ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಹಂದಿ ಸಾಕಾಣೆ ಸ್ಥಳದಲ್ಲಿ ದುರ್ನಾತ

ಸ್ಥಳಾಂತರಕ್ಕೆ ಅರ್ಕಾವತಿ ಬಡಾವಣೆ ನಿವಾಸಿಗಳ ಒತ್ತಾಯ
Published 16 ಜುಲೈ 2024, 5:26 IST
Last Updated 16 ಜುಲೈ 2024, 5:26 IST
ಅಕ್ಷರ ಗಾತ್ರ

ರಾಮನಗರ: ನಗರದ ಎರಡನೇ ವಾರ್ಡ್‌ ಅರ್ಕಾವತಿ ಬಡಾವಣೆಯ ಜನವಸತಿ ಜಾಗದಲ್ಲಿರುವ ಹಂದಿಗಳ ಸಾಕಾಣಿಕೆ ಸ್ಥಳವು ದುರ್ನಾತ ಬೀರುತ್ತಿದೆ. ಇದರಿಂದಾಗಿ, ಸ್ಥಳೀಯವರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಬಡಾವಣೆಯ ಅನೈರ್ಮಲ್ಯಕ್ಕೂ ಕಾರಣವಾಗಿರುವ ಹಂದಿ ಸಾಕಾಣಿಕೆ ಸ್ಥಳವನ್ನು ನಗರಸಭೆಯವರು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸುಮಾರು 20 ವರ್ಷಗಳಿಂದ ಬಡಾವಣೆಯಲ್ಲಿ ಹಂದಿಗಳ ಸಾಕಾಣಿಕೆ ನಡೆಯುತ್ತಿದೆ. ಹಿಂದೆ ಇಲ್ಲಿ ಕಡಿಮೆ ಮನೆಗಳಿದ್ದಿದ್ದರಿಂದ ಅಷ್ಟೊಂದು ಸಮಸ್ಯೆ ಇರಲಿಲ್ಲ. ಈಗ ಸುತ್ತಲೂ ಮನೆಗಳು ನಿರ್ಮಾಣವಾಗಿವೆ. ಹಂದಿಗಳ ಸಾಕಾಣಿಕೆ ಮಾಡುವವರು ಹಂದಿಗಳ ಗೊಬ್ಬರವನ್ನು ಸರಿಯಾಗಿ ವಿಲೇವಾರಿ ಮಾಡದಿರುವುದರಿಂದ ಇಡೀ ಬಡಾವಣೆಯಲ್ಲಿ ಗಬ್ಬುನಾತ ಬೀರುತ್ತಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಕಳೆದೆರಡು ತಿಂಗಳುಗಳಿಂದ ದುರ್ನಾತ ಹೆಚ್ಚಾಗಿದ್ದು, ವಾಕರಿಕಗೆ ಬರುತ್ತಿದೆ. ಮೂಗು ಹಿಡಿದುಕೊಂಡು ಮನೆಯಿಂದ ಹೊರಗಡೆ ಕಾಲಿಡಬೇಕಾದ ಸ್ಥಿತಿ ಇದೆ. ದುರ್ವಾಸನೆ ಕಾರಣಕ್ಕೆ ಮನೆ ಬಾಗಿಲು ಮತ್ತು ಕಿಟಕಿಯನ್ನು ಮುಚ್ಚಿಕೊಂಡೇ ಇರಬೇಕಾಗಿದೆ. ಮನೆಯೊಳಗೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಸಾಂಕ್ರಾಮಿಕ ರೋಗ ಭೀತಿ: ಹಂದಿಗಳು ಬಡಾವಣೆಯಲ್ಲಿ ಕಸ ಎಸೆಯುವ ಜಾಗ, ಚರಂಡಿ ಸೇರಿದಂತೆ ವಿವಿಧೆಡೆ ಓಡಾಡುತ್ತಾ ಅನೈರ್ಮಲ್ಯಕ್ಕೆ ಕಾರಣವಾಗಿವೆ. ಸಾಕಾಣಿಕೆ ಕೇಂದ್ರದಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಆತಂಕದಲ್ಲೇ ಸ್ಥಳೀಯರು ಬದುಕು ಸಾಗಿಸುತ್ತಿದ್ದೇವೆ ಎಂದು ಹೇಳಿದರು.

ಬೆಂಗಳೂರು– ಮೈಸೂರು ರಸ್ತೆಯ ಮಗ್ಗಲಲ್ಲೇ ಅರ್ಕಾವತಿ ಬಡಾವಣೆ ಇದೆ. ಐಜೂರು, ಗ್ರಾಮಾಂತರ, ಮಹಿಳಾ ಪೊಲೀಸ್ ಠಾಣೆಗಳು ಹಾಗೂ ಪೊಲೀಸರ ವಸತಿ ಸಮುಚ್ಚಯವೂ ಪಕ್ಕದಲ್ಲೇ ಇವೆ. ಜೊತೆಗೆ ನ್ಯಾಯಾಧೀಶರುಗಳ ವಸತಿ ಗೃಹವೂ ಸಮೀಪದಲ್ಲಿದೆ. ಅರ್ಕಾವತಿ ಬಡಾವಣೆ ಪ್ರತಿಷ್ಠಿತ ಬಡಾವಣೆ ಎನಿಸಿಕೊಂಡಿದ್ದರೂ, ಇಲ್ಲಿರುವ ಹಂದಿ ಸಾಕಾಣಿಕ ಕೇಂದ್ರದ ದುರ್ನಾತವು ನಮ್ಮ ಬದುಕನ್ನು ನರಕಯಾತನೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿಗಳಾದ ಪುಟ್ಟ ಅಂಕಮ್ಮ, ಲಿಂಗರಾಜು, ನಿರ್ಮಲ, ಲತಾ, ಲಕ್ಷ್ಮಿ, ಕಲಾ, ಸುಮ, ಪುಷ್ಪಲತಾ, ಪಾರ್ವತಮ್ಮ, ಪಾರ್ಥ ಹಾಗೂ ಇತರರು ಇದ್ದರು.

ಡಿ.ಸಿ ಕಚೇರಿ ಎದುರು ಧರಣಿ ಎಚ್ಚರಿಕೆ

ದುರ್ನಾತ ಬೀರುವ ಹಂದಿ ಸಾಕಾಣಿಕೆಯನ್ನು ಬೇರೆಡೆಗ ಸ್ಥಳಾಂತರಿಸುವಂತೆ ಕಳೆದ ಹತ್ತು ವರ್ಷಗಳಿಂದ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ನಗರಸಭೆಯವರು ಕೂಡಲೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ನಂತರ ಸ್ಥಳಾಂತರ ಮಾಡುವವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಸ್ಥಳೀಯರೆಲ್ಲರೂ ಧರಣಿ ನಡೆಸುತ್ತೇವೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT