ’ ಅಡ್ಡಿ
‘ನಗರದಲ್ಲಿ ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ವಾರ್ಡ್ ಮಟ್ಟದಲ್ಲಿ ನಡೆಯುತ್ತಿದ್ದ ಕೆಲಸವು ಇದೀಗ ಚುನಾವಣೆ ನೀತಿ ಸಂಹಿತೆಯಿಂದಾಗಿ ನಿಂತಿದೆ. ಆದರೂ ವಾಹನಗಳ ಸಂಚಾರಕ್ಕೆ ತೀರಾ ತೊಂದರೆ ಇರುವೆಡೆ ಆದ್ಯತೆ ಮೇರೆಗೆ ದುರಸ್ತಿ ಮಾಡಲಾಗುವುದು. ನಗರಕ್ಕೆ 24X7 ಕುಡಿಯುವ ನೀರು ಪೂರೈಕೆ ಯೋಜನೆಯಿಂದಾಗಿ ಬಹುತೇಕ ರಸ್ತೆಗಳನ್ನು ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿಯವರು (ಕೆಯುಡಬ್ಲ್ಯೂಎಸ್‌ಎಸ್‌ಡಿಬಿ) ಅಗೆದಿದ್ದಾರೆ. ನೀರು ಪೂರೈಕೆ ಸಂಪೂರ್ಣ ಕಾರ್ಯಗತವಾದ ಬಳಿಕ ಅವರು ಗುಂಡಿಗಳನ್ನು ಪೂರ್ಣವಾಗಿ ಮುಚ್ಚಲಿದ್ದಾರೆ. ಬಳಿಕ ಎಲ್ಲಾ ಹದಗೆಟ್ಟ ರಸ್ತೆಗಳು ದುರಸ್ತಿಯಾಗಲಿವೆ’ ಎಂದು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ರಸ್ತೆಗೆ ಕಂಟಕವಾದ ಯೋಜನೆ
ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಎಸ್‌ಡಿಬಿ) ಕೈಗೊಂಡಿರುವ 24X7 ಕುಡಿಯುವ ನೀರು ಯೋಜನೆಯು ನಗರದ ರಸ್ತೆಗಳಿಗೆ ಕಂಟಕವಾಗಿದೆ. ಐದು ವರ್ಷಗಳ ಹಿಂದೆ ಶುರುವಾದ ಯೋಜನೆಯು ಇದೀಗ ಅಂತಿಮ ಘಟ್ಟಕ್ಕೆ ಬಂದಿದೆ. ಆದರೆ ಅಂದಿನಿಂದಲೂ ನಗರದ ರಸ್ತೆಗಳ ಸ್ಥಿತಿ ಬದಲಾಗಿಲ್ಲ. ಸದ್ಯ ನೀರು ಪೂರೈಕೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಅಧಿಕೃತವಾಗಿ ಮನೆಗಳಿಗೆ ನೀರು ಹರಿಯಲಾರಂಭಿಸಿದ ಬಳಿಕ ಮಂಡಳಿಯವರು ತಾವು ಅಗೆದು ಹದಗೆಡಿಸಿರುವ ರಸ್ತೆಯನ್ನು ದುರಸ್ತಿ ಮಾಡಬೇಕಿದೆ. ಅಲ್ಲಿಯವರೆಗೆ ಈ ರಸ್ತೆಗಳ ಸ್ಥಿತಿ ಬದಲಾಗದು. ಅಗೆದ ರಸ್ತೆಗಳನ್ನು ಮುಚ್ಚುವುದಕ್ಕಾಗಿಯೇ ಮಂಡಳಿಯು ಹಣವನ್ನು ಮೀಸಲಿಟ್ಟಿದೆ.